ಕಿವೀಸ್​ ಸಂಘಟಿತ ಬೌಲಿಂಗ್​ ದಾಳಿಗೆ ತತ್ತರಿಸಿದ ಭಾರತ: ಏಕದಿನ ಸರಣಿ ಕೈಚೆಲ್ಲಿದ ಕೊಹ್ಲಿ ಪಡೆ

Ind vs Newz
Published on

ಆಕ್ಲೆಂಡ್​: ಇಲ್ಲಿನ ಈಡನ್​ ಪಾರ್ಕ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪ್ರಮುಖ ಆಟಗಾರರ ವೈಫಲ್ಯದಿಂದ ಪ್ರವಾಸಿ ಭಾರತ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ಸುಲಭವಾಗಿ ಸೋಲಿಗೆ ಶರಣಾಯಿತು. ಈ ಮೂಲಕ ಏಕದಿನ ಸರಣಿಯನ್ನು ಕೈಚೆಲ್ಲಿತು.

ಕಿವೀಸ್​ ಪಡೆ ನೀಡಿದ್ದ 274 ರನ್​ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾಗೆ ಮಯಾಂಕ್​ ಅಗರ್ವಾಲ್​(3) ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ 24 ರನ್​ ಗಳಿಸಿದ್ದ ಪೃಥ್ವಿ ಶಾ ವಿಕೆಟ್​ ಒಪ್ಪಿಸಿದರೆ, 15 ರನ್​ ಗಳಿಸಿ ನಾಯಕ ವಿರಾಟ್​ ಕೊಹ್ಲಿ ನಿರಾಸೆ ಮೂಡಿಸಿದರು. ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಕೆ.ಎಲ್​.ರಾಹುಲ್​(4) ಕೂಡ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದರು.

ತಂಡದ ಮೊತ್ತ 74 ರನ್​ ಆಗಿದ್ದಾಗಲೇ ಟೀಮ್​ ಇಂಡಿಯಾ ಪ್ರಮುಖ 4 ವಿಕೆಟ್​ಗಳನ್ನು ಕಡೆದುಕೊಂಡು ಸೋಲಿನ ದವಡೆಗೆ ಸಿಲುಕಿತು. ಬಳಿಕ ಬಂದ ಕೇದರ್​ ಜಾಧವ್(9) ಕೂಡ ಭರವಸೆ ಮೂಡಿಸಲಿಲ್ಲ. ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಶ್ರೇಯಸ್​ ಅಯ್ಯರ್​(52) ತಂಡದ ಮೊತ್ತವನ್ನು 100ರ ಗಡಿ ದಾಟಿಸಿ, ಅರ್ಧಶತಕ ದಾಖಲಿಸಿ ಹೊರ ನಡೆದರು. ಶಾರ್ದೂಲ್​ ಠಾಕೂರ್​(18) ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿದರು.

ಕೊನೆಯಲ್ಲಿ ಟೀಮ್​ ಇಂಡಿಯಾಕ್ಕೆ ಆಸರೆಯಾದ ರವೀಂದ್ರ ಜಡೇಜಾ ಮತ್ತು ನವದೀಪ್​ ಸೈನಿ ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು 200 ಗಡಿ ದಾಟಿಸಿ ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು. ಈ ಹಂತದಲ್ಲಿ 45 ರನ್​ ಗಳಿಸಿದ್ದ ನವದೀಪ್​ ಸೈನಿ ಔಟಾಗುವ ಮೂಲಕ ತಂಡಕ್ಕೆ ಮತ್ತೊಂದು ಆಘಾತವಾಯಿತು. ಇದರ ಬೆನ್ನಲ್ಲೇ ಯಜುವೇಂದ್ರ ಚಹಾಲ್​(10) ಕೂಡ ರನೌಟ್​ ಆದರು.

ಇತ್ತ ಏಕಾಂಗಿಯಾಗಿ ಕೊನೆಯವರೆಗೂ ಹೋರಾಡಿದ ರವೀಂದ್ರ ಜಡೇಜಾ(55) 49ನೇ ಓವರ್​ನಲ್ಲಿ ಕ್ಯಾಚಿತ್ತು ನಿರ್ಗಮಿಸುವ ಮೂಲಕ ಟೀಮ್​ ಇಂಡಿಯಾದ ಸೋಲು ಖಚಿತವಾಯಿತು. ಕೊನೆಯಲ್ಲಿ ಜಸ್ಪ್ರಿತ್​ ಬೂಮ್ರಾ ಯಾವುದೇ ರನ್​ ಖಾತೆ ತೆರೆಯದೇ ಅಜೇಯರಾಗಿ ಉಳಿದರು.

ಅಂತಿಮವಾಗಿ ಟೀಮ್​ ಇಂಡಿಯಾ 48.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 251 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ 2-0 ಅಂತರದಿಂದ ಸರಣಿಯನ್ನು ಕೈಚೆಲ್ಲಿತ್ತು. ಬಾಕಿ ಉಳಿದಿರುವ ಮತ್ತೊಂದು ಪಂದ್ಯದಲ್ಲಿ ಇದೇ ಮುಂದವರಿದರೆ ವೈಟ್​ವಾಷ್​ ಮುಖಭಂಗಕ್ಕೆ ಟೀಮ್​ ಇಂಡಿಯಾ ಗುರಿಯಾಗಲಿದೆ.

ಕಿವೀಸ್​ ಪರ ಹಮಿಶ್​ ಬೆನೆಟ್ಟ್​, ಟೀಮ್​ ಸೌಥಿ, ಕೈಲೆ ಜಮೈಶನ್​ ಮತ್ತು ಕೊಲಿನ್​ ಗ್ರ್ಯಾಂಡ್​ಹೋಮ್​ ತಲಾ ಎರಡು ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಜೇಮ್ಸ್​ ನಿಶಾಮ್​ ಒಂದು ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net