ಕಿವೀಸ್​ ಬೆಂಬಿಡದ ಸೂಪರ್​ ಓವರ್​ ಭೂತ: ಫಲಿಸದ ವಿಲಿಯಮ್ಸನ್ ಏಕಾಂಗಿ ಹೋರಾಟ, ಟಿ20 ಸರಣಿ ವಶಪಡಿಸಿಕೊಂಡ ಭಾರತ

Team India
Published on

ಹ್ಯಾಮಿಲ್ಟನ್​: ಇಲ್ಲಿನ ಸೆಡಾನ್​ ಪಾರ್ಕ್​ನಲ್ಲಿ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ನಾಯಕ ಕೇನ್​ ವಿಲಿಯಮ್ಸನ್​ ಅಬ್ಬರದ ಆಟದ ನಡುವೆಯೂ ಆತಿಥೇಯ ನ್ಯೂಜೆಲೆಂಡ್​ ತಂಡ ಪ್ರವಾಸಿ ಭಾರತ ವಿರುದ್ಧ ಗೆಲುವು ದಾಖಲಿಸಲು ಸಾಧ್ಯವಾಗದೇ ಪಂದ್ಯವನ್ನು ಟೈ ಮಾಡಿಕೊಂಡಿತು. ಬಳಿಕ ನಡೆದ ಸೂಪರ್​ ಓವರ್ ಕೂಡ ಕಿವೀಸ್​ ಪಾಲಿಗೆ ವರವಾಗದೇ, ಟಿ20 ಸರಣಿಯನ್ನು ಕೈಚೆಲ್ಲಿತ್ತು.

ಟೀಮ್​ ಇಂಡಿಯಾ ನೀಡಿದ್ದ 180 ರನ್​ ಸವಾಲಿನ ಗುರಿ ಬೆನ್ನತ್ತಿದ ಕಿವೀಸ್​ ಪಡೆಗೆ ಮಾರ್ಟಿನ್​ ಗುಪ್ಟಿಲ್​(31) ಮತ್ತು ಕೊಲಿನ್​ ಮನ್ರೋ(14) 47 ರನ್​ಗಳ ಜತೆಯಾಟವಾಡಿದರು. ತಂಡದ ಮೊತ್ತ 52 ರನ್​ ಆಗಿದ್ದಾಗ ಪ್ರಮುಖ ಎರಡು ವಿಕೆಟ್​ ಕಳೆದುಕೊಂಡು ಕಿವೀಸ್​ ಪಡೆ ಸಂಕಷ್ಟಕ್ಕೆ ಸಿಲುಕಿತು.

ವಿಲಿಯಮ್ಸನ್​ ಏಕಾಂಗಿ ಹೋರಾಟ
ಮೂರನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದಿದ್ದ ನಾಯಕ ಕೇನ್​ ವಿಲಿಯಮ್ಸನ್ (48 ಎಸೆತ, 95 ರನ್​, 8 ಬೌಂಡರಿ, 6 ಸಿಕ್ಸರ್​) ಕೊನೆಯವರೆಗೂ ಅಬ್ಬರದ ಆಟವಾಡಿ, ತಂಡವನ್ನು ಗೆಲುವಿನ ಹೊಸ್ತಿಲಿಗೆ ತೆಗೆದುಕೊಂಡು ಹೋದರು. ಆದರೆ, ವಿಲಿಯಮ್ಸನ್​ಗೆ ಸಹ ಆಟಗಾರರು ಉತ್ತಮ ಸಾಥ್​ ನೀಡಲಿಲ್ಲ.

ಟೈ ಆದ ಪಂದ್ಯ
ಉಳಿದಂತೆ ಮಿಚೆಲ್​ ಸ್ಯಾಂಟ್ನರ್(9), ಕೊಲಿನ್​ ಗ್ರ್ಯಾಂಡ್​ಹೋಮ್​(5), ರಾಸ್​ ಟೇಲರ್​(17) ಗಳಿಸಿ ಔಟಾದರೆ, ಟಿಮ್​ ಸೈಫರ್ಟ್​ ಯಾವುದೇ ರನ್​ ಖಾತೆ ತೆರಯದೇ ಅಜೇಯರಾಗಿ ಉಳಿದರು. ಅಂತಿಮವಾಗಿ ಕಿವೀಸ್​ ಪಡೆ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 179 ರನ್​ ಗಳಿಸಿ ಭಾರತ ದಾಖಲಿಸಿದ್ದ ರನ್​ ಸಮನಾಗಿ ಬಂದು ನಿಂತಿತು.

ಸೂಪರ್​ ಓವರ್​ನಲ್ಲಿ ಸಿಗದ ಜಯ
ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ಗೆಲುವು ನಿರ್ಣಯಿಸಲು ಬಳಿಕ ಸೂಪರ್​ ಓವರ್ ನಡೆಸಲಾಯಿತು. ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟ್​ ಮಾಡಿದ ಕಿವೀಸ್​ ಪಡೆ ಜಸ್ಪ್ರಿತ್​ ಬೂಮ್ರಾ ಎಸೆದ ಓವರ್​ನಲ್ಲಿ ವಿಕೆಟ್​ ನಷ್ಟವಿಲ್ಲದೆ, ಬರೋಬ್ಬರಿ 17 ರನ್​ ಕಲೆಹಾಕಿತು. ಗುರಿ ಬೆನ್ನತ್ತಿದ ಭಾರತದ ಪರ ರೋಹಿತ್​ ಶರ್ಮ ಮತ್ತೊಮ್ಮೆ ವರವಾದರು. ಓವರ್​ನ ಅಂತಿಮ ಎರಡು ಎಸೆತದಲ್ಲೂ ಭರ್ಜರಿ ಸಿಕ್ಸರ್​ ಸಿಡಿಸಿ ಗೆಲುವಿಗೆ ಕಾರಣರಾದರು. ಒಟ್ಟು ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದಿಂದ ಸರಣಿ ವಶಪಡಿಸಿಕೊಂಡಿತು.

ನ್ಯೂಜಿಲೆಂಡ್​ ಬೆಂಬಿಡಿದ ಸೂಪರ್​ ಓವರ್​ ಭೂತ
ಕಳೆದ ವರ್ಷ ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯ ಆಂಗ್ಲರ ವಿರುದ್ಧದ ಫೈನಲ್​ ಪಂದ್ಯದಲ್ಲೂ ಕಿವೀಸ್​ಗೆ ಸೂಪರ್​ ಓವರ್ ಕೈಕೊಟ್ಟಿತ್ತು. ವಿಪರ್ಯಾಸವೆಂದರೆ ಸೂಪರ್​ ಓವರ್​ ಕೂಡ ಟೈ ಆಯಿತು. ಆದರೆ ಬೌಂಡರಿ ಲೆಕ್ಕದ ಆಧಾರದ ಮೇಲೆ ಇಂಗ್ಲೆಂಡ್​ಗೆ ಗೆಲುವು ನಿರ್ಣಯಿಸಲಾಗಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು.

ಟೀಮ್​ ಇಂಡಿಯಾ ಪರ ಶಾರ್ದೂಲ್​ ಠಾಕೂರ್​ ಮತ್ತು ಮಹಮ್ಮದ್​ ಶಮಿ ತಲಾ ಎರಡು ವಿಕೆಟ್​ ಪಡೆದರೆ, ಯಜುವೇಂದ್ರ ಚಹಾಲ್​ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು. ಆದರೆ ಸೂಪರ್​ ಓವರ್​ನಲ್ಲಿ ಯಾವುದೇ ವಿಕೆಟ್​ ಅನ್ನು ಟೀಮ್​ ಇಂಡಿಯಾ ಪಡೆಯಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net