

ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ, ಸ್ಟೀವ್ ಸ್ಮಿತ್(131) ಅವರ ಶತಕದಾಟದ ನೆರವಿನಿಂದ ಆತಿಥೇಯ ಭಾರತಕ್ಕೆ 287 ರನ್ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಪಡೆಗೆ ಡೇವಿಡ್ ವಾರ್ನರ್(3) ಆರಂಭಿಕ ಆಘಾತ ನೀಡಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ನಾಯಕ ಆ್ಯರೂನ್ ಫಿಂಚ್(19) ಕೂಡ ರನೌಟ್ ಆಗಿ ನಿರ್ಗಮಿಸಿದರು. 46 ರನ್ಗೆ ಪ್ರಮುಖ 2 ವಿಕೆಟ್ ಕಳೆದುಕೊಂಡು ಆಸೀಸ್ ಪಡೆ ಸಂಕಷ್ಟಕ್ಕೆ ಸಿಲುಕಿತು.
ಮೂರನೇ ಕ್ರಮಾಂಕದಲ್ಲಿ ಬಂದ ಸ್ಮಿತ್ ತಂಡಕ್ಕೆ ಆಸರೆಯಾಗಿ ನಿಂತರು. ನಿಧಾನಗತಿಯ ಬ್ಯಾಟ್ ಬೀಸುತ್ತಾ ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು. ಈ ವೇಳೆ ಸ್ಮಿತ್ಗೆ ಸಾಥ್ ನೀಡಿದ ಮಾರ್ನಸ್ ಲಬಸ್ಛಗ್ನೆ(54) ರನ್ಗಳ ಅರ್ಧ ಶತಕ ಗಳಿಸಿ ತಂಡದ ಮೊತ್ತ 173 ರನ್ ಆಗಿದ್ದಾಗ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಮಿಚೆಲ್ ಸ್ಟಾರ್ಕ್ ಯಾವುದೇ ರನ್ ಖಾತೆ ತೆರೆಯದೇ ಬಂದಷ್ಟೇ ವೇಗವಾಗಿ ವಾಪಸ್ಸಾದರು.
ಅಲೆಕ್ಸ್ ಕ್ಯಾರೆ 35 ರನ್ಗಳ ಉಪಯುಕ್ತ ಕಾಣಿಕೆ ನೀಡಿದರೆ, ಆಸ್ಥಾನ್ ಟರ್ನರ್(4) ಬಂದ ದಾರಿ ಹಿಡಿದರು. ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಸ್ಮಿತ್ ತಂಡದ ಮೊತ್ತವನ್ನು 270ರ ಗಡಿ ದಾಟಿಸಿ, 131 ರನ್ಗಳ ಶತಕ ಸಂಭ್ರಮಿಸಿ ತಂಡಕ್ಕೆ ಬೆಂಗಾವಲಾಗಿ ನಿಂತು, ನಿರ್ಗಮಿಸಿದರು. ಇದರ ಬೆನ್ನಲ್ಲೇ ಪ್ಯಾಟ್ ಕ್ಯುಮಿನ್ಸ್(0), ಆ್ಯಡಮ್ ಝಂಪಾ(1) ವಿಕೆಟ್ ಒಪ್ಪಿಸಿ ಹೊರ ನಡೆದರು. ಕೊನೆಯಲ್ಲಿ ಆಸ್ಥಾನ್ ಅಗರ್(11*) ಮತ್ತು ಜೋಶ್ ಹಜಾಲ್ವುಡ್(1*) ಅಜೇಯರಾಗಿ ಉಳಿದರು.
ಅಂತಿಮವಾಗಿ ಆಸೀಸ್ ಪಡೆ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 286 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ ಪ್ರಮುಖ 4 ವಿಕೆಟ್ ಕಬಳಿಸಿ ಆಸೀಸ್ ಬಳಗವನ್ನು ಕಾಡಿದರು. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್ ಉರುಳಿಸಿದರೆ, ನವದೀಪ್ ಸೈನಿ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ಗೆ ತೃಪ್ತಿಪಟ್ಟರು. (ಏಜೆನ್ಸೀಸ್)