

ಪುಣೆ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಾರಂಭ ಕಂಡಿತು. ಎಂಸಿಎ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 66 ರನ್ಗಳಿಂದ ಜಯ ದಾಖಲಿಸಿತು. ತವರು ನೆಲದಲ್ಲಿ ಟೆಸ್ಟ್, ಟಿ20 ಸರಣಿಯಲ್ಲಿ ಆರಂಭಿಕ ಹಿನ್ನಡೆಯಿಂದ ಮೇಲೆದ್ದಿದ್ದ ವಿರಾಟ್ ಕೊಹ್ಲಿ ಪಡೆ, ಏಕದಿನ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿ ಆರಂಭಿಕ ಮೇಲುಗೈ ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಅನುಭವಿ ಆರಂಭಿಕ ಶಿಖರ್ ಧವನ್ (98 ರನ್, 106 ಎಸೆತ, 11 ಬೌಂಡರಿ, 2 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ಕೆಎಲ್ ರಾಹುಲ್ (62* ರನ್ 43 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಕೃನಾಲ್ ಪಾಂಡ್ಯ (58*ರನ್, 31 ಎಸೆತ, 7 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ನಿಂದ 5 ವಿಕೆಟ್ಗೆ 317 ರನ್ ಪೇರಿಸಿತು. ಪ್ರತಿಯಾಗಿ, ಜಾನಿ ಬೇರ್ ಸ್ಟೋ (94 ರನ್, 66 ಎಸೆತ, 6 ಬೌಂಡರಿ, 7 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ನಡುವೆಯೂ ಕನ್ನಡಿಗ ಪ್ರಸಿದ್ಧ ಕೃಷ್ಣ (54ಕ್ಕೆ 4) ಹಾಗೂ ಶಾರ್ದೂಲ್ ಠಾಕೂರ್ (37ಕ್ಕೆ 3) ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್ 42.1 ಓವರ್ಗಳಲ್ಲಿ 251 ರನ್ಗಳಿಗೆ ಸರ್ವಪತನ ಕಂಡಿತು.
ಭಾರತ: 5 ವಿಕೆಟ್ಗೆ 317 (ರೋಹಿತ್ ಶರ್ಮ 28, ಶಿಖರ್ ಧವನ್ 98, ವಿರಾಟ್ ಕೊಹ್ಲಿ 56, ಕೆಎಲ್ ರಾಹುಲ್ 62, ಕೃನಾಲ್ ಪಾಂಡ್ಯ 58, ಬೆನ್ ಸ್ಟೋಕ್ಸ್ 34ಕ್ಕೆ 3, ಮಾರ್ಕ್ ವುಡ್ 75ಕ್ಕೆ 2), ಇಂಗ್ಲೆಂಡ್ : 42.1 ಓವರ್ಗಳಲ್ಲಿ 251 (ಜಾನಿ ಬೇರ್ಸ್ಟೋ 94, ಜೇಸನ್ ರಾಯ್ 46, ಮೊಯಿನ್ ಅಲಿ 30, ಪ್ರಸಿದ್ಧ ಕೃಷ್ಣ 54ಕ್ಕೆ 4, ಶಾರ್ದೂಲ್ ಠಾಕೂರ್ 37ಕ್ಕೆ 3, ಭುವನೇಶ್ವರ್ ಕುಮಾರ್ 30ಕ್ಕೆ 2).