ಆಕ್ಲೆಂಡ್​ನಲ್ಲಿ ಇಂದು ಭಾರತ-ನ್ಯೂಜಿಲೆಂಡ್ 2ನೇ ಟಿ20; ಟಾಸ್ ಗೆದ್ದವರೇ ಬಾಸ್

India 26 jan 20
Published on

ಆಕ್ಲೆಂಡ್: ಮೊದಲ ಪಂದ್ಯದಲ್ಲಿ ಭರ್ಜರಿ ಚೇಸಿಂಗ್ ಮಾಡಿ ಗೆದ್ದಿರುವ ಭಾರತ ತಂಡ ನ್ಯೂಜಿಲೆಂಡ್ ನೆಲದ 2ನೇ ಸವಾಲಿಗೆ ಸಜ್ಜಾಗಿದೆ. ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾನುವಾರ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್​ನ ಈಡನ್ ಪಾರ್ಕ್​ನಲ್ಲೇ ಎರಡನೇ ಪಂದ್ಯದಲ್ಲಿ ಎದುರಿಸಲಿದ್ದು, ಮುನ್ನಡೆ ಹಿಗ್ಗಿಸಿಕೊಳ್ಳುವ ಹಂಬಲದಲ್ಲಿದೆ.

ಮೊದಲ ಪಂದ್ಯದಂತೆ 2ನೇ ಕಾದಾಟದಲ್ಲೂ ರನ್​ವುಳೆ ಹರಿಯುವ ನಿರೀಕ್ಷೆ ಇದ್ದು, ಭಾರತ ತಂಡದ ಬೌಲಿಂಗ್ ವಿಭಾಗದಿಂದ ಸುಧಾರಿತ ನಿರ್ವಹಣೆ ಅಗತ್ಯವಿದೆ. ಜಸ್​ಪ್ರೀತ್ ಬುಮ್ರಾ ಹೊರತಾಗಿ ಮೊದಲ ಪಂದ್ಯದಲ್ಲಿ ಉಭಯ ತಂಡಗಳ ಎಲ್ಲ ಬೌಲರ್​ಗಳು 8ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಸಣ್ಣ ಬೌಂಡರಿಗಳಿರುವ ಮೈದಾನದಲ್ಲಿ ರನ್ ನಿಯಂತ್ರಿಸುವುದೇ ಬೌಲರ್​ಗಳಿಗೆ ದೊಡ್ಡ ಸವಾಲಾಗಿದೆ.

ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಲಾರಂಭಿಸಿದ ಬಳಿಕ ಭಾರತ ತಂಡಕ್ಕೆ ಹೆಚ್ಚುವರಿ ಬ್ಯಾಟ್ಸ್ ಮನ್ ಸೇರ್ಪಡೆ ಅವಕಾಶ ಲಭಿಸಿರುವುದರಿಂದ ಬ್ಯಾಟಿಂಗ್ ವಿಭಾಗಕ್ಕೂ ಹೆಚ್ಚಿನ ಬಲ ಬಂದಿದೆ. ಫಿನಿಷರ್ ಕೆಲಸವನ್ನು ಶ್ರೇಯಸ್ ಅಯ್ಯರ್ ಸಮರ್ಥವಾಗಿ ನಿರ್ವಹಿಸಿರುವುದು ಕೂಡ ಕೊಹ್ಲಿ ಬಳಗದ ವಿಶ್ವಾಸ ವೃದ್ಧಿಸುವ ಅಂಶವಾಗಿದೆ.

ಚೇಸಿಂಗ್​ನಲ್ಲಿ ಭಾರತ ಪ್ರಬಲವಾಗಿದ್ದು, ಇತ್ತೀಚೆಗೆ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದಾಗ ರಕ್ಷಿಸಿಕೊಳ್ಳುವಂಥ ಬೃಹತ್ ಮೊತ್ತ ಪೇರಿಸಿತ್ತು. ಸರಣಿಯ ಮುಂದಿನ ಪಂದ್ಯಗಳಲ್ಲಿ ಭಾರತ, ಕಿವೀಸ್ ನೆಲದಲ್ಲೂ ಇಂಥ ನಿರ್ವಹಣೆ ತೋರಬೇಕಾದ ಸವಾಲು ಎದುರಾಗಬಹುದು. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಭಾರತ ಈ ಕಲೆಯನ್ನು ಕರಗತ ಮಾಡಿಕೊಳ್ಳುವುದು ಅಗತ್ಯವಾಗಿದೆ.

ಸೋಲಿನ ನಡುವೆ ಕಿವೀಸ್ ತೋರಿದ ಬ್ಯಾಟಿಂಗ್ ನಿರ್ವಹಣೆ ಚೇತೋಹಾರಿಯಾಗಿತ್ತು. ಅನುಭವಿಗಳಾದ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ರನ್ ಗಳಿಸಿರುವುದು ಕಿವೀಸ್ 200ರ ಗಡಿ ದಾಟಲು ನೆರವಾಗಿತ್ತು. ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್​ಹೋಮ್ ವೈಫಲ್ಯವನ್ನು ಇದು ಮರೆಮಾಚಿತ್ತು. ಆದರೆ ತಂಡಕ್ಕೆ ಹೆಚ್ಚಿನ ಸಮತೋಲನ ಸಿಗಬೇಕಾದರೆ ಆತಿಥೇಯರಿಗೆ ಆಲ್ರೌಂಡರ್​ಗಳಿಂದ ಉತ್ತಮ ಕೊಡುಗೆ ಅಗತ್ಯವಾಗಿದೆ.

ಟಾಸ್ ಗೆದ್ದವರೇ ಬಾಸ್: ಮೊದಲ ಪಂದ್ಯದಂತೆ ಈ ಬಾರಿಯೂ ಟಾಸ್ ಗೆದ್ದವರೇ ಬಾಸ್ ಆಗುವ ನಿರೀಕ್ಷೆ ಇದೆ. ಕಳೆದ ಪಂದ್ಯದಲ್ಲಿ 2ನೇ ಸರದಿಯಲ್ಲಿ ಬೌಲಿಂಗ್ ಮಾಡುವಾಗ ಇಬ್ಬನಿ ಸಮಸ್ಯೆ ಕಾಡಿದ್ದರಿಂದ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವುದು ನಿಶ್ಚಿತ. ಈಡನ್ ಪಾರ್ಕ್​ನಲ್ಲಿ ನಡೆದ ಕಳೆದ 6 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ದಾಖಲಿಸಿದೆ.

ಟೀಮ್ ನ್ಯೂಸ್

ಭಾರತ: ಗೆಲುವಿನ ಹೊರತಾಗಿಯೂ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯ ನಿರೀಕ್ಷೆ ಇದ್ದು, 3 ಓವರ್​ಗಳಲ್ಲೇ 44 ರನ್ ಬಿಟ್ಟುಕೊಟ್ಟ ವೇಗಿ ಶಾರ್ದೂಲ್ ಠಾಕೂರ್ ಬದಲಿಗೆ ನವದೀಪ್ ಸೈನಿ ಸ್ಥಾನ ಪಡೆಯಬಹುದು. ವಿಶ್ವಕಪ್ ನಂತರ ಒಮ್ಮೆಯೂ ಜತೆಯಾಗಿ ಆಡದ ಕುಲ್-ಚಾ ಖ್ಯಾತಿಯ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್​ರನ್ನು ಈ ಬಾರಿಯಾದರೂ ಕೊಹ್ಲಿ ಒಂದಾಗಿಸುವರೇ ಎಂಬ ಕುತೂಹಲವಿದೆ. ಈಡನ್ ಪಾರ್ಕ್​ನಲ್ಲಿ ವೇಗಿಗಳಿಗಿಂತ ಸ್ಪಿನ್ನರ್​ಗಳೇ ಮಿತವ್ಯಯಿ ಎನಿಸಿರುವುದು ಇದಕ್ಕೆ ಕಾರಣ.

ನ್ಯೂಜಿಲೆಂಡ್: ತವರು ನೆಲದಲ್ಲೇ ದೊಡ್ಡ ಮೊತ್ತವನ್ನು ರಕ್ಷಿಸಿಕೊಳ್ಳಲು ವಿಫಲವಾಗಿರುವ ಕಿವೀಸ್ ತಂಡವೂ ಬೌಲಿಂಗ್ ವಿಭಾಗವನ್ನು ಸದೃಢ ಪಡಿಸುವತ್ತ ಗಮನ ಹರಿಸಿದೆ. ಆಲ್ರೌಂಡರ್​ಗಳಾದ ಸ್ಕಾಟ್ ಕಗಿಲಿನ್ ಮತ್ತು ಡೆರಿಲ್ ಮಿಚೆಲ್ ಸೇರ್ಪಡೆಗೆ ಕಿವೀಸ್ ಆಸಕ್ತಿ ತೋರಿದೆ. ಇವರಿಬ್ಬರಲ್ಲಿ ಒಬ್ಬರಿಗೆ ಮಿಚೆಲ್ ಸ್ಯಾಂಟ್ನರ್ ಸ್ಥಾನ ಬಿಟ್ಟುಕೊಡಬಹುದು.

ರಾಹುಲ್ ಕೀಪಿಂಗ್​ಗೆ ದಾದಾ ಮೆಚ್ಚುಗೆ

ಕೋಲ್ಕತ: ತಜ್ಞ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು ಕೆಎಲ್ ರಾಹುಲ್ ಕೈಗೆ ಕೀಪಿಂಗ್ ಗ್ಲೌಸ್ ನೀಡಿರುವುದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಟೀಮ್ ಮ್ಯಾನೇಜ್​ವೆುಂಟ್ ನಿರ್ಧಾರ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಜತೆಗೆ ರಾಹುಲ್ ಕೀಪಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಸೀಮಿತ ಓವರ್ ಕ್ರಿಕೆಟ್​ನಲ್ಲಿ ರಾಹುಲ್ ಉತ್ತಮ ಆಟವಾಡುತ್ತಿದ್ದಾರೆ. ಅವರು ಕೀಪಿಂಗ್​ನಲ್ಲೂ ಉತ್ತಮ ನಿರ್ವಹಣೆ ಮುಂದುವರಿಸಲಿ. ಆದರೆ ಅವರನ್ನು ಕೀಪರ್ ಆಗಿ ಮುಂದುವರಿಸುವುದು ಟೀಮ್ ಮ್ಯಾನೇಜ್​ವೆುಂಟ್​ಗೆ ಬಿಟ್ಟ ವಿಚಾರ’ ಎಂದಿದ್ದಾರೆ. ಮುಂದಿನ ಟಿ20 ವಿಶ್ವಕಪ್​ನಲ್ಲೂ ರಾಹುಲ್ ಕೀಪರ್ ಆಗಿ ಆಡುವ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ, ‘ಆಯ್ಕೆಗಾರರು, ಕೊಹ್ಲಿ, ಕೋಚ್ ರವಿಶಾಸ್ತ್ರಿ ಅದನ್ನು ನಿರ್ಧರಿಸಲಿ. ಅವರು ಬಯಸಿದಂತೆ ಆಗುತ್ತದೆ’ ಎಂದಿದ್ದಾರೆ. ಗಂಗೂಲಿ ನಾಯಕರಾಗಿದ್ದಾಗಲೂ ಬ್ಯಾಟಿಂಗ್ ಪರಿಣತ ಕೀಪರ್ ಕೊರತೆಯಿಂದಾಗಿ ರಾಹುಲ್ ದ್ರಾವಿಡ್​ಗೆ ಕೀಪಿಂಗ್ ಜವಾಬ್ದಾರಿ ವಹಿಸುವ ಮೂಲಕ 2003ರ ವಿಶ್ವಕಪ್​ನಲ್ಲಿ ಯಶಸ್ಸು ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net