ಹಸಿರು ಪಿಚ್​ನಲ್ಲಿ ತಿರುಗೇಟಿನ ಹಂಬಲ: ಕ್ರೖೆಸ್ಟ್​ಚರ್ಚ್​ನಲ್ಲಿ ಇಂದಿನಿಂದ ಭಾರತ-ಕಿವೀಸ್ 2ನೇ ಟೆಸ್ಟ್

Sp 1
Published on

ಕ್ರೖೆಸ್ಟ್​ಚರ್ಚ್: ವಿಶ್ವ ನಂ.1 ತಂಡವಾಗಿದ್ದರೂ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್​ಗಳಿಂದ ದೊಡ್ಡ ಅಂತರದ ಸೋಲು ಕಂಡಿರುವ ಭಾರತ ತಂಡ, ತಿರುಗೇಟು ನೀಡುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ಉದ್ದೇಶದೊಂದಿಗೆ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಆಡಲಿದೆ. ಕ್ರೖೆಸ್ಟ್​ಚರ್ಚ್​ನ ಹ್ಯಾಗ್ಲೆ ಓವಲ್ ಮೈದಾನದಲ್ಲಿ ಶನಿವಾರ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಹಸಿರು ಹೊದ್ದು ನಿಂತಿರುವ ಪಿಚ್​ನ ಬಗ್ಗೆ ಸ್ವತಃ ಬಿಸಿಸಿಐ ಅಚ್ಚರಿ ವ್ಯಕ್ತಪಡಿಸಿದೆ.

ವೆಲ್ಲಿಂಗ್ಟನ್​ನ ಪಿಚ್​ನ ಮಾದರಿಯಲ್ಲಿಯೇ ಹ್ಯಾಗ್ಲೆ ಓವಲ್ ಪಿಚ್ ಕೂಡ ಸಂಪೂರ್ಣ ಹಸಿರುಮಯವಾಗಿದ್ದು, ವೇಗದ ಬೌಲರ್​ಗಳಿಗೆ ಇನ್ನಷ್ಟು ನೆರವು ನೀಡಲಿದೆ. ‘ಇಲ್ಲಿ ಪಿಚ್ ಎಲ್ಲಿದೆ ಹುಡುಕಿ’ ಎಂದು ಹ್ಯಾಗ್ಲೆ ಓವಲ್ ಮೈದಾನದ ಹಸಿರು ಪಿಚ್​ಅನ್ನು ಬಿಸಿಸಿಐ ಟ್ವಿಟರ್​ನಲ್ಲಿ ಪ್ರಕಟಿಸಿದೆ. ಈ ನಡುವೆ ವೆಲ್ಲಿಂಗ್ಟನ್ ಟೆಸ್ಟ್​ನಲ್ಲಿ ಭಾರತದ ಹೋರಾಟಕ್ಕೆ ನೆರವು ನೀಡಿದ ವೇಗದ ಬೌಲರ್ ಇಶಾಂತ್ ಶರ್ಮ 2ನೇ ಟೆಸ್ಟ್​ನಿಂದ ಹೊರಬಿದ್ದಿರುವುದು ತಂಡಕ್ಕೆ ಆಘಾತ ನೀಡಿದೆ.

ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆಯಂಥ ಆಟಗಾರರನ್ನು ಹೊಂದಿರುವ ಭಾರತದ ಬ್ಯಾಟಿಂಗ್ ವಿಭಾಗ ಕಿವೀಸ್ ಬೌಲರ್​ಗಳಿಗೆ ಸವಾಲೊಡ್ಡಲಿದೆ ಎಂದು ನಿರೀಕ್ಷೆ ಇಡಲಾಗಿದ್ದರೂ, ಮೊದಲ ಟೆಸ್ಟ್ ನಲ್ಲಿ ಕಿವೀಸ್​ನ ಬೌಲರ್​ಗಳು ಹೆಚ್ಚಿನ ಪ್ರಯತ್ನವಿಲ್ಲದೆ ಇವರ ವಿಕೆಟ್​ಗಳನ್ನು ಪಡೆದಿದ್ದರು. ಇದು ಐಸಿಸಿ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಭಾರತದ ಮೊಟ್ಟ ಮೊದಲ ಸೋಲಿಗೆ ಕಾರಣವಾಗಿತ್ತು.

ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಹಾಗೂ ನೀಲ್ ವ್ಯಾಗ್ನರ್​ರನ್ನು ಹೊಂದಿರುವ ಕಿವೀಸ್​ನ ಬೌಲಿಂಗ್ ವಿಭಾಗ ತವರಿನ ಪಿಚ್​ನಲ್ಲಿ ಬಲಿಷ್ಠವಾಗಿದೆ. ಯಾವ ಹಂತದಲ್ಲಿ ಚೆಂಡನ್ನು ಸ್ವಿಂಗ್ ಮಾಡಬೇಕು, ಹೇಗೆ ಸ್ವಿಂಗ್ ಮಾಡಬೇಕು. ಯಾವ ಹಂತದಲ್ಲಿ ಆಕ್ರಮಣಕಾರಿ ಎಸೆತಗಳನ್ನು ಎಸೆಯಬೇಕು. ಗಾಳಿಯ ಸಹಾಯದಿಂದ ವಿಭಿನ್ನ ಕೋನದಲ್ಲಿ ಚೆಂಡನ್ನು ಎಸೆಯುವ ಕಲೆಯನ್ನು ಇವರು ಅರಿತುಕೊಂಡಿದ್ದಾರೆ. ಹಾಗಾಗಿಯೇ, ಪ್ರವಾಸಿ ತಂಡ ಪ್ರಖ್ಯಾತ ವೇಗದ ಬೌಲರ್​ಗಳನ್ನು ಹೊಂದಿದ್ದರೂ, ಕಿವೀಸ್​ನ ವೇಗಿಗಳ ಮುಂದೆ ಯಶಸ್ಸು ಸಾಧಿಸುವುದು ಕಷ್ಟವಾಗುತ್ತಿದೆ. ಅದರಲ್ಲೂ ಕಳೆದ ಐದು ವರ್ಷಗಳಲ್ಲಿ ಕಿವೀಸ್ ನೆಲದಲ್ಲಿ 2 ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿರುವ ಭಾರತಕ್ಕೆ ಇಲ್ಲಿನ ಪರಿಸ್ಥಿತಿಗೆ ತೀರಾ ಸುಲಭವಾಗಿ ಒಗ್ಗಿಕೊಳ್ಳುವುದು ಸಾಧ್ಯವಿಲ್ಲ. ವೆಲ್ಲಿಂಗ್ಟನ್​ನ ಕೆಟ್ಟ ಸೋಲಿನ ಬಳಿಕ ಭಾರತ ತಂಡ ಎರಡು ಅಂಶಗಳ ಬಗ್ಗೆ ಗಮನ ನೀಡಿದೆ. ಕಿವೀಸ್ ಬೌಲರ್​ಗಳಂತೆ ದೀರ್ಘ ಅವಧಿಯವರೆಗೆ ಚೆಂಡನ್ನು ಸ್ವಿಂಗ್ ಮಾಡುವುದು ಹೇಗೆ ಮತ್ತು ಮುಕ್ತವಾಗಿ ಕಿವೀಸ್ ಬೌಲರ್​ಗಳನ್ನು ಎದುರಿಸುವ ಉಪಾಯದ ಬಗ್ಗೆ ಭಾರತ ಚಿಂತೆ ಮಾಡುತ್ತಿದೆ. ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ, ಸಾಂಪ್ರದಾಯಿಕವಾಗಿ ಸ್ವಿಂಗ್ ಬೌಲರ್​ಗಳು. ಇನ್ನೊಂದೆಡೆ ಭಾರತ ಮೊಹಮದ್ ಶಮಿ ಹಾಗೂ ಜಸ್​ಪ್ರೀತ್ ಬುಮ್ರಾರಂಥ ಸೀಮ್ ಬೌಲರ್​ಗಳನ್ನು ಹೊಂದಿದೆ. ಸ್ವಿಂಗ್ ಮಾಡುವ ಬೌಲರ್ ಆಗಿದ್ದ ಇಶಾಂತ್ ಶರ್ಮ ಗಾಯಾಳುವಾಗಿದ್ದಾರೆ. ಈ ಎಲ್ಲ ಹಿನ್ನಡೆ ನಡುವೆ ಕಿವೀಸ್​ನ ಶಕ್ತಿಶಾಲಿ ಬೌಲಿಂಗ್​ಅನ್ನು ಭಾರತ ಹೇಗೆ ಎದುರಿಸುತ್ತದೆ ಎನ್ನುವ ಕುತೂಹಲವೂ ಎಲ್ಲರಲ್ಲಿದೆ. -ಪಿಟಿಐ/ಏಜೆನ್ಸೀಸ್

ಪಿಚ್ ರಿಪೋರ್ಟ್

ಹ್ಯಾಗ್ಲೆ ಓವಲ್ ಮೈದಾನ ಸಂಪೂರ್ಣ ಹಸಿರಿನಿಂದ ಕೂಡಿದ್ದು, ಪಿಚ್ ಹಾಗೂ ಔಟ್​ಫೀಲ್ಡ್ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ವೆಲ್ಲಿಂಗ್ಟನ್​ಗಿಂದ ವೇಗದ ಔಟ್​ಫೀಲ್ಡ್ ಇಲ್ಲಿ ಇರಲಿದೆ. ಎರಡು ದಿನಗಳ ಆಟದ ಬಳಿಕ ಬ್ಯಾಟಿಂಗ್​ಗೆ ಹೆಚ್ಚಿನ ನೆರವು ಸಿಗಬಹುದು. ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗುವ ಸೂಚನೆಯಿಲ್ಲ.

32- 2014ರಲ್ಲಿ ಹ್ಯಾಗ್ಲೆ ಓವಲ್ ಮೈದಾನ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬಳಿಕ ಕ್ರೖೆಸ್ಟ್​ಚರ್ಚ್​ನಲ್ಲಿ ಪ್ರತಿ 32 ರನ್​ಗೆ 1 ವಿಕೆಟ್ ಉರುಳಿದೆ. ಹ್ಯಾಮಿಲ್ಟನ್ ಹಾಗೂ ವೆಲ್ಲಿಂಗ್ಟನ್​ನಲ್ಲಿ ಪ್ರತಿ 35 ರನ್​ಗೆ 1 ವಿಕೆಟ್ ಉರುಳಿದೆ.

ಸೋಲಿಗೆ ಕಾರಣವನ್ನು ನೀಡುವ ಸಲುವಾಗಿ ನಾವು ಇಲ್ಲಿಲ್ಲ. ಮೊದಲ ಟೆಸ್ಟ್​ನಲ್ಲಿ ಕೆಟ್ಟದಾಗಿ ಆಡಿದೆವು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಗೆಲುವಿನ ಓಟದಲ್ಲಿರುವಾಗ ಇಂಥ ಸೋಲುಗಳು ತಂಡದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಬೇಕಾಗುತ್ತದೆ. ಸೋಲು ಬರದೇ ಇದ್ದಲ್ಲಿ, ಒಂದೇ ರೀತಿಯ ಯೋಚನೆಗಳು ನಮ್ಮಲ್ಲಿ ಇರುತ್ತವೆ. ನ್ಯೂಜಿಲೆಂಡ್ ಯಾವ ತಂತ್ರವನ್ನು ಮುಂದಿನ ಪಂದ್ಯದಲ್ಲಿ ಪ್ರಯೋಗಿಸಲಿದೆ. ಅವರನ್ನು ನಾವು ಹೇಗೆ ಎದುರಿಸಬೇಕು ಎನ್ನುವ ಯೋಚನೆಗಳು ನಮ್ಮ ಮುಂದಿವೆ. | ರವಿಶಾಸ್ತ್ರಿ ಟೀಮ್ ಇಂಡಿಯಾ ಕೋಚ್

ಬೌಲ್ಟ್-ಸೌಥಿ ಭಲೇ ಜೋಡಿ! ಕಿವೀಸ್​ನ ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಜೋಡಿ ಹೊಸ ಚೆಂಡನ್ನು ಹಂಚಿಕೊಂಡ ವೇಳೆ 426 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಕೇವಲ ಸ್ಟುವರ್ಟ್ ಬ್ರಾಡ್-ಜೇಮ್್ಸ ಆಂಡರ್​ಸನ್, ವಾಸಿಂ ಅಕ್ರಂ ಹಾಗೂ ವಕಾರ್ ಯೂನಿಸ್ ಜೋಡಿ ಮಾತ್ರವೇ ಹೊಸ ಚೆಂಡನ್ನು ಹಂಚಿಕೊಂಡ ವೇಳೆ ಹೆಚ್ಚಿನ ವಿಕೆಟ್ ಉರುಳಿಸಿದ್ದಾರೆ.

ಭಾರತ ಎಲ್ಲ ಕಡೆ ಉತ್ತಮವಾಗಿ ಆಡಿದ ಕಾರಣಕ್ಕಾಗಿಯೇ ವಿಶ್ವ ನಂ.1 ತಂಡ ಎನಿಸಿದೆ. ಯಾವುದೇ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆಡುವ ಕಲೆ ಅವರಿಗೆ ತಿಳಿದಿದೆ. ಖಂಡಿತವಾಗಿ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಿರುಗೇಟು ನೀಡಲಿದೆ ಎನ್ನುವುದನ್ನು ನಾವು ನಿರೀಕ್ಷೆ ಮಾಡುತ್ತೇವೆ. ಅವರ ದಾಖಲೆಯೇ ಎಲ್ಲವನ್ನು ಹೇಳುತ್ತದೆ. | ಟ್ರೆಂಟ್ ಬೌಲ್ಟ್ ಕಿವೀಸ್ ವೇಗಿ

ಟೀಮ್ ನ್ಯೂಸ್ ನ್ಯೂಜಿಲೆಂಡ್: ಅಪ್ಪನಾದ ಸಂಭ್ರಮದಲ್ಲಿರುವ ವಿಶ್ವ ನಂ. 2 ವೇಗಿ ನೀಲ್ ವ್ಯಾಗ್ನರ್ ತಂಡಕ್ಕೆ ಮರಳುವುದು ಖಚಿತ. ಅವರಿಗಾಗಿ ಯಾರು ಸ್ಥಾನ ಬಿಟ್ಟುಕೊಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ವ್ಯಾಗ್ನರ್ ಬದಲಿಗೆ ವೆಲ್ಲಿಂಗ್ಟನ್ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ್ದ ಕೈಲ್ ಜೇಮಿಸನ್, ಆಕರ್ಷಕ ನಿರ್ವಹಣೆಯ ಮೂಲಕ ಗಮನ ಸೆಳೆದಿದ್ದಾರೆ. ಸ್ಪಿನ್ನರ್​ಗಳನ್ನು ತಂಡಕ್ಕೆ ಆಯ್ಕೆ ಮಾಡುವ ಇರಾದೆ ಇಲ್ಲದೇ ಇದ್ದಲ್ಲಿ, ಅಜಾಜ್ ಪಟೇಲ್ ಬದಲಿಗೆ ವ್ಯಾಗ್ನರ್ ತಂಡ ಕೂಡಿಕೊಳ್ಳಲಿದ್ದಾರೆ. ಆಗ ಇಡೀ ಕಿವೀಸ್ ತಂಡದ ಬೌಲಿಂಗ್ ವಿಭಾಗದಲ್ಲಿ ಎಲ್ಲ ವೇಗಿಗಳೇ ಇರಲಿದ್ದಾರೆ. ಹ್ಯಾಗ್ಲೆ ಓವಲ್​ನಲ್ಲಿ ಆಡಿದ ಐದು ಟೆಸ್ಟ್ ಗಳ ಪೈಕಿ ಒಮ್ಮೆ ಮಾತ್ರವೇ ನ್ಯೂಜಿಲೆಂಡ್ ಸ್ಪಿನ್ನರ್​ಗಳಿಲ್ಲದೆ ಪಂದ್ಯ ಆಡಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಭುಜದ ಗಾಯದಿಂದಾಗಿ ಮೊದಲ ಟೆಸ್ಟ್​ನ 2ನೇ ಇನಿಂಗ್ಸ್​ಅನ್ನು ತಪ್ಪಿಸಿಕೊಂಡಿದ್ದ ಟಾಮ್ ಬ್ಲಂಡೆಲ್ ಆರಂಭಿಕರಾಗಿ ಆಡಲು ಅಣಿಯಾಗಿದ್ದಾರೆ.

ಭಾರತ: ಇಶಾಂತ್ ಶರ್ಮಗೆ ಮತ್ತ ಮೊಣಕಾಲು ನೋವು ಬಾಧಿಸಿದೆ. ಇದರಿಂದಾಗಿ ಉಮೇಶ್ ಯಾದವ್ ಇವರ ಬದಲಿಗೆ ಆಡುವ ಸಾಧ್ಯತೆ ಇದೆ. ಕಾಲು ಊದಿಕೊಂಡಿದ್ದ ಕಾರಣಕ್ಕೆ ಒಂದು ಅವಧಿಯ ಅಭ್ಯಾಸ ತಪ್ಪಿಸಿಕೊಂಡಿದ್ದ ಪೃಥ್ವಿ ಷಾ ಫಿಟ್ ಆಗಿದ್ದು, 2ನೇ ಟೆಸ್ಟ್​ಗೆ ಲಭ್ಯರಾಗಿದ್ದಾರೆ. ಆದರೆ, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸುವ ಉದ್ದೇಶ ಟೀಮ್ ಮ್ಯಾನೇಜ್​ವೆುಂಟ್​ಗಿದ್ದು, ಅಶ್ವಿನ್​ರ ಬದಲಿಗೆ ರವೀಂದ್ರ ಜಡೇಜಾರನ್ನು ಆಡಿಸುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಕೂಡ ಅಶ್ವಿನ್​ರ ಬದಲಿಗೆ ರವೀಂದ್ರ ಜಡೇಜಾ ಆಡಬಹುದು ಎನ್ನುವ ಸೂಚನೆಯನ್ನೂ ನೀಡಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 4.00 ನೇರಪ್ರಸಾರ: ಸ್ಟಾರ್​ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net