

ದುಬೈ: ವಿಶ್ವ ಕ್ರಿಕೆಟ್ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾನುವಾರ ಎದುರಾಗಿವೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಏಷ್ಯಾದ ಬಲಿಷ್ಠ ತಂಡಗಳ ಕಾಳಗ ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. 10 ತಿಂಗಳ ಹಿಂದಷ್ಟೇ ಇದೇ ಮೈದಾನದಲ್ಲಿ ಪಾಕ್ ಎದುರು ಟಿ20 ವಿಶ್ವಕಪ್ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಕೇವಲ ಪ್ರಮುಖ ಟೂರ್ನಿಗಳಲ್ಲಷ್ಟೇ ಉಭಯ ತಂಡಗಳು ಎದುರಾಗುತ್ತಿದ್ದು, ಉಭಯ ದೇಶಗಳ ರಾಜಕೀಯ ಬಿಕ್ಕಟ್ಟಿನಿಂದಾಗಿ ಕಳೆದ 10 ವರ್ಷಗಳಿಂದ ದ್ವಿಪಕ್ಷೀಯ ಸರಣಿಯಲ್ಲಿ ಆಡಿಲ್ಲ.
ಇದೇ ತಿಂಗಳ ಆರಂಭದಲ್ಲಿ ವೆಸ್ಟ್ ಇಂಡೀಸ್ ಎದುರು ಆಡಿದ ಟಿ20 ಸರಣಿಯನ್ನು ಭಾರತ 4-1 ರಿಂದ ವಶಪಡಿಸಿಕೊಂಡಿತ್ತು. ಪಾಕಿಸ್ತಾನ ತಂಡ ಏಪ್ರಿಲ್ನಲ್ಲಿ ಕಡೇ ಬಾರಿಗೆ ಆಸೀಸ್ ಎದುರು ಆಡಿತ್ತು. ಕಳೆದ 4 ತಿಂಗಳಿಂದ ಟಿ20 ಕ್ರಿಕೆಟ್ ಆಡದ ಪಾಕ್ ಆಟಗಾರರ ಪಾಲಿಗೆ ಈ ಪಂದ್ಯ ಭಾರಿ ಸವಾಲಾಗಿದೆ.
ಭಾರತಕ್ಕೆ ಬಲಾಡ್ಯರ ಬಲ: ವೆಸ್ಟ್ ಇಂಡೀಸ್ ಹಾಗೂ ಜಿಂಜಾಬ್ವೆ ಸರಣಿಯಿಂದ ಹೊರಗುಳಿದಿದ್ದ ಹಿರಿಯ ಆಟಗಾರರು ತಂಡಕ್ಕೆ ಮರಳಿದ್ದು, ಪಾಕಿಸ್ತಾನ ತಂಡದ ಬಲಿಷ್ಠ ಬೌಲಿಂಗ್ ಪಡೆ ಎದುರಿಸಲು ಸಜ್ಜಾಗಿದ್ದಾರೆ. ನಾಯಕ ರೋಹಿತ್ ಶರ್ಮ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಒಳಗೊಂಡ ಬ್ಯಾಟಿಂಗ್ ಪಡೆ ಆತ್ಮವಿಶ್ವಾಸದಲ್ಲಿದೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.
ಪಾಕ್ಗೆ ಬಾಬರ್ ಅಜಮ್ ಟ್ರಂಪ್ ಕಾರ್ಡ್: ಭರ್ಜರಿ ಲಯದಲ್ಲಿರುವ ವಿಶ್ವ ನಂ.1 ಬ್ಯಾಟರ್ ಬಾಬರ್ ಅಜಮ್ ಪಾಕ್ ತಂಡದ ಪ್ರಮುಖ ಟ್ರಂಪ್ ಕಾರ್ಡ್ ಆಗಿದ್ದಾರೆ. ಪ್ರಮುಖ ವೇಗಿ ಶಾಹಿನ್ ಅಫ್ರಿದಿ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಆರಂಭಿಕ ಮೊಹಮದ್ ರಿಜ್ವಾನ್ ಕೂಡ ಉತ್ತಮ ಲಯದಲ್ಲಿದ್ದು, ಅಜಮ್ೆ ಸಾಥ್ ನೀಡುತ್ತಿದ್ದಾರೆ. ಮೂರನೇ ಕ್ರಮಾಂಕ ಫಖರ್ ಜಮಾನ್, ಅಸಿಫ್ ಅಲಿ ಭಾರತದ ಬೌಲರ್ಗಳಿಗೆ ಸವಾಲಾಗಬಲ್ಲರು.
