

IND vs SA Final: ಇಂದು (ನ.02) ನವಿ ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 52 ರನ್ಗಳಿಂದ ಗೆದ್ದ ಹರ್ಮನ್ಪ್ರೀತ್ ಕೌರ್ ಪಡೆ, ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹರಿಣರು, ಹರ್ಮನ್ಪ್ರೀತ್ ಕೌರ್ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. 50 ಓವರ್ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ ಭಾರತ 298 ರನ್ ಕಲೆಹಾಕಿತು. ತಂಡದ ಪರ ಬ್ಯಾಟರ್ಗಳಾದ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ ಉತ್ತಮ ಬ್ಯಾಟಿಂಗ್ ಕೊಡುಗೆ ನೀಡಿದರು. ಈ ಬೃಹತ್ ರನ್ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಕಕ್ಕೆ ಆರಂಭಿಕ ಬ್ಯಾಟ್ಸ್ವುಮನ್ ಲೌರಾ ವೋಲ್ವಾರ್ಡಟ್ (101 ರನ್) ಅವರ ಶತಕದಾಟ ಬಿಟ್ಟರೆ ಇನ್ಯಾರ ಪ್ರದರ್ಶನವೂ ಸಾಥ್ ನೀಡಲಿಲ್ಲ. ಇದು ತಂಡದ ಸೋಲಿಗೆ ಮುಖ್ಯ ಕಾರಣವಾಯಿತು.
ಇನ್ನು ಭಾರತ ಪರ ಬೌಲಿಂಗ್ನಲ್ಲಿಯೂ ಕಮಾಲ್ ಮಾಡಿದ ದೀಪ್ತಿ ಶರ್ಮಾ 5 ವಿಕೆಟ್ ಕಬಳಿಸಿದರೆ, ಶೆಫಾಲಿ ವರ್ಮಾ 2 ವಿಕೆಟ್ ಮತ್ತು ನಲ್ಲಾಪುರೆಡ್ಡಿ ಚರಣಿ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆರಂಭದಲ್ಲಿ ಬ್ಯಾಟ್ ಮಾಡಿದ ಭಾರತಕ್ಕೆ, ಸ್ಮೃತಿ ಮಂಧಾನ (58 ಎಸೆತಕ್ಕೆ 45 ರನ್) ಮತ್ತು ಶೆಫಾಲಿ (78 ಎಸೆತ, 87 ರನ್) ಅವರ ಇನ್ನಿಂಗ್ಸ್ ತಂಡದ ಬೃಹತ್ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತು. ನಂತರದಲ್ಲಿ ಕ್ರೀಸ್ಗಿಳಿದ ದೀಪ್ತಿ ಶರ್ಮಾ (58 ಎಸೆತ, 58 ರನ್) ಅದ್ಭುತ ರನ್ ಕೊಡುಗೆ ನೀಡುವ ಮೂಲಕ ತಂಡದ ಒಟ್ಟು ಮೊತ್ತವನ್ನು 250ರ ಗಡಿದಾಟಿಸಿದರು.