

ರಾಜ್ಕೋಟ್: ಶಿಖರ್ ಧವನ್(96) ಹಾಗೂ ಕನ್ನಡಿಗ ಕೆ.ಎಲ್.ರಾಹುಲ್(80) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಭಾರತ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 341 ರನ್ ಸವಾಲಿನ ಗುರಿ ನೀಡಿದೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 81 ರನ್ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ವೇಳೆ 42 ರನ್ ಗಳಿಸಿ ನಿಧಾನಗತಿ ಬ್ಯಾಟ್ ಬೀಸುತ್ತಿದ್ದ ರೋಹಿತ್ ಎಲ್ಬಿ ಬಲೆಗೆ ಬಿದ್ದರು. ಬಳಿಕ ಧವನ್ ಜತೆಗೂಡಿದ ನಾಯಕ ವಿರಾಟ್ ಕೊಹ್ಲಿ ಕೂಡ ಒಳ್ಳೆಯ ಜತೆಯಾಟವಾಡಿದರು. ತಂಡದ ಮೊತ್ತ 184 ರನ್ ಆಗಿದ್ದಾಗ 96 ರನ್ ಗಳಿಸಿದ್ದ ಧವನ್ ಸ್ಫೋಟಕ ಹೊಡೆತಕ್ಕೆ ಕೈಹಾಕಿ ಕ್ಯಾಚಿತ್ತು ಶತಕ ವಂಚಿತರಾದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಕೂಡ್(7) ಪೆವಲಿಯನ್ಗೆ ಮರಳಿದರು.
ಇತ್ತ ಒಳ್ಳೆಯ ಮೊತ್ತ ಕಲೆಹಾಕುತ್ತಿದ್ದ ವಿರಾಟ್ ಕೊಹ್ಲಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿ 78 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಮನಿಶ್ ಪಾಂಡೆ(2) ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೇ ಬಂದಷ್ಟೇ ವೇಗವಾಗಿ ಪೆವಲಿಯನ್ ಸೇರಿದರು.
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಟೀಮ್ ಇಂಡಿಯಾಗೆ ಕೊನೆಯವರೆಗೂ ಆಸರೆಯಾಗಿ ನಿಂತರು. ಕೇವಲ 52 ಎಸೆತ ಎದುರಿಸಿದ ರಾಹುಲ್ 6 ಬೌಂಡರಿ ಮತ್ತು ಮೂರು ಸಿಕ್ಸರ್ ಒಳಗೊಂಡ ಸ್ಫೋಟಕ 80 ರನ್ಗಳಿಸಿ ಅಜೇಯರಾಗಿ ಉಳಿದರು. ರವೀಂದ್ರ ಜಡೇಜಾ 20 ರನ್ ಗಳಿಸಿದರೆ, ಮಹಮ್ಮದ್ ಶಮಿ 1 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 340 ರನ್ ಕಲೆಹಾಕಿತು. ಆಸಿಸ್ ಪರ ಉತ್ತಮ ಬೌಲಿಂಗ್ ದಾಲಿ ಮಾಡಿದ ಆ್ಯಡಮ್ ಝಂಪಾ 3 ವಿಕೆಟ್ ಕಬಳಿಸಿದರೆ, ಕೇನ್ ರಿಚರ್ಡ್ಸನ್ 2 ವಿಕೆಟ್ ಪಡೆದರು. (ಏಜೆನ್ಸೀಸ್)