

ದೋಹಾ: ನಾಯಕ ಸುನೀಲ್ ಛೇಟ್ರಿ (79, 92ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ 2023ರ ಏಷ್ಯನ್ ಕಪ್ ಹಾಗೂ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ 2-0 ಗೋಲುಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಸತತ 11 ಪಂದ್ಯಗಳಲ್ಲಿ ಜಯ ಕಾಣದೆ ನಿರಾಸೆ ಅನುಭವಿಸಿದ್ದ ಭಾರತ ತಂಡ ಕಡೆಗೂ ಗೆಲುವಿನ ಹಳಿಗೇರಲು ಯಶಸ್ವಿಯಾಯಿತು. ಅಲ್ಲದೆ, ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾರತ 2015ರ ಬಳಿಕ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ಇ ಗುಂಪಿನಲ್ಲಿ 3ನೇ ಸ್ಥಾನಕ್ಕೇರಿದೆ.
ಈಗಾಗಲೇ ಫಿಫಾ ವಿಶ್ವಕಪ್ ರೇಸ್‌ನಿಂದ ಹೊರಬಿದ್ದಿರುವ ಭಾರತ ತಂಡ, ಏಷ್ಯನ್ ಕಪ್ ಅರ್ಹತಾ ಸುತ್ತಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ತೀವ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲುರಹಿತ ಸಮಬಲ ಸಾಧಿಸಿದ್ದವು. ಬಳಿಕ ದ್ವಿತೀಯಾರ್ಧದಲ್ಲೂ ಭಾರತ ತಂಡ ಪ್ರಬಲ ಪೈಪೋಟಿ ಎದುರಿಸಿತು. ಕಡೇ 10 ನಿಮಿಷ ಭಾರತ ತಂಡ ಪ್ರಬಲ ಪೈಪೋಟಿ ತೋರಿತು. ನಿಗದಿತ ಸಮಯದ ವೇಳೆಗೆ 1-0 ಯಿಂದ ಗೋಲು ದಾಖಲಿಸಿದ್ದ ಭಾರತ, ಇಂಜುರಿ ವೇಳೆಯಲ್ಲೂ ಮತ್ತೊಂದು ಗೋಲು ಬಾರಿಸಿ ಜಯದ ನಗೆ ಬೀರಿತು.
ಮುಂದಿನ ಎದುರಾಳಿ: ಅಫ್ಘಾನಿಸ್ತಾನ
ಯಾವಾಗ: ಜೂನ್ 15