

ಮೌಂಟ್ ಮೌಂಗನುಯಿ: ಟಿ20 ತಂಡದ ನಾಯಕರಾಗಿ ನ್ಯೂಜಿಲೆಂಡ್ ನೆಲದಲ್ಲಿ ಭಾರತಕ್ಕೆ ಸರಣಿ ಗೆಲುವು ತಂದುಕೊಟ್ಟಿದ್ದ ಶ್ರೇಯಸ್ ಅಯ್ಯರ್ ಇದೀಗ ಏಕದಿನ ಸರಣಿಯಲ್ಲೂ ಅದೇ ಸಾಧನೆ ಮಾಡುವ ತವಕದಲ್ಲಿದ್ದಾರೆ. ಟೆಸ್ಟ್ ಸರಣಿಯ ಸಿದ್ಧತೆಗಾಗಿ ತಂಡ ತೊರೆದಿರುವ ನಾಯಕ ಶುಭಮಾನ್ ಗಿಲ್ ಗೈರಿನಲ್ಲಿ ಶ್ರೇಯಸ್ ಅಯ್ಯರ್ ಕೊನೇ 2 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 3ನೇ ಪಂದ್ಯ ಮಳೆಯಿಂದಾಗಿ ರದ್ದುಕೊಂಡ ಬಳಿಕ ಟೀಮ್ ಇಂಡಿಯಾ, ಶುಕ್ರವಾರ ಬೇ ಓವಲ್ನಲ್ಲಿ ನಡೆಯಲಿರುವ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 4ನೇ ಪಂದ್ಯದಲ್ಲಿ ಗೆದ್ದು, ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. 5 ಪಂದ್ಯಗಳ ಸರಣಿಯಲ್ಲಿ ಭಾರತ ಸದ್ಯ 2-0 ಮುನ್ನಡೆಯಲ್ಲಿದೆ.
ಏಕದಿನ ಸರಣಿ ಮುಗಿದ ಮೂರೇ ದಿನಗಳ ಬಳಿಕ ಟೆಸ್ಟ್ ಸರಣಿ ನಡೆಯಲಿರುವುದರಿಂದ ಭಾರತ ಮಾತ್ರವಲ್ಲದೆ ಆತಿಥೇಯ ನ್ಯೂಜಿಲೆಂಡ್ ಕೂಡ ಟೆಸ್ಟ್ ತಂಡದ ಪ್ರಮುಖ ಆಟಗಾರರ ಗೈರಿನ ಹಿನ್ನಡೆ ಹೊಂದಿದೆ. ಗಿಲ್ ಜತೆಗೆ ಕನ್ನಡಿಗ ಕೆಎಲ್ ರಾಹುಲ್ ಮತ್ತು ವೇಗಿ ಅಂಶುಲ್ ಕಂಬೋಜ್ ಕೂಡ ಏಕದಿನ ತಂಡ ತೊರೆದಿದ್ದಾರೆ. ಉಭಯ ತಂಡಗಳ ಬಲಾಬಲದಲ್ಲಿ ವ್ಯತ್ಯಾಸವಾಗಿರುವುದರಿಂದ ಕೊನೇ 2 ಪಂದ್ಯಗಳು ಕುತೂಹಲ ಕೆರಳಿಸಿವೆ. ಸರಣಿಯ ಕೊನೇ ಪಂದ್ಯ ಕೂಡ ಭಾನುವಾರ ಇಲ್ಲೇ ನಡೆಯಲಿದೆ. ಭಾರತ ಕೊನೇ 2 ಪಂದ್ಯಗಳಿಗೂ ರೋಹಿತ್ ಶರ್ಮ-ವಿರಾಟ್ ಕೊಹ್ಲಿ ಅನುಭವದ ಬಲ ಉಳಿಸಿಕೊಳ್ಳಲಿದೆ.