ದಾಖಲೆ ಸನಿಹ ವಿರಾಟ್ ಕೊಹ್ಲಿ
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ 100ನೇ ಟಿ20 ಇದಾಗಲಿದೆ. ಮೂರು ಮಾದರಿಯಲ್ಲೂ 100 ಪಂದ್ಯಗಳನ್ನಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇದುವರೆಗೂ ಆಡಿರುವ 99 ಟಿ20 ಪಂದ್ಯಗಳಿಂದ ಕೊಹ್ಲಿ 30 ಅರ್ಧಶತಕ ಸಿಡಿಸಿದ್ದು, ಸರಾಸರಿ 50.12 ರಂತೆ 3308 ರನ್ ಬಾರಿಸಿದ್ದಾರೆ. ಅಜೇಯ 94 ರನ್ಗಳಿಸಿರುವುದು ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ರೋಹಿತ್ ಶರ್ಮ ಟಿ20 ಕ್ರಿಕೆಟ್ನಲ್ಲಿ ಈಗಾಗಲೇ 132 ಪಂದ್ಯಗಳನ್ನಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನ ತಂಡ ಯುಎಇಯಲ್ಲಿ ಆಡಿರುವ 17 ಟಿ20 ಪಂದ್ಯಗಳ ಪೈಕಿ ಕೇವಲ 1 ಪಂದ್ಯದಲ್ಲಿ ಮಾತ್ರ ಸೋತಿದೆ. 2021ರ ಟಿ20 ವಿಶ್ವಕಪ್ ಟೂರ್ನಿಯ ಸೆಮೀಸ್ನಲ್ಲಿ ಆಸೀಸ್ ಎದುರು ಸೋಲು ಕಂಡಿತ್ತು.
ಟೀಮ್ ನ್ಯೂಸ್
ಭಾರತ: ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಾಹಲ್ ಮೊದಲ ಆಧ್ಯತೆ ಆದರೆ, ಹೆಚ್ಚುವರಿ ಸ್ಪಿನ್ಗೆ ಅವಕಾಶ ನೀಡಿದರೆ ಆರ್.ಅಶ್ವಿನ್ ಅಥವಾ ರವಿ ಬಿಷ್ಣೋಯಿ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಬಹುದು. ಪ್ರಸಕ್ತ ವರ್ಷ ಇದುವರೆಗೂ ಪವರ್ ಪ್ಲೇ ಹಂತದಲ್ಲಿ ಭಾರತ ಕಬಳಿಸಿರುವ 20 ವಿಕೆಟ್ಗಳ ಪೈಕಿ 12 ಭುವನೇಶ್ವರ್ ಪಾಲಾಗಿವೆ.
ಸಂಭಾವ್ಯ ತಂಡ: ರೋಹಿತ್ ಶರ್ಮ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಆವೇಶ್ ಖಾನ್.
ಪಾಕಿಸ್ತಾನ: 2021ರ ಜನವರಿಯಿಂದ ಬಾಬರ್ ಅಜಮ್ರಿಜ್ವಾನ್ ಜೋಡಿ ಆರಂಭಿಕ ಹಂತದಲ್ಲಿ ಸಾವಿರ ರನ್ ಗಳಿಸಿದೆ. ಬೌಲಿಂಗ್ ವಿಭಾಗದಲ್ಲಿ ನಸೀಮ್ ಷಾ ಅಥವಾ ಶಾನಾವಾಜ್ ಧಹನಿ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಬಹುದು.
ಸಂಭಾವ್ಯ ತಂಡ: ಮೊಹಮದ್ ರಿಜ್ವಾನ್, ಬಾಬರ್ ಅಜಮ್ ಫಖರ್ ಜಮಾನ್, ಇಫ್ತಿಖರ್ ಅಹಮದ್, ಖುಶ್ದೀಲ್ ಷಾ, ಅಶಿಫ್ ಅಲಿ, ಮೊಹಮದ್ ಹಸನೈನ್, ಶಾಬಾದ್ ಖಾನ್, ಉಸ್ಮಾನ್ ಖಾದೀರ್, ಹ್ಯಾರಿಸ್ ರೌಫ್, ನಸೀಮ್ ಷಾ/ಶಾನಾವಾಜ್ ಧಹನಿ.