ಆಸ್ಟ್ರೇಲಿಯಾ ಎದುರು ಟಿ20 ಸರಣಿ ಗೆದ್ದ ಭಾರತ

india wins against aus for web
Published on

ಸಿಡ್ನಿ: ಸಂಘಟಿತ ಬ್ಯಾಟಿಂಗ್ ಹೋರಾಟದ ನೆರವಿನಿಂದ ಭಾರತ ತಂಡ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಜಯ ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಯಿಂದ ಮುನ್ನಡೆ ಸಾಧಿಸಿ, ವಶಪಡಿಸಿಕೊಂಡಿತು. ಸಿಡ್ನಿ ಮೈದಾನದಲ್ಲೇ ಅನುಭವಿಸಿದ ಏಕದಿನ ಸರಣಿ ಸೋಲಿಗೆ ಚುಟುಕು ಕ್ರಿಕೆಟ್ ಜಯಿಸುವ ಮೂಲಕ ವಿರಾಟ್ ಕೊಹ್ಲಿ ಬಳಗ ಸೇಡು ತೀರಿಸಿಕೊಂಡಿತು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 5 ವಿಕೆಟ್‌ಗೆ 194 ರನ್ ಪೇರಿಸಿದರೆ, ಪ್ರತಿಯಾಗಿ ಭಾರತ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್ ಗಳಿಸಿ ಜಯದ ನಗೆ ಬೀರಿತು. ಕಡೇ 2 ಓವರ್‌ಗಳಲ್ಲಿ ಟೀಮ್ ಇಂಡಿಯಾ ಜಯ ದಾಖಲಿಸಲು 25 ರನ್‌ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ (42*ರನ್, 22 ಎಸೆತ, 3 ಬೌಂಡರಿ, 2ಸಿಕ್ಸರ್) ಹಾಗೂ ಶ್ರೇಯಸ್ ಅಯ್ಯರ್ (12*ರನ್, 5 ಎಸೆತ, 1 ಬೌಂಡರಿ, 1 ಸಿಕ್ಸರ್) ಜೋಡಿ ಎದುರಿಸಿದ 23 ಎಸೆತಗಳಲ್ಲಿ 46 ರನ್ ಪೇರಿಸಿ ಇನ್ನು 2 ಎಸೆತಗಳು ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

* 10: ಭಾರತ ತಂಡ, ಟಿ20 ಕ್ರಿಕೆಟ್‌ನಲ್ಲಿ ತವರಿನ ಹೊರಗೆ ಸತತ 10ನೇ ಜಯ ದಾಖಲಿಸಿತು. ವೆಸ್ಟ್ ಇಂಡೀಸ್‌ನಲ್ಲಿ 3, ನ್ಯೂಜಿಲೆಂಡ್‌ನಲ್ಲಿ 5 ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ 2 ಗೆಲುವು ಸಾಧಿಸಿದೆ.

ಆಸ್ಟ್ರೇಲಿಯಾ: 5 ವಿಕೆಟ್‌ಗೆ 194 (ಮ್ಯಾಥ್ಯೂ ವೇಡ್ 58, ಸ್ಟೀವನ್ ಸ್ಮಿತ್ 46, ಹೆನ್ರಿಕ್ಸ್ 26, ಟಿ.ನಟರಾಜನ್ 20ಕ್ಕೆ 2), ಭಾರತ: 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 195 (ಕೆಎಲ್ ರಾಹುಲ್ 30, ಶಿಖರ್ ಧವನ್ 52, ವಿರಾಟ್ ಕೊಹ್ಲಿ 40, ಹಾರ್ದಿಕ್ ಪಾಂಡ್ಯ 42*, ಶ್ರೇಯಸ್ 12*, ಸ್ಯಾಮ್ಸ್ 41ಕ್ಕೆ 1, ಆ್ಯಂಡ್ರ್ಯೊ ಟೈ 47ಕ್ಕೆ 1, ಮಿಚೆಲ್ ಸ್ವಿಪ್‌ಮನ್ 25ಕ್ಕೆ 1, ಜಂಪಾ 36ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net