ಭಾರತ-ನ್ಯೂಜಿಲೆಂಡ್​ 4ನೇ ಟಿ20 ಪಂದ್ಯ: ಅವಕಾಶ ಕೈಚೆಲ್ಲಿದ ಸಂಜು ಸ್ಯಾಮ್ಸನ್,​ ಕಿವೀಸ್​ ಪಡೆಗೆ ಸವಾಲಿನ ಗುರಿ

Manish Pandey
Published on

ವೆಲ್ಲಿಂಗ್ಟನ್​: ಇಲ್ಲಿನ ಸ್ಕೈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ನ್ಯೂಜಿಲೆಂಡ್​ ಮತ್ತು ಪ್ರವಾಸಿ ಭಾರತ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ, ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿರುವ ಟೀಮ್​ ಇಂಡಿಯಾ 166 ರನ್​ಗಳ ಸವಾಲಿನ ಗುರಿಯನ್ನು ಕಿವೀಸ್​ ಪಡೆಗೆ ನೀಡಿದೆ.

ಐದು ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಂತರದಿಂದ ಟೀಮ್​ ಇಂಡಿಯಾ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ತಂಡದ ಪರ ರೋಹಿತ್​ ಶರ್ಮಾ ಬದಲಾಗಿ ಸಂಜು ಸ್ಯಾಮ್ಸನ್​ ಮತ್ತು ಕೆ.ಎಲ್​. ರಾಹುಲ್​ ಆರಂಭಿಕರಾಗಿ ಕಣಕ್ಕಿಳಿದರು.

ಸ್ಯಾಮ್ಸನ್​ ತಮ್ಮ ಪಾಲಿಗೆ ಒದಗಿ ಬಂದ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೇ ಕೇವಲ 8 ರನ್​ ಗಳಿಸಿ ವಿಕೆಟ್​ ಒಪ್ಪಿಸಿ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ವಿರಾಟ್​ ಕೊಹ್ಲಿ(11), ಶ್ರೇಯಸ್​ ಅಯ್ಯರ್​(1) ಕೂಡ ಔಟಾದರು.

ಇತ್ತ ಆರಂಭಿಕನಾಗಿ ಕಣಕ್ಕಿಳಿದು ಏಕಾಂಗಿಯಾಗಿ ಹೋರಾಡುತ್ತಿದ್ದ ರಾಹುಲ್​(39)ರನ್​ಗಳ ಉಪಯುಕ್ತ ಕಾಣಿಕೆ ನೀಡಿ ವಿಕೆಟ್​ ಒಪ್ಪಿಸಿದರು. ರಾಹುಲ್​ ಬೆನ್ನಲ್ಲೇ ಶಿವಂ ದುಬೆ(12), ವಾಷಿಂಗ್ಟನ್​ ಸುಂದರ್​(0) ಔಟಾದರು.

ಟೀಮ್​ ಇಂಡಿಯಾ 88 ರನ್​ಗೆ ಪ್ರಮುಖ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಕನ್ನಡಿಗ ಮನಿಶ್​ ಪಾಂಡೆ ಆಸರೆಯಾದರು ಕೊನೆಯವರೆಗೂ ಉಪಯುಕ್ತ ಆಟವಾಡಿದ ಪಾಂಡೆ 50 ರನ್​ಗಳ ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಶಾರ್ದುಲ್​ ಠಾಕೂರ್​(20), ಯಜುವೇಂದ್ರ ಚಹಾಲ್​(1) ರನ್​ ಗಳಿಸಿ ಔಟಾದರೆ, ನವದೀಪ್​ ಸೈನಿ(11) ರನ್ ಕಲೆಹಾಕಿ ಅಜೇಯರಾಗಿ ಉಳಿದರು.

ಅಂತಿಮವಾಗಿ ಟೀಮ್​ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 165 ರನ್​ ಕಲೆಹಾಕಿತು. ಈ ಮೂಲಕ ಕಿವೀಸ್​ ಪಡೆ ಗೆಲುವಿಗೆ 166ರನ್​ ಗುರಿ ನೀಡಿದೆ.

ಕಿವೀಸ್​ ಪರ ಇಸ್​ ಸೊಧಿ ಮೂರು ವಿಕೆಟ್​ ಕಬಳಿಸಿದರೆ, ಹಮೀಶ್​ ಬೆನೆಟ್ಟ್​ 2 ಹಾಗೂ ಟೀಮ್​ ಸೌಥಿ, ಸ್ಕಾಟ್​ ಕುಗ್ಗೆಲಿಜಿನ್​ ಮತ್ತು ಮಿಚೆಲ್​ ಸ್ಯಾಂಟ್ನರ್​ ತಲಾ ಒಂದು ವಿಕೆಟ್​ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net