

ಬೆಂಗಳೂರು: ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಮುಂಬೈ ಯುವ ಆರಂಭಿಕ ಪೃಥ್ವಿ ಷಾ ಮತ್ತು ಯುವ ವೇಗಿ ನವದೀಪ್ ಸೈನಿ ಭಾರತ ತಂಡದಲ್ಲಿ ಮರಳಿ ಸ್ಥಾನ ಸಂಪಾದಿಸಿದ್ದಾರೆ. ಗಾಯಾಳು ರೋಹಿತ್ ಶರ್ಮ ಬದಲಿಗೆ ಏಕದಿನ ಸರಣಿಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಥಾನ ಪಡೆದಿದ್ದರೆ, ಟೆಸ್ಟ್ ತಂಡದಲ್ಲಿ ಅವರ ಸ್ಥಾನವನ್ನು ಶುಭಮಾನ್ ಗಿಲ್ ತುಂಬಲಿದ್ದಾರೆ. ಸೀಮಿತ ಓವರ್ ಕ್ರಿಕೆಟ್ನಲ್ಲಿ ಇತ್ತೀಚೆಗೆ ತೋರಿದ ಅದ್ಭುತ ನಿರ್ವಹಣೆಯಿಂದಾಗಿ ಟೆಸ್ಟ್ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ ಕನ್ನಡಿಗ ಕೆಎಲ್ ರಾಹುಲ್ ನಿರಾಸೆ ಅನುಭವಿಸಿದ್ದಾರೆ. ಫೆ. 21ರಂದು ವೆಲ್ಲಿಂಗ್ಟನ್ನಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆಯ ಟೆಸ್ಟ್ನಲ್ಲೇ ಶತಕ ಸಿಡಿಸಿ ಮಿಂಚಿದ್ದ ಪೃಥ್ವಿ ಷಾ, ಕಳೆದ ವರ್ಷ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಕಾರಣ 8 ತಿಂಗಳು ನಿಷೇಧಕ್ಕೊಳಗಾಗಿದ್ದರು. ಇದರಿಂದಾಗಿ ಕಳೆದ ತವರು ಋತುವಿನ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದರು. 2018ರ ಅಕ್ಟೋಬರ್ನಲ್ಲಿ ಅವರು ಭಾರತ ಪರ ಕೊನೇ ಟೆಸ್ಟ್ ಆಡಿದ್ದಾರೆ. ಇದೀಗ ರೋಹಿತ್ ಗೈರಿನಲ್ಲಿ 20 ವರ್ಷದ ಪೃಥ್ವಿ ಷಾ ಟೆಸ್ಟ್ ಸರಣಿಯಲ್ಲೂ ಮಯಾಂಕ್ ಅಗರ್ವಾಲ್ಗೆ ಆರಂಭಿಕ ಜೋಡಿಯಾಗಲಿದ್ದಾರೆ.
ಸೀಮಿತ ಓವರ್ ಕ್ರಿಕೆಟ್ನಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದಾಗಿ 2018ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದ ವೇಗಿ ನವದೀಪ್ ಸೈನಿ ಆಡುವ ಅವಕಾಶ ಪಡೆದಿರಲಿಲ್ಲ. ಈ ನಡುವೆ ಭಾರತ ಪರ 3 ಏಕದಿನ ಮತ್ತು 10 ಟಿ20 ಪಂದ್ಯ ಆಡಿದ್ದು, ಇದೀಗ ಟೆಸ್ಟ್ ತಂಡಕ್ಕೂ ಮರಳಿದ್ದಾರೆ.
ಪಂಜಾಬ್ನ 20 ವರ್ಷದ ಬ್ಯಾಟ್ಸ್ಮನ್ ಶುಭಮಾನ್ ಗಿಲ್, ನ್ಯೂಜಿಲೆಂಡ್ ಎ ವಿರುದ್ಧದ ಸರಣಿಯಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದಾಗಿ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಅವರು ಈ ಹಿಂದೆ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಆಡುವ ಅವಕಾಶ ಗಿಟ್ಟಿಸಿಕೊಂಡಿರಲಿಲ್ಲ. ರಣಜಿಯಲ್ಲಿ ಗಾಯಗೊಂಡಿರುವ ಹಿರಿಯ ವೇಗಿ ಇಶಾಂತ್ ಶರ್ಮ ಫಿಟ್ನೆಸ್ ಟೆಸ್ಟ್ ಪಾಸ್ ಆದರೆ ಮಾತ್ರ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ಅವರು ಸದ್ಯ ಬೆಂಗಳೂರಿನ ಎನ್ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಪೃಥ್ವಿ ಷಾ, ಶುಭಮಾನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ವೃದ್ಧಿಮಾನ್ ಸಾಹ (ವಿ.ಕೀ), ರಿಷಭ್ ಪಂತ್ (ವಿ.ಕೀ), ಆರ್. ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಮೊಹಮದ್ ಶಮಿ, ನವದೀಪ್ ಸೈನಿ, ಇಶಾಂತ್ ಶರ್ಮ (ಫಿಟ್ನೆಸ್ ಪಾಸ್ ಆದರೆ ಮಾತ್ರ).