

ಇಂದೋರ್: ಶ್ರೇಯಸ್ ಅಯ್ಯರ್ (105 ರನ್, 90 ಎಸೆತ, 11 ಬೌಂಡರಿ, 3 ಸಿಕ್ಸರ್) ಹಾಗೂ ಆರಂಭಿಕ ಶುಭಮಾನ್ ಗಿಲ್ (104 ರನ್, 97 ಎಸೆತ, 6 ಬೌಂಡರಿ, 4 ಸಿಕ್ಸರ್) ಆಕರ್ಷಕ ಶತಕಗಳ ಬಲದಿಂದ ಮಳೆ ಬಾಧಿತ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ಎದುರು ಡಕ್ವತ್-ಲೂಯಿಸ್ ನಿಯಮದನ್ವಯ 99 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಕೆಎಲ್ ರಾಹುಲ್ ಹಂಗಾಮಿ ನಾಯಕತ್ವದ ಭಾರತ ತಂಡ 3 ಪಂದ್ಯಗಳ ಸರಣಿಯನ್ನು, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0ಯಿಂದ ವಶಪಡಿಸಿಕೊಂಡಿದೆ. ಪ್ರಮುಖ ಆಟಗಾರರ ಗೈರಿನ ನಡುವೆಯೂ ಭರ್ಜರಿ ಆಟವಾಡಿದ ಟೀಮ್ ಇಂಡಿಯಾ, ತವರಿನ ವಿಶ್ವಕಪ್‌ವರೆಗೂ ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ನಂ.1 ಪಟ್ಟ ಭದ್ರಪಡಿಸಿಕೊಂಡಿದೆ.
ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಶ್ರೇಯಸ್-ಗಿಲ್ ಭರ್ಜರಿ ಜತೆಯಾಟ ಹಾಗೂ ಸೂರ್ಯಕುಮಾರ್ ಯಾದವ್ (72* ರನ್, 37 ಎಸೆತ, 6 ಬೌಂಡರಿ, 6 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ 5 ವಿಕೆಟ್‌ಗೆ 399 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಆಸೀಸ್, 9 ಓವರ್‌ಗಳಲ್ಲಿ 2 ವಿಕೆಟ್‌ಗೆ 56 ರನ್‌ಗಳಿಸಿದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರಿಂದಾಗಿ ಒಂದು ಗಂಟೆ ಕಾಲ ಆಟ ಸ್ಥಗಿತಗೊಂಡಿತು. ಬಳಿಕ ಡಕ್ವತ್-ಲೂಯಿಸ್ ನಿಯಮದನ್ವಯ ಆಸೀಸ್‌ಗೆ 33 ಓವರ್‌ಗಳಲ್ಲಿ 317 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಪ್ರತಿಯಾಗಿ ಆಸ್ಟ್ರೇಲಿಯಾ 28.2 ಓವರ್‌ಗಳಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡು ಶರಣಾಯಿತು.
ಕನ್ನಡಿಗ ಪ್ರಸಿದ್ಧಕೃಷ್ಣ ಆಘಾತ: ಸವಾಲಿನ ಮೊತ್ತ ಬೆನ್ನಟ್ಟಿದ ಆಸೀಸ್‌ಗೆ ವೇಗಿ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ಆರಂಭಿಕ ಆಘಾತ ನೀಡಿದರು. ತಾನೆಸೆದ ಮೊದಲ ಓವರ್‌ನಲ್ಲಿ ಆರಂಭಿಕ ಮ್ಯಾಥ್ಯೂ ಶಾರ್ಟ್ (9), ಹಂಗಾಮಿ ನಾಯಕ ಸ್ಟೀವನ್ ಸ್ಮಿತ್ (0) ವಿಕೆಟ್ ಕಬಳಿಸಿ ಪ್ರಸಿದ್ಧ ಕೃಷ್ಣ ಮಿಂಚಿದರು.
ಆಸೀಸ್‌ಗೆ ಅಶ್ವಿನ್-ಜಡೇಜಾ ಕಡಿವಾಣ: ಡೇವಿಡ್ ವಾರ್ನರ್ (53 ರನ್, 39 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಮಾರ್ನಸ್ ಲಬುಶೇನ್ (27) 3ನೇ ವಿಕೆಟ್‌ಗೆ 80 ರನ್ ಸೇರಿಸಿ ಕೆಲಕಾಲ ಪ್ರತಿರೋಧ ತೋರಿದರು. ಮಳೆ ವಿರಾಮದ ಬಳಿಕ ಒತ್ತಡಕ್ಕೆ ಸಿಲುಕಿದ ಆಸೀಸ್ ಬ್ಯಾಟರ್‌ಗಳು ರನ್‌ಗಳಿಸುವ ಭರದಲ್ಲಿ ವಿಕೆಟ್ ಕೈಚೆಲ್ಲಿದರು. ಅನುಭವಿ ಆರ್. ಅಶ್ವಿನ್ ಸ್ಪಿನ್ ಬೌಲಿಂಗ್ ಎದುರು ಬಲಗೈ ಬ್ಯಾಟಿಂಗ್ ನಡೆಸಿದ ವಾರ್ನರ್ ಬೌಂಡರಿ ಸಹ ಸಿಡಿಸಿದರು. ಸತತ ಅರ್ಧಶತಕಗಳಿಸಿದ ವಾರ್ನರ್ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಅಶ್ವಿನ್ ಕೇರಂ ಎಸೆತಕ್ಕೆ ರಿರ್ವಸ್ ಸ್ವೀಪ್‌ಗೆ ಯತ್ನಿಸಿ ಎಲ್‌ಬಿ ಬಲೆಗೆ ಬಿದ್ದರು. 4 ಎಸೆತದ ಅಂತರದಲ್ಲಿ ಜೋಸ್ ಇಂಗ್ಲಿಸ್ (6) ವಿಕೆಟ್ ಕಿತ್ತ ಅಶ್ವಿನ್ ಆಸೀಸ್‌ನ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಸಾಥ್ ನೀಡಿದ ಆಲ್ರೌಂಡರ್ ರವೀಂದ್ರ ಜಡೇಜಾ, ಅಲೆಕ್ಸ್ ಕ್ಯಾರಿ (14) ಹಾಗೂ ಆಡಂ ಜಂಪಾ (5) ವಿಕೆಟ್ ಪಡೆದು ಇಂದೋರ್‌ನಲ್ಲಿ ಸ್ಪಿನ್ ಜಾದೂ ಪ್ರದರ್ಶಿಸಿದರು. ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ ಸೀನ್ ಅಬೋಟ್ (54 ರನ್, 36 ಎಸೆತ, 4 ಬೌಂಡರಿ, 5 ಸಿಕ್ಸರ್) ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಹ್ಯಾಜಲ್‌ವುಡ್ (23) ಜತೆಯಾಗಿ 9ನೇ ವಿಕೆಟ್‌ಗೆ 77 ರನ್ ಬಾರಿಸಿ ಸೋಲಿನ ಅಂತರ ತಗ್ಗಿಸಿದರು.
ಶ್ರೇಯಸ್ ಭರ್ಜರಿ ಕಂಬ್ಯಾಕ್ ಸಮರ್ಥ ಸಾಥ್ ನೀಡಿದ ಗಿಲ್ : ಹಿಂದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದ್ದ ಋತುರಾಜ್ ಗಾಯಕ್ವಾಡ್ (8) ಈ ಬಾರಿ ಬೇಗನೆ ನಿರ್ಗಮಿಸಿದರು. ಬಳಿಕ ಕ್ರೀಸ್‌ಗಿಳಿದ ಶ್ರೇಯಸ್ ಅಯ್ಯರ್, ಶುಭಮಾನ್ ಗಿಲ್ ಜತೆಗೂಡಿ ಆಸೀಸ್ ಬೌಲರ್‌ಗಳ ಬೆವರಿಳಿಸಿದರು. ಇವರಿಬ್ಬರು 2ನೇ ವಿಕೆಟ್‌ಗೆ ಭರ್ತಿ 200 ರನ್ ಸೇರಿಸಿದರು. ಆರಂಭದಿಂದಲೇ ವೇಗವಾಗಿ ರನ್ ಕಲೆಹಾಕಿದ ಶ್ರೇಯಸ್ ವಿಶ್ವಕಪ್‌ಗೆ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡರು. ಮಳೆ ಅಡ್ಡಿಪಡಿಸಿದರೂ ಅದೇ ಲಯದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಶ್ರೇಯಸ್‌ಗೆ ತಾಳ್ಮೆಯ ಬ್ಯಾಟಿಂಗ್ ಮೂಲಕ ಗಿಲ್ ಉತ್ತಮ ಬೆಂಬಲ ನೀಡಿದರು. ಅರ್ಧಶತಕದ ಬಳಿಕ ಗಿಲ್ ಕೂಡ ಬಿರುಸಿನ ಆಟಕ್ಕಿಳಿದರು. ಶ್ರೇಯಸ್ 86 ಎಸೆತಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 3ನೇ ಶತಕ ಪೂರೈಸಿದರು. ