

ಹ್ಯಾಮಿಲ್ಟನ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ (103 ರನ್, 107 ಎಸೆತ, 11 ಬೌಂಡರಿ, 1 ಸಿಕ್ಸರ್) ಹಾಗೂ ಕನ್ನಡಿಗ ಕೆಎಲ್ ರಾಹುಲ್ (88 ರನ್, 64 ಎಸೆತ, 3 ಬೌಂಡರಿ, 6 ಸಿಕ್ಸರ್) ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್ನಿಂದ ಭಾರತ ತಂಡ ಬೃಹತ್ ಮೊತ್ತ ಪೇರಿಸಿದರೂ, ರಕ್ಷಿಸಿಕೊಳ್ಳಲು ವಿಫಲವಾದ ಭಾರತ ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿದೆ. ಅನುಭವಿ ಬ್ಯಾಟ್ಸ್ಮನ್ ರಾಸ್ ಟೇಲರ್ (109*ರನ್, 84 ಎಸೆತ, 10 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ಗೆ ತಲೆಬಾಗಿದ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ 4 ವಿಕೆಟ್ಗಳಿಂದ ಶರಣಾಯಿತು. ಟಿ20 ಸರಣಿಯ ವೈಟ್ವಾಷ್ ಮುಖಭಂಗದ ಬಳಿಕ ವಿಶ್ವಕಪ್ ರನ್ನರ್ಅಪ್ ಕಿವೀಸ್ ತಂಡ ಏಕದಿನದಲ್ಲಿ ತಿರುಗೇಟು ನೀಡಿದೆ.
ಸೆಡ್ಡನ್ ಪಾರ್ಕ್ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 4 ವಿಕೆಟ್ಗೆ 347 ರನ್ ಗಳಿಸಿತು. ಪ್ರತಿಯಾಗಿ ನ್ಯೂಜಿಲೆಂಡ್ 48.1 ಓವರ್ಗಳಲ್ಲಿ 6 ವಿಕೆಟ್ಗೆ 348 ರನ್ ಗಳಿಸಿ ಜಯದ ನಗೆ ಬೀರಿತು. ಸತತ 8 ಸೋಲಿನ ಬಳಿಕ ಜಯದ ಹಾದಿಗೆ ಮರಳಿದ ಕಿವೀಸ್ ತಂಡ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕಿವೀಸ್ ಉತ್ತಮ ಆರಂಭ: ಬೃಹತ್ ಮೊತ್ತ ಬೆನ್ನಟ್ಟಿದ ಕಿವೀಸ್ಗೆ ಆರಂಭಿಕರಾದ ಮಾರ್ಟಿನ್ ಗುಪ್ಟಿಲ್ (32) ಹಾಗೂ ಹೆನ್ರಿ ನಿಕೋಲ್ಸ್ ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು. ಮೊದಲ ವಿಕೆಟ್ಗೆ 85 ರನ್ ಪೇರಿಸಿದ್ದ ವೇಳೆ ಶಾರ್ದೂಲ್ ಠಾಕೂರ್ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ ಬಂದ ಟಾಮ್ ಬ್ಲಂಡೆಲ್ (9) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಗ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ರಾಸ್ ಟೇಲರ್ ಭಾರತೀಯ ಬೌಲರ್ಗಳನ್ನು ದಂಡಿಸಿ, ನಿಕೋಲ್ಸ್ ಜತೆಗೂಡಿ 3ನೇ ವಿಕೆಟ್ಗೆ 62 ರನ್ ಜತೆಯಾಟವಾಡಿದರು. -ಏಜೆನ್ಸೀಸ್
ರನ್ವೇಗ ಹೆಚ್ಚಿಸಿದ ರಾಹುಲ್-ಶ್ರೇಯಸ್
ಆತಿಥೇಯ ನ್ಯೂಜಿಲೆಂಡ್ ತಂಡದ ಬಿಗಿ ಬೌಲಿಂಗ್ ದಾಳಿಯಿಂದಾಗಿ ಭಾರತ ತಂಡ 29ನೇ ಓವರ್ ಅಂತ್ಯಕ್ಕೆ 3 ವಿಕೆಟ್ಗೆ 156 ರನ್ ಪೇರಿಸಲಷ್ಟೇ ಶಕ್ತವಾಗಿತ್ತು. ಈ ವೇಳೆ ಜತೆಯಾದ ಶ್ರೇಯಸ್ ಅಯ್ಯರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಜೋಡಿ ಪಂದ್ಯದ ದಿಕ್ಕನ್ನೇ ಬದಲಿಸಿತು. ಟಿ20 ಮಾದರಿಯಲ್ಲಿ ಬ್ಯಾಟ್ ಬೀಸುವ ಮೂಲಕ, ಸಾಧಾರಣ ಮೊತ್ತದತ್ತ ಸಾಗುತ್ತಿದ್ದ ತಂಡದ ಮೊತ್ತವನ್ನು ಹಿಗ್ಗಿಸಿತು. ಪ್ರತಿ ಓವರ್ಗೆ ಸರಾಸರಿ 10ರಂತೆ ರನ್ ಪೇರಿಸಿದ ಈ ಜೋಡಿ ಪಂದ್ಯದ ಮೊತ್ತ 300ರ ಗಡಿ ದಾಟಲು ನೆರವಾಯಿತು. ಈ ಜೋಡಿ 4ನೇ ವಿಕೆಟ್ಗೆ 136ರನ್ ಜತೆಯಾಟವಾಡಿತು. ಏಕದಿನ ಮಾದರಿಯಲ್ಲಿ ಚೊಚ್ಚಲ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕಕ್ಕೆ ಸಮರ್ಥ ಬ್ಯಾಟ್ಸ್ಮನ್ ಎಂಬುದನ್ನು ನಿರೂಪಿಸಿದರು. ಶತಕ ಸಿಡಿಸಿದ ಬೆನ್ನಲ್ಲೇ ಟಿಮ್ ಸೌಥಿಗೆ ವಿಕೆಟ್ ನೀಡಿದರು. ಬಳಿಕ ರಾಹುಲ್ ಹಾಗೂ ಕೇದಾರ್ ಜಾಧವ್ (26*ರನ್, 15 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಡಿ ಕೊನೇ 27 ಎಸೆತಗಳಲ್ಲಿ 58 ರನ್ ಕಲೆಹಾಕಿ ಮೊತ್ತವನ್ನು 345ರ ಗಡಿ ದಾಟಿಸಿತು.
ರಕ್ಷಿಸಿಕೊಳ್ಳುವಂಥ ಮೊತ್ತ ಇದಾಗಿತ್ತು. ಟಾಮ್ ಲಾಥಮ್ ಕಟ್ಟಿದ ಅದ್ಭುತ ಇನಿಂಗ್ಸ್ ನಮ್ಮ ಗೆಲುವು ಕಸಿಯಿತು. ನ್ಯೂಜಿಲೆಂಡ್ ಅದ್ಭುತ ನಿರ್ವಹಣೆ ತೋರಿತು. ಟಾಮ್ ಹಾಗೂ ಟೇಲರ್ ಜೋಡಿಗೆ ಗೆಲುವಿನ ಕ್ರೆಡಿಟ್ ಸಲ್ಲಬೇಕು. | ವಿರಾಟ್ ಕೊಹ್ಲಿ
ಭಾರತ ತಂಡದ ನಾಯಕ
ಟಿ20 ಕ್ರಿಕೆಟ್ನಲ್ಲಿ ಗೆಲುವಿಗಾಗಿ ಹೋರಾಡಿದರೂ ಅಂತಿಮ ಹಂತದಲ್ಲಿ ಕೈಕೊಡುತ್ತಿದ್ದ ಅನುಭವಿ ರಾಸ್ ಟೇಲರ್ ಏಕದಿನದಲ್ಲಿ ಅಂಥ ತಪ್ಪೆಸಗಲಿಲ್ಲ. ಸಮರ್ಥ ನಿರ್ವಹಣೆ ಮೂಲಕ ಅಂತಿಮ ಕ್ಷಣದವರೆಗೂ ಕ್ರೀಸ್ನಲ್ಲಿ ನಿಂತು ತಂಡಕ್ಕೆ ಜಯ ತಂದುಕೊಟ್ಟರು. ಟೇಲರ್ಗೆ ವಿಕೆಟ್ ಕೀಪರ್ ಹಾಗೂ ಹಂಗಾಮಿ ನಾಯಕ ಟಾಮ್ ಲಾಥಮ್ ಕೂಡ ಅಗತ್ಯ ಸಾಥ್ ನೀಡಿದರು. ಟೇಲರ್-ಲಾಥಮ್ ಜೋಡಿ 4ನೇ ವಿಕೆಟ್ಗೆ 138 ರನ್ ಜತೆಯಾಟವಾಡಿ ಗೆಲುವನ್ನು ಸುಲಭವಾಗಿಸಿತು. ಲಾಥಮ್ ಕುಲದೀಪ್ ಯಾದವ್ ಎಸೆತದಲ್ಲಿ ನಿರ್ಗಮಿಸಿದ ಬೆನ್ನಲ್ಲೇ ನೀಶಾಮ್ (9) ಹಾಗೂ ಗ್ರಾಂಡ್ಹೋಮ್ (1) ವಿಫಲರಾದರೂ, ಮತ್ತೊಂದು ತುದಿಯಲ್ಲಿದ್ದ ಟೇಲರ್ ಯಾವುದೇ ಅಪಾಯಕ್ಕೆ ಎಡೆಮಾಡಿಕೊಡದಂತೆ, ಇನ್ನೂ 11 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಶ್ರೇಯಸ್-ಕೊಹ್ಲಿ ಆಸರೆ
ಹೊಸ ಆರಂಭಿಕರಾದ ಪೃಥ್ವಿ ಷಾ-ಮಯಾಂಕ್ ಅಗರ್ವಾಲ್ ಅರ್ಧಶತಕದ ಜತೆಯಾಟವಾಡಿ ನಿರ್ಗಮಿಸಿದ ಬಳಿಕ ಜತೆಯಾದ ನಾಯಕ ವಿರಾಟ್ ಕೊಹ್ಲಿ (51ರನ್, 63 ಎಸೆತ, 6 ಬೌಂಡರಿ) ಹಾಗೂ ಶ್ರೇಯಸ್ ಅಯ್ಯರ್ ಜೋಡಿ ಬೃಹತ್ ಮೊತ್ತದ ಆಸೆಗೆ ಬಲ ತುಂಬಿತು. ವಿಕೆಟ್ ಕಾಯ್ದುಕೊಳ್ಳುವುದರ ಜತೆಗೆ ಇನಿಂಗ್ಸ್ ಕಟ್ಟಲು ಈ ಜೋಡಿ ಯಶಸ್ವಿಯಾಯಿತು. ಕೊಹ್ಲಿ ಪಾಲಿಗೆ ಇಶ್ ಸೋಧಿ ಮತ್ತೊಮ್ಮೆವಿಲನ್ ಆದರು. ಅರ್ಧಶತಕ ಗಳಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ, ಇಶ್ ಸೋಧಿ ಎಸೆತವನ್ನು ಎದುರಿಸಲು ವಿಫಲರಾಗಿ ಬೌಲ್ಡ್ ಆದರು. ಈ ವೇಳೆಗೆ ಕೊಹ್ಲಿ-ಶ್ರೇಯಸ್ ಜೋಡಿ 3ನೇ ವಿಕೆಟ್ಗೆ 102 ರನ್ ಕಲೆಹಾಕಿತ್ತು.