ನ್ಯೂಜಿಲೆಂಡ್ ತಂಡ ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್ರಂಥ ಟೆಸ್ಟ್ ಸರಣಿಗೆ ಬಿಟ್ಟುಕೊಟ್ಟಿರುವ ನಡುವೆ, ಸರಣಿ ಜೀವಂತವಿಡಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಜತೆಗೆ ತವರಿನಲ್ಲಿ 7 ವರ್ಷಗಳ ಬಳಿಕ ಸರಣಿ ಸೋಲುವುದನ್ನು ತಪ್ಪಿಸಲು ಕೂಡ ಹೋರಾಡಬೇಕಿದೆ.
ಶ್ರೇಯಸ್ಗೆ ಡಬಲ್ ಜವಾಬ್ದಾರಿ
ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿರುವ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ನಲ್ಲೂ ಲಯಕ್ಕೆ ಮರಳಬೇಕಾದ ಒತ್ತಡದಲ್ಲಿದ್ದಾರೆ. ಸರಣಿಯ ಮೊದಲ 2 ಪಂದ್ಯಗಳಲ್ಲಿ ಅವರು 15, 30 ರನ್ಗಳಿಗೆ ಔಟಾಗಿದ್ದರು. ಇದಕ್ಕಿಂತ ಹೆಚ್ಚಾಗಿ ಅವರ ಶಾರ್ಟ್ ಬಾಲ್ ವಿರುದ್ಧದ ದೌರ್ಬಲ್ಯ ಮತ್ತೆ ಬೆಳಕಿಗೆ ಬಂದಿರುವುದು ಕಳವಳಕಾರಿ ಎನಿಸಿದೆ. ಸರಣಿಯ ಮೊದಲ 2 ಪಂದ್ಯಗಳಲ್ಲಿ 0, 23 ರನ್ ಗಳಿಸಿರುವ ರೋಹಿತ್ ಶರ್ಮ ಕೂಡ ದೊಡ್ಡ ಇನಿಂಗ್ಸ್ ಆಡುವತ್ತ ಗಮನಹರಿಸಬೇಕಿದೆ. ಏಕದಿನ ತಂಡದಲ್ಲಿ ಮತ್ತೆ ಅವಕಾಶ ಪಡೆಯಲಿರುವ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದೆ.
ಟೀಮ್ ನ್ಯೂಸ್
ಭಾರತ: ಟೆಸ್ಟ್ ಸಿದ್ಧತೆಗೆ ತೆರಳಿರುವ ಶುಭಮಾನ್ ಗಿಲ್, ಕೆಎಲ್ ರಾಹುಲ್ ಮತ್ತು ಅಂಶುಲ್ ಕಂಬೋಜ್ ಸ್ಥಾನವನ್ನು 11ರ ಬಳಗದಲ್ಲಿ ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಮತ್ತು ಮೊಹಮದ್ ಸಿರಾಜ್ ಅಥವಾ ಕುಲದೀಪ್ ಯಾದವ್ ತುಂಬುವ ನಿರೀಕ್ಷೆ ಇದೆ. ಈ ಪೈಕಿ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಜತೆಗೆ ರೋಹಿತ್ ಶರ್ಮ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ನ್ಯೂಜಿಲೆಂಡ್: ಟೆಸ್ಟ್ ನಾಯಕ ಟಾಮ್ ಲಾಥಮ್, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ನಾಥನ್ ಸ್ಮಿತ್ ಮತ್ತು ಹೆನ್ರಿ ನಿಕೋಲ್ಸ್ ಟೆಸ್ಟ್ ಸಿದ್ಧತೆಗಾಗಿ ತಂಡ ತೊರೆದಿದ್ದರೆ, ಬ್ಲೇರ್ ಟಿಕ್ನರ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ ಫಿನ್ ಅಲೆನ್, ನಿಕ್ ಕೆಲ್ಲಿ, ಮಿಚ್ ಹೇ, ಡೀನ್ ಫಾಕ್ಸ್ಕ್ರಾಫ್ಟ್ ಮತ್ತು ಮ್ಯಾಟ್ ಹೆನ್ರಿ ಬದಲಿಗರಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಕೂಡ ಟೆಸ್ಟ್ ತಂಡದಲ್ಲಿದ್ದರೂ, ಕೊನೇ 2 ಏಕದಿನ ಪಂದ್ಯಗಳಲ್ಲಿ ಅವರೇ ನಾಯಕರಾಗಿ ಮುಂದುವರಿಯಲಿದ್ದಾರೆ.
*ಆರಂಭ: ಬೆಳಗ್ಗೆ 7.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
*29: ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ 29ನೇ ನಾಯಕ ಎನಿಸಲಿದ್ದಾರೆ.
ಪಿಚ್ ರಿಪೋರ್ಟ್
ಕಳೆದ ವಾರ ಬೇ ಓವಲ್ನಲ್ಲಿ ಸಾಕಷ್ಟು ಮಳೆಯಾಗಿದ್ದರೂ, ಪಂದ್ಯಕ್ಕೆ ಒಂದೆರಡು ದಿನ ಮುನ್ನ ಮಳೆಯಾಗಿಲ್ಲ. ಪಿಚ್ ಸಿದ್ಧತೆಗೆ ಮಳೆ ಸ್ವಲ್ಪ ತೊಂದರೆ ನೀಡಿತ್ತು. ಸರಣಿಯ ಮೊದಲ 2 ಪಂದ್ಯಗಳಿಗಿಂತ ಇಲ್ಲಿನ ಪಿಚ್ ಬ್ಯಾಟರ್ಗಳಿಗೆ ಹೆಚ್ಚಿನ ಸಹಕಾರ ನೀಡುವ ನಿರೀಕ್ಷೆ ಇದೆ. ಆದರೆ 2020ರ ಬಳಿಕ ಇಲ್ಲಿ ಯಾವ ತಂಡವೂ 300ರ ಗಡಿ ದಾಟಿಲ್ಲ. ಒಂದು ವರ್ಷದ ಬಳಿಕ ಇಲ್ಲಿ ಏಕದಿನ ಪಂದ್ಯ ನಡೆಯಲಿದೆ. ಇಲ್ಲಿ ನಡೆದಿರುವ ಕಳೆದ 4 ಅಹರ್ನಿಶಿ ಪಂದ್ಯಗಳಲ್ಲಿ ಚೇಸಿಂಗ್ ಮಾಡಿರುವ ತಂಡವೇ ಜಯಿಸಿದೆ.
*3: ಭಾರತ ತಂಡ ಮೌಂಟ್ ಮೌಂಗನುಯಿಯಲ್ಲಿ ಈ ಹಿಂದೆ ಆಡಿರುವ 3 ಏಕದಿನ ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 1ರಲ್ಲಿ ಸೋತಿದೆ. ನ್ಯೂಜಿಲೆಂಡ್ ಇಲ್ಲಿ ಆಡಿರುವ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 5ರಲ್ಲಿ ಸೋತಿದೆ.
ಬ್ರೆಟ್ ರಾಂಡೆಲ್ ಸೇರ್ಪಡೆ
ಕೊನೇ 2 ಏಕದಿನ ಪಂದ್ಯಗಳಿಗೆ ವೇಗಿ ಬ್ರೆಟ್ ರಾಂಡೆಲ್ ಆತಿಥೇಯ ಕಿವೀಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 31 ವರ್ಷದ ರಾಂಡೆಲ್ ನ್ಯೂಜಿಲೆಂಡ್ ಎ ಪರ 5 ಪಂದ್ಯ ಆಡಿದ್ದಾರೆ. ಕೊನೇ ಪಂದ್ಯಕ್ಕೆ ಆಲ್ರೌಂಡರ್ ಜೋಶ್ ಕ್ಲಾರ್ಕ್ಸನ್ ಅವರನ್ನೂ ಸೇರ್ಪಡೆಗೊಳಿಸಲಾಗಿದೆ.