

ವೆಲ್ಲಿಂಗ್ಟನ್: ಪಂದ್ಯದಲ್ಲಿ ಹಿಡಿತ ಸಾಧಿಸುವ ಅಮೂಲ್ಯ ಅವಕಾಶವನ್ನು ಕೈಯಾರೆ ಹಾಳು ಮಾಡಿಕೊಂಡ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನ ಭೀತಿಯಲ್ಲಿದೆ. ಕೊನೇ ಮೂರು ವಿಕೆಟ್ಗೆ ನ್ಯೂಜಿಲೆಂಡ್ ತಂಡ 123 ರನ್ ಸೇರಿಸಲು ಅವಕಾಶ ಬಿಟ್ಟುಕೊಟ್ಟ ಭಾರತ, 2ನೇ ಇನಿಂಗ್ಸ್ನಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಳ್ಳುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಮೊಟ್ಟಮೊದಲ ಸೋಲಿನ ಹಾದಿಯಲ್ಲಿದೆ.
ಬೇಸಿನ್ ರಿಸರ್ವ್ ಮೈದಾನದಲ್ಲಿ ಭಾನುವಾರ 5 ವಿಕೆಟ್ಗೆ 216 ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್ ತಂಡ 100.2 ಓವರ್ಗಳಲ್ಲಿ 348 ರನ್ಗೆ ಆಲೌಟ್ ಆಯಿತು. ಇದರಿಂದ 183 ರನ್ಗಳ ದೊಡ್ಡ ಹಿನ್ನಡೆ ಕಂಡ ಭಾರತ ತಂಡ, 2ನೇ ಇನಿಂಗ್ಸ್ನಲ್ಲಿ 65 ಓವರ್ಗಳಲ್ಲಿ 4 ವಿಕೆಟ್ಗೆ 144 ರನ್ ಪೇರಿಸಿ 3ನೇ ದಿನದಾಟ ಮುಗಿಸಿದೆ. ತಂಡ ಇನ್ನೂ 39 ರನ್ಗಳ ಹಿನ್ನಡೆಯಲ್ಲಿದ್ದು, ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ (25* ರನ್, 67 ಎಸೆತ, 4 ಬೌಂಡರಿ) ಹಾಗೂ ಹನುಮ ವಿಹಾರಿ (15* ರನ್, 70 ಎಸೆತ, 2 ಬೌಂಡರಿ) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಹಿನ್ನಡೆಯಲ್ಲಿ ಅಳಿಸಲು ಭಾರತ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ದೊಡ್ಡ ಇನಿಂಗ್ಸ್ ಆಡಬೇಕಿತ್ತು. ಆದರೆ, ಆರಂಭಿಕ ಪೃಥ್ವಿ ಷಾರ ಇನ್ನೊಂದು ವೈಫಲ್ಯದಿಂದ 27 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಭಾರತದ ಚೇತರಿಕೆಯ ಜವಾಬ್ದಾರಿ ಕನ್ನಡಿಗ ಮಯಾಂಕ್ ಅಗರ್ವಾಲ್ (58) ಹಾಗೂ ಅನುಭವಿ ಚೇತೇಶ್ವರ ಪೂಜಾರ (11ರನ್, 81 ಎಸೆತ) ಹೆಗಲೇರಿತ್ತು. 2ನೇ ಅವಧಿಯ ಕೊನೇ ಓವರ್ನ ಕೊನೇ ಎಸೆತದಲ್ಲಿ ಬೌಲ್ಟ್ರ ಇನ್ಸ್ವಿಂಗರ್ ಅಂದಾಜಿಸುವಲ್ಲಿ ಎಡವಿದ ಪೂಜಾರ ಬೌಲ್ಡ್ ಆದರು. 2ನೇ ವಿಕೆಟ್ಗೆ ಈ ಜೋಡಿ 51 ರನ್ ಜತೆಯಾಟವಾಡಿತ್ತು. ಅರ್ಧಶತಕ ಬಾರಿಸಿ ದೊಡ್ಡ ಇನಿಂಗ್ಸ್ನ ಸೂಚನೆ ನೀಡಿದ್ದ ಮಯಾಂಕ್, ಸೌಥಿ ಎಸೆತವನ್ನು ಫ್ಲಿಕ್ ಮಾಡುವ ಯತ್ನದಲ್ಲಿ ಎಡವಿ ವಿಕೆಟ್ಕೀಪರ್ ಬಿಜೆ ವ್ಯಾಟ್ಲಿಂಗ್ಗೆ ಕ್ಯಾಚ್ ನೀಡಿದರು. ಎಲ್ಲರೂ ಚೆಂಡು ಬ್ಯಾಟ್ಗೆ ತಾಕಿದೆ ಎಂದು ಅಂದಾಜು ಮಾಡಿದ್ದರೂ, ಹಾಟ್ಸ್ಪಾಟ್ನಲ್ಲಿ ಚೆಂಡು ಬ್ಯಾಟ್ಗೆ ತಾಕಿಲ್ಲದೆ ಇರುವುದು ಖಚಿತವಾಗಿತ್ತು. ತಂಡದ ಮೊತ್ತ 113 ರನ್ ಆಗಿದ್ದಾಗ ಬೌಲ್ಟ್ರ ಬೌನ್ಸರ್ಗೆ ಹುಕ್ ಮಾಡಲು ಯತ್ನಿಸಿದ ಕೊಹ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದಾಗ ಪಂದ್ಯದಲ್ಲಿ ಕಿವೀಸ್ನ ಹಿಡಿತ ಮತ್ತಷ್ಟು ಗಟ್ಟಿಯಾಯಿತು. -ಏಜೆನ್ಸೀಸ್
ಭಾರತವನ್ನು ಕಾಡಿದ ಕಿವೀಸ್ ಕೆಳಸರದಿ
3ನೇ ದಿನದಾಟದಲ್ಲಿಯೇ 51 ರನ್ಗಳ ಅಮೂಲ್ಯ ಮುನ್ನಡೆ ಸಂಪಾದಿಸಿದ್ದ ನ್ಯೂಜಿಲೆಂಡ್, ಭಾನುವಾರ ಅಂದಾಜಿಸಲಾಗದಂಥ ಮುನ್ನಡೆಯನ್ನು ಪಡೆದುಕೊಂಡಿತು. ಮೊದಲ ಇನಿಂಗ್ಸ್ನಲ್ಲಿ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದ ಏಳಡಿ ಎತ್ತರದ ವೇಗಿ ಕೈಲ್ ಜೇಮಿಸನ್, ಬ್ಯಾಟಿಂಗ್ನಲ್ಲೂ ಟೀಮ್ ಇಂಡಿಯಾವನ್ನು ಕಾಡಿದರು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಜೇಮಿಸನ್ 45 ಎಸೆತಗಳಲ್ಲಿ 4 ಸಿಕ್ಸರ್ , 1 ಬೌಂಡರಿ ಇದ್ದ 44 ರನ್ ಸಿಡಿಸಿ ಭಾರತವನ್ನು ಕಾಡಿದರು. ಆರ್.ಅಶ್ವಿನ್ರ ಎಸೆತಕ್ಕೆ ಜೇಮಿಸನ್, ಹನುಮ ವಿಹಾರಿಗೆ ಕ್ಯಾಚ್ ನೀಡಿದಾಗ ಕಿವೀಸ್ ಇನ್ನೂ 300ರ ಗಡಿ ದಾಟಿರಲಿಲ್ಲ. ಇನ್ನೊಬ್ಬ ವೇಗಿ ಟ್ರೆಂಟ್ ಬೌಲ್ಟ್ 24 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 38 ರನ್ ಸಿಡಿಸಿದರು. ಈ ಜತೆಯಾಟದಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್ಹೋಮ್ (43 ರನ್, 74 ಎಸೆತ, 5 ಬೌಂಡರಿ) ಇವರಿಬ್ಬರಿಗೂ ಸ್ಪೋಟಕ ಆಟವಾಡಲು ಅನುವು ಮಾಡಿಕೊಟ್ಟರು. ಕೊನೇ ವಿಕೆಟ್ಗೆ ಬೌಲ್ಟ್ ಹಾಗೂ ಅಜಾಜ್ ಪಟೇಲ್ ಜೋಡಿ 38 ರನ್ ಕೂಡಿಸಿ ತಂಡದ 183 ರನ್ ಮುನ್ನಡೆಗೆ ಕಾರಣರಾದರು.
ದಿನದ ಮೊದಲ ಎಸೆತದಲ್ಲೇ ವಿಕೆಟ್
17 ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ ವಿಕೆಟ್ಕೀಪರ್ ಬಿಜೆ ವ್ಯಾಟ್ಲಿಂಗ್ ದಿನದ ಮೊದಲ ಎಸೆತದಲ್ಲಿಯೇ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ನೀಡಿದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 294 ಎಸೆತಗಳ ಬಳಿಕ ಬುಮ್ರಾ ಮೊದಲ ವಿಕೆಟ್ ಸಾಧನೆ ಮಾಡಿದರು. 2ನೇ ದಿನದಾಟದ ಮೊತ್ತಕ್ಕೆ 9 ರನ್ ಸೇರಿಸಿದ ವೇಳೆಯಲ್ಲಿ 7ನೇ ವಿಕೆಟ್ ರೂಪದಲ್ಲಿ ಟಿಮ್ ಸೌಥಿ ಔಟಾದಾಗ ಭಾರತದ ಹಿನ್ನಡೆ ಕೇವಲ 60 ರನ್ ಆಗಿತ್ತು. ಆದರೆ, ಕಿವೀಸ್ನ ಕೊನೇ ಮೂರು ವಿಕೆಟ್ಗಳ ಜತೆಯಾಟ ಭಾರತದ ಯೋಜನೆಯನ್ನು ಉಲ್ಟಾ ಮಾಡಿತು.