ಇಂದು ಭಾರತ-ಪನಾಮಾ ಸೌಹಾರ್ದ ಕಾದಾಟ

3 ವರ್ಷ ಬಳಿಕ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಫುಟ್​ಬಾಲ್​ ಪಂದ್ಯ
football
ಅಭ್ಯಾಸ ನಿರತ ಭಾರತೀಯ ಫುಟ್​ಬಾಲ್ ತಂಡ ವಿಜಯವಾಣಿ ಚಿತ್ರ
Published on: 

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮೂರು ವರ್ಷಗಳ ನಂತರ "ಬ್ಲೂ ಟೈಗರ್ಸ್​' ಭಾರತ ಫುುಟ್​ಬಾಲ್​ ತಂಡ ಉದ್ಯಾನನಗರಿಯಲ್ಲಿ ಆಡಲು ಸಜ್ಜಾಗಿದ್ದು, ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಫಿಫಾ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಪನಾಮಾ ಎದುರು ಕಣಕ್ಕಿಳಿಯಲಿದೆ. ಫಿಫಾ ರ್ಯಾಂಕಿಂಗ್​ನ 44ನೇ ಸ್ಥಾನಿ ಪನಮಾ 2018, 2026ರ ವಿಶ್ವಕಪ್​ನಲ್ಲಿ ಆಡಿದ ಅನುಭವ ಹೊಂದಿದೆ.

2023ರ ಸ್ಯಾಫ್​ ಚಾಂಪಿಯನ್​ಷಿಪ್ ಫೈನಲ್​ನಲ್ಲಿ ಕೊನೆಯದಾಗಿ ಬೆಂಗಳೂರಿನಲ್ಲಿ ಆಡಿದ್ದ ಭಾರತ ಫಿಫಾ ರ್ಯಾಂಕಿಂಗ್​ನಲ್ಲಿ 138ನೇ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವೆ ಮೊದಲ ಸೌಹಾರ್ದ ಪಂದ್ಯ ಇದಾಗಿದ್ದು, ಏಷ್ಯನ್​ ಟೂರ್ನಿಗಳಲ್ಲಿ ಸಾಧಾರಣ ನಿರ್ವಹಣೆ ತೋರಿರುವ ಭಾರತ ತಂಡಕ್ಕೆ ಕಠಿಣ ಪೈಪೋಟಿ ಎದುರಾಗಲಿದೆ. ಪನಾಮಾ ನಂತರ ಐದು ಬಾರಿಯ ವಿಶ್ವ ಚಾಂಪಿಯನ್​ ಬ್ರೆಜಿಲ್​ ಹಾಗೂ ಎರಡು ಬಾರಿಯ ಚಾಂಪಿಯನ್​ ಉರುಗ್ವೆ ಎದುರು ಭಾರತ ಕಣಕ್ಕಿಳಿಯಲಿದೆ.

ಬ್ರೆಜಿಲ್​ ಹಾಗೂ ಉರುಗ್ವೆ ಜತೆಗೆ ಪನಾಮಾ ವಿರುದ್ಧ ಪಂದ್ಯವೂ ಭಾರತೀಯ ಆಟಗಾರರಿಗೆ ಉತ್ತಮ ಕಲಿಕೆ ಎನಿಸಲಿದೆ ಎಂದು ಮುಖ್ಯಕೋಚ್​ ಖಾಲಿದ್​ ಜಮೀಲ್​ ಅಭಿಪ್ರಾಯಪಟ್ಟಿದ್ದಾರೆ. ಡಿಫೆಂಡರ್​ ಅನ್ವರ್​ ಅಲಿ ಹಾಗೂ ಮಿಡ್​ ಫೀಲ್ಡರ್​ಗಳಾದ ಸಹಲ್​ ಅಬ್ದುಲ್​ ಸಮದ್​ ಜತೆಗೆ ಫಾರ್ವರ್ಡ್​ಗಳಾದ ಮನ್ವೀರ್​ ಸಿಂಗ್​, ರಹೀಮ್​ ಅಲಿ ಭಾರತದ ಪ್ರಮುಖ ತಾರೆಯರೆನಿಸಿದ್ದಾರೆ. ಫಿಫಾ ವಿಶ್ವಕಪ್​ನಲ್ಲಿ ಆಡಿದ 14 ಆಟಗಾರರ ಜತೆಗೆ ವಿದೇಶೀ ಲೀಗ್​ಗಳಲ್ಲಿ ಆಡಿದ ಒಟ್ಟು 22 ಆಟಗಾರರ ಬಲ ಪನಾಮಾ ಹೊಂದಿದೆ.

ಆರಂಭ: ರಾತ್ರಿ 7.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಸೋನಿ ಲಿವ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net