

ನವದೆಹಲಿ: ಏಕದಿನ ಕ್ರಿಕೆಟ್ನ ವಿಶ್ವ ಚಾಂಪಿಯನ್ ತಂಡವನ್ನು ನಿರ್ಧರಿಸಲು ಭಾರತದಲ್ಲಿ ಅಕ್ಟೋಬರ್ 5ರಿಂದ 13ನೇ ಆವೃತ್ತಿಯ ವಿಶ್ವಕಪ್ ಟೂರ್ನಿ ನಿಗದಿಯಾಗಿದೆ. ಅದಕ್ಕೆ ಮುನ್ನ, ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ನಂ. 1 ತಂಡವಾಗಿ ಕಣಕ್ಕಿಳಿಯಲು ಮೂರು ತಂಡಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಆತಿಥೇಯ ಭಾರತ, ನೆರೆರಾಷ್ಟ್ರ ಪಾಕಿಸ್ತಾನ ಮತ್ತು 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೆಲಿಯಾ ತಂಡಗಳು ಈ ತ್ರಿಕೋನ ಸ್ಪರ್ಧೆಯಲ್ಲಿವೆ.
ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಪ್ರಸಕ್ತ ಪಾಕಿಸ್ತಾನ 119 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆಸೀಸ್ 118 ಅಂಕಗಳೊಂದಿಗೆ ಎರಡು ಮತ್ತು ಭಾರತ 114 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿವೆ. ಇದೀಗ ಭಾರತ, ಪಾಕ್ ಏಷ್ಯಾಕಪ್ನಲ್ಲಿ ಆಡುತ್ತಿದ್ದರೆ, ಆಸೀಸ್ ತಂಡ ದಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ನಂತರ ಭಾರತ-ಆಸೀಸ್ ನಡುವೆಯೂ ಏಕದಿನ ಸರಣಿ ನಡೆಯಲಿದೆ. ಈ ಟೂರ್ನಿ/ಸರಣಿಗಳ ಫಲಿತಾಂಶವು ವಿಶ್ವಕಪ್ನಲ್ಲಿ ಯಾರು ನಂ. 1 ಪಟ್ಟದೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ನಿರ್ಧರಿಸಲಿದೆ.
ಪಾಕಿಸ್ತಾನಕ್ಕೆ ಪಟ್ಟ ಕಾಯುವ ಒತ್ತಡ
ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಕ್ಲೀನ್ಸ್ವೀಪ್ ಮಾಡುವ ಮೂಲಕ ವಿಶ್ವ ನಂ. 1 ಪಟ್ಟ ಒಲಿಸಿಕೊಂಡಿರುವ ಪಾಕ್ಗೆ ಈಗ ಇದನ್ನು ಕಾಯ್ದುಕೊಳ್ಳಲು ಗೆಲುವು ಅನಿವಾರ್ಯ. ಇಲ್ಲದಿದ್ದರೆ ಪಾಕ್ ಸೋಲಿನಿಂದ ಆಸೀಸ್ ಲಾಭ ಪಡೆಯಲಿದೆ. ಏಷ್ಯಾಕಪ್ನಲ್ಲಿ ಇನ್ನು ಉಳಿದಿರುವ ಭಾರತ, ಶ್ರೀಲಂಕಾ ವಿರುದ್ಧದ ಸೂಪರ್-4 ಪಂದ್ಯಗಳು ಮತ್ತು ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆದ್ದರೆ ನಂ. 1 ಪಟ್ಟವನ್ನು ಭದ್ರಪಡಿಸಿಕೊಳ್ಳಬಹುದು. ಆಗ ಆಸೀಸ್ ತಂಡ ದಕ್ಷಿಣ ಆಫ್ರಿಕಾ ಮತ್ತು ಭಾರತ ವಿರುದ್ಧದ ಏಕದಿನ ಸರಣಿಗಳನ್ನು ಗೆದ್ದುಕೊಂಡರೂ, ಪಾಕ್ ಪಟ್ಟವನ್ನು ಅಲುಗಾಡಿಸಲು ಸಾಧ್ಯವಾಗದು.
ಆಸೀಸ್ ಲೆಕ್ಕಾಚಾರ
ಆಸ್ಟ್ರೆಲಿಯಾಕ್ಕೆ ನಂ. 1 ಪಟ್ಟಕ್ಕೇರಲು ಗೆಲುವಿನ ಜತೆಗೆ ಪಾಕಿಸ್ತಾನದ ಸೋಲು ಕೂಡ ಅಗತ್ಯವಾಗಿದೆ. ಏಷ್ಯಾಕಪ್ನಲ್ಲಿ ಪಾಕಿಸ್ತಾನ ತಂಡ ಇನ್ನು ಒಂದು ಪಂದ್ಯವನ್ನು ಸೋತರೂ, ಆಸ್ಟ್ರೆಲಿಯಾ ತಂಡ ದಕ್ಷಿಣ ಆಫ್ರಿಕಾ ಮತ್ತು ಭಾರತ ವಿರುದ್ಧದ ಏಕದಿನ ಸರಣಿಗಳನ್ನು ಗೆದ್ದುಕೊಳ್ಳುವ ಮೂಲಕ ವಿಶ್ವ ನಂ. 1 ಪಟ್ಟಕ್ಕೆ ಮರಳಬಹುದಾಗಿದೆ. ಆದರೆ ಎರಡರಲ್ಲಿ ಒಂದು ಸರಣಿ ಸೋತರೂ ಆಸ್ಟ್ರೆಲಿಯಾಕ್ಕೆ ನಂ. 1 ಪಟ್ಟ ಒಲಿಸಿಕೊಳ್ಳುವುದು ಕಷ್ಟವಾಗಲಿದೆ.
ಭಾರತಕ್ಕೆ ಕಠಿಣ ಹಾದಿ
ಪಾಕಿಸ್ತಾನ ಮತ್ತು ಆಸ್ಟ್ರೆಲಿಯಾ ತಂಡಗಳಿಗೆ ಹೋಲಿಸಿದರೆ ಭಾರತ ತಂಡ, ತವರಿನ ವಿಶ್ವಕಪ್ನಲ್ಲಿ ವಿಶ್ವ ನಂ. 1 ತಂಡವಾಗಿ ಕಣಕ್ಕಿಳಿಯಲು ಸ್ವಲ್ಪ ಹೆಚ್ಚು ಶ್ರಮಪಡಬೇಕಾಗುತ್ತದೆ ಮತ್ತು ಅನುಕೂಲಕರ ಫಲಿತಾಂಶದೊಂದಿಗೆ ಅದೃಷ್ಟದ ನೆರವು ಕೂಡ ಬೇಕಾಗುತ್ತದೆ. ಭಾರತ ತಂಡ ಏಷ್ಯಾಕಪ್ನಲ್ಲಿ ಉಳಿದೆಲ್ಲ ಪಂದ್ಯ ಮತ್ತು ಆಸೀಸ್ ವಿರುದ್ಧದ ಸರಣಿ ಗೆದ್ದು ನಂ.1 ಪಟ್ಟಕ್ಕೇರಬಹುದಾಗಿದೆ. ಆದರೆ ಇದೇ ವೇಳೆ ಪಾಕಿಸ್ತಾನ ತಂಡ ಏಷ್ಯಾಕಪ್ನಲ್ಲಿ ಸೂಪರ್-4ರ ತನ್ನ ಉಳಿದೆರಡೂ ಪಂದ್ಯ ಸೋಲಬೇಕು ಮತ್ತು ಆಸೀಸ್ ತಂಡ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 3ಕ್ಕಿಂತ ಹೆಚ್ಚು ಪಂದ್ಯ ಗೆಲ್ಲಬಾರದು.