ಇಂದು ಭಾರತ-ನ್ಯೂಜಿಲೆಂಡ್​ ಅಂತಿಮ ಏಕದಿನ ಕದನ; ಸರಣಿ ವಿಜಯವೋ, ಸಮಬಲವೋ?

ಟೆಸ್ಟ್​ ತಂಡ ಕೂಡಿಕೊಂಡ ಗುರ್ನೂರ್​-ಹೆನ್ರಿ ಕೊನೇ ಪಂದ್ಯಕ್ಕೆ ಗೈರು
virat kohli
ಬ್ಯಾಟಿಂಗ್​ ಅಭ್ಯಾಸ ನಿರತ ವಿರಾಟ್​ ಕೊಹ್ಲಿಏಜೆನ್ಸಿ
Published on: 

ಮೌಂಟ್​ ಮೌಂಗನುಯಿ: ಮೊದಲ ಎರಡು ಪಂದ್ಯಗಳಲ್ಲಿ ಬಿಗಿ ವೇಗದ ದಾಳಿಯೊಂದಿಗೆ ನ್ಯೂಜಿಲೆಂಡ್​ ತಂಡವನ್ನು ಕಟ್ಟಿಹಾಕಿದ್ದ ಭಾರತ ತಂಡ, ಕಳೆದ ಪಂದ್ಯದಲ್ಲಿ ಆತಿಥೇಯರ ವೇಗದ ಬೌಲಿಂಗ್​ ದಾಳಿಗೆ ತತ್ತರಿಸಿತ್ತು. ಮೌಂಟ್​ ಮೌಂಗನುಯಿಯ ಬೇ ಓವಲ್​ನಲ್ಲೇ ಭಾನುವಾರ ನಡೆಯಲಿರುವ ಸರಣಿಯ ನಿರ್ಣಾಯಕ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಪಡೆ ಆತಿಥೇಯರಿಗೆ ದಿಟ್ಟ ತಿರುಗೇಟು ನೀಡಬೇಕಾಗಿದೆ. ಇದರೊಂದಿಗೆ ಗೌತಮ್​ ಗಂಭೀರ್​ ಮುಖ್ಯ ಕೋಚ್​ ಹುದ್ದೆ ಅಲಂಕರಿಸಿದ ಬಳಿಕ ವಿದೇಶಿ ನೆಲದಲ್ಲಿ ಮೊದಲ ಏಕದಿನ ಸರಣಿ ಜಯಿಸುವ ಅವಕಾಶ ಭಾರತದ ಮುಂದಿದೆ. ಮತ್ತೊಂದೆಡೆ ನ್ಯೂಜಿಲೆಂಡ್​ 7 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋಲುವ ಮುಖಭಂಗವನ್ನು ತಪ್ಪಿಸಿಕೊಂಡು, ಸರಣಿ ಸಮಬಲ ಸಾಧಿಸಲು ಹೋರಾಡಲಿದೆ.

ನಾಲ್ಕನೇ ಏಕದಿನ ಪಂದ್ಯದಲ್ಲಿ ಚೇಸಿಂಗ್​ ವೇಳೆ ಮೊದಲ ಓವರ್​ನಲ್ಲೇ ಭಾರತೀಯರನ್ನು ಕಂಗೆಡಿಸಿದ್ದ ವೇಗಿ ಮ್ಯಾಟ್​ ಹೆನ್ರಿ ಅಂತಿಮ ಪಂದ್ಯಕ್ಕೆ ಗೈರಾಗಲಿದ್ದಾರೆ. ಇದೇ ವೇಳೆ ಭಾರತಕ್ಕೂ, ಸರಣಿಯಲ್ಲಿ ಇದುವರೆಗೆ ಸರ್ವಾಧಿಕ 9 ವಿಕೆಟ್​ ಕಬಳಿಸಿರುವ ವೇಗಿ ಗುರ್ನೂರ್​ ಬ್ರಾರ್​ ಅಲಭ್ಯರಾಗಿದ್ದಾರೆ. ಟೆಸ್ಟ್​ ಸರಣಿಯ ಸಿದ್ಧತೆಗಾಗಿ ಇವರಿಬ್ಬರು ಏಕದಿನ ತಂಡ ತೊರೆದಿದ್ದಾರೆ. ಇದು ಉಭಯ ತಂಡಗಳ ಬ್ಯಾಟರ್​ಗಳಿಗೂ ತುಸು ಸಮಾಧಾನ ತಂದಿದೆ. ಆದರೆ 4ನೇ ಏಕದಿನದಲ್ಲಿ ಕಿವೀಸ್​ ಡೆರಿಲ್​ ಮಿಚೆಲ್​, ಗ್ಲೆನ್​ ಫಿಲಿಪ್ಸ್​ ಗೈರಿನ ನಡುವೆಯೂ ಬೃಹತ್​ ಮೊತ್ತ ಕಲೆಹಾಕಿದ್ದರೆ, ಭಾರತ ತಂಡ ಅನುಭವಿ ಬ್ಯಾಟರ್​ಗಳಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಹಾಜರಿಯಲ್ಲೂ 100ರ ಗಡಿ ದಾಟಲು ವಿಫಲವಾಗಿತ್ತು. ಇದೀಗ ಕಿವೀಸ್​ ನೆಲದ ಕೊನೇ ಪಂದ್ಯ ಆಡಲು ಸಜ್ಜಾಗಿರುವ ರೋ-ಕೊ ಇದನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಬೇಕಾಗಿದೆ. ನ್ಯೂಜಿಲೆಂಡ್​ ನೆಲದಲ್ಲಿ ಒಂದೂ ಶತಕ ಸಿಡಿಸದ ಕೊರತೆಯನ್ನು ನೀಗಿಸಿಕೊಳ್ಳಲು ರೋಹಿತ್​ ಶರ್ಮಗೆ ಇದು ಕೊನೇ ಅವಕಾಶವೆನಿಸಿದೆ.

ಟೀಮ್​ ನ್ಯೂಸ್​:

ಭಾರತ: ಸ್ಪಿನ್ನರ್​ ಕುಲದೀಪ್​ ಯಾದವ್​ ಆಡಿದ ಪ್ರವಾಸದ ಮೊದಲ ಪಂದ್ಯದಲ್ಲಿ ತೀವ್ರ ನಿರಾಸೆ ಮೂಡಿಸಿದ್ದರು. ಅವರು 8 ಓವರ್​ಗಳಲ್ಲಿ 73 ರನ್​ ನೀಡಿ ದುಬಾರಿಯಾಗಿದ್ದರು. ಆದರೂ ಅವರು 11ರ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ವೇಗಿ ಗುರ್ನೂರ್​ ಬ್ರಾರ್​ ಟೆಸ್ಟ್​ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಕೊನೇ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಅನುಭವಿ ವೇಗಿ ಮೊಹಮದ್​ ಸಿರಾಜ್​ ಪ್ರವಾಸದ ಮೊದಲ ಪಂದ್ಯ ಆಡುವ ಅವಕಾಶ ಪಡೆಯಬಹುದು.

ನ್ಯೂಜಿಲೆಂಡ್​: ವೇಗಿಗಳಾದ ಮ್ಯಾಟ್​ ಹೆನ್ರಿ ಮತ್ತು ಕೈಲ್​ ಜೇಮಿಸನ್​ ಕಿವೀಸ್​ ಟೆಸ್ಟ್​ ತಂಡವನ್ನು ಕೂಡಿಕೊಳ್ಳಲು ತೆರಳಿದ್ದು, ಅಂತಿಮ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಜೇಕಬ್​ ಡಫಿ ಮತ್ತು ಬ್ಲೇರ್​ ಟಿಕ್ನರ್​ ಅಥವಾ ಬ್ರೆಟ್​ ರಾಂಡೆಲ್​ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕ್ರಿಸ್ಟಿಯನ್​ ಕ್ಲಾರ್ಕ್​ ಸ್ಥಾನವನ್ನು ಆಲ್ರೌಂಡರ್​ ಜೋಶ್​ ಕ್ಲಾರ್ಕ್​ಸನ್​ ತುಂಬುವ ಸಾಧ್ಯತೆ ಇದೆ.

*ಆರಂಭ: ಬೆಳಗ್ಗೆ 7.30

*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಸೋನಿ ಲಿವ್​.

ಪಿಚ್​ ರಿಪೋರ್ಟ್​

ನಾಲ್ಕನೇ ಏಕದಿನದಲ್ಲಿ ಎರಡು ಇನಿಂಗ್ಸ್​ಗಳ ವೇಳೆ ಪಿಚ್​ ಭಿನ್ನವಾಗಿ ವರ್ತಿಸಿದಂತಿತ್ತು. ಕಿವೀಸ್​ ಬ್ಯಾಟರ್​ಗಳಿಗೆ ಸಹಕಾರ ನೀಡಿದ್ದ ಪಿಚ್​, ಭಾರತೀಯ ಬ್ಯಾಟರ್​ಗಳಿಗೆ ಕಠಿಣ ಸವಾಲೊಡ್ಡಿತ್ತು. ಇದರಿಂದಾಗಿ ಇಲ್ಲಿ 4 ಪಂದ್ಯಗಳ ಬಳಿಕ ಚೇಸಿಂಗ್​ ಮಾಡಿದ ತಂಡ ಸೋತಿತ್ತು. ಹೀಗಾಗಿ ಇಲ್ಲಿ ಈ ಬಾರಿ ಹೊನಲು ಬೆಳಕಿನಡಿ ಬ್ಯಾಟಿಂಗ್​ ತುಸು ಸವಾಲೆನಿಸಿದೆ ಎಂಬುದು ಸ್ಪಷ್ಟ. ಪಂದ್ಯಕ್ಕೆ ಮಳೆ ಭೀತಿ ಇಲ್ಲ. ಆದರೆ ಮೋಡ ಕವಿದ ವಾತಾವರಣ ಇರಲಿರುವುದರಿಂದ ಈ ಬಾರಿ ಮೊದಲ ಇನಿಂಗ್ಸ್​ನಲ್ಲೂ ಪಿಚ್​ ಬೌಲರ್​ಗಳಿಗೆ ಹೆಚ್ಚಿನ ಸಹಕಾರ ನೀಡಬಹುದು.

ಬ್ಯಾಟಿಂಗ್​ ಸುಧಾರಣೆ ಅಗತ್ಯ

ಕೇವಲ 89 ರನ್​ಗಳಿಗೆ ಆಲೌಟ್​ ಆಗಿ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ತನ್ನ 2ನೇ ಅತಿದೊಡ್ಡ ಸೋಲು ಅನುಭವಿಸಿದ ಬಳಿಕ ಭಾರತ ಬ್ಯಾಟಿಂಗ್​ ವಿಭಾಗದ ನಿರ್ವಹಣೆ ಸುಧಾರಿಸಿಕೊಳ್ಳುವುದು ಅತ್ಯಗತ್ಯವೆನಿಸಿದೆ. ಮ್ಯಾಟ್​ ಹೆನ್ರಿ ದಾಳಿಗೆ ಭಾರತ ಸಂಪೂರ್ಣವಾಗಿ ನೆಲಕಚ್ಚಿತ್ತು. ಇದು ಹೆಚ್ಚು ಕಳವಳಕಾರಿಯೂ ಆಗಿದೆ. ಯಾಕೆಂದರೆ ಮುಂದಿನ ವರ್ಷದ ಏಕದಿನ ವಿಶ್ವಕಪ್​, ದಕ್ಷಿಣ ಆಫ್ರಿಕಾದ ಇದೇ ರೀತಿಯ ವೇಗದ ಬೌಲಿಂಗ್​ ಸ್ನೇಹಿ ಪಿಚ್​ಗಳಲ್ಲಿ ನಡೆಯಲಿದೆ. ಹೀಗಾಗಿ ರೋ-ಕೊ ತಮ್ಮ ಅನುಭವಕ್ಕೆ ತಕ್ಕ ನಿರ್ವಹಣೆ ತೋರಬೇಕಿದ್ದರೆ, ಶ್ರೇಯಸ್​ ಅಯ್ಯರ್​, ಋತುರಾಜ್​ ಗಾಯಕ್ವಾಡ್​, ಇಶಾನ್​ ಕಿಶನ್​ ಕಿವೀಸ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಬೇಕಿದೆ. ಶತಕವೀರ ವಿಲ್​ ಯಂಗ್​ಗೆ ಆರಂಭದಲ್ಲೇ ಎರಡೆರಡು ಜೀವದಾನ ನೀಡಿ ಬೆಲೆ ತೆತ್ತಿದ್ದ ಭಾರತ, ಕ್ಯಾಚಿಂಗ್​ನಲ್ಲೂ ಸುಧಾರಣೆ ಕಾಣಬೇಕಿದೆ.

ಟೆಸ್ಟ್​ ತಂಡಕ್ಕೆ ಗುರ್ನೂರ್​ ಸೇರ್ಪಡೆ

ಏಕದಿನ ಸರಣಿಯಲ್ಲಿ ಮಿಂಚಿದ ವೇಗಿ ಗುರ್ನೂರ್​ ಬ್ರಾರ್​ ಅವರನ್ನು ಮುಂಬರುವ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಜತೆಗೆ ಸ್ಪಿನ್ನರ್​ ಕುಲದೀಪ್​ ಯಾದವ್​ ಅವರನ್ನು ಟೆಸ್ಟ್​ ತಂಡದಿಂದ ಕೈಬಿಡಲಾಗಿದೆ. ಟೆಸ್ಟ್​ ತಂಡವನ್ನು ಕೂಡಿಕೊಳ್ಳಲು ತೆರಳಿರುವ ಗುರ್ನೂರ್​ ಕೊನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಜಸ್​ಪ್ರೀತ್​ ಬುಮ್ರಾ, ಆಕಾಶ್​ ದೀಪ್​, ಮೊಹಮದ್​ ಸಿರಾಜ್​ ಮತ್ತು ಕನ್ನಡಿಗ ಪ್ರಸಿದ್ಧಕೃಷ್ಣ ಒಳಗೊಂಡ ಭಾರತ ಟೆಸ್ಟ್​ ತಂಡದ ವೇಗದ ಬೌಲಿಂಗ್​ ವಿಭಾಗಕ್ಕೆ ಗುರ್ನೂರ್​ ಸೇರ್ಪಡೆ ಮತ್ತಷ್ಟು ಬಲ ತುಂಬಿದೆ. ಕುಲದೀಪ್​ ಏಕದಿನ ಸರಣಿಯ ನಂತರ ತವರಿಗೆ ಮರಳಲಿದ್ದಾರೆ. ಗಾಯದಿಂದಾಗಿ ಭಾರತ ಎ ತಂಡದ ಚತುರ್ದಿನ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ವಿಕೆಟ್​ ಕೀಪರ್​&ಬ್ಯಾಟರ್​ ರಿಷಭ್​ ಪಂತ್​, ಟೆಸ್ಟ್​ ಸರಣಿಗೆ ಫಿಟ್​ ಆಗಿದ್ದಾರೆ ಎನ್ನಲಾಗಿದೆ. ಅವರು ಶನಿವಾರ ಟೆಸ್ಟ್​ ತಂಡವನ್ನು ಕೂಡಿಕೊಂಡಿದ್ದಾರೆ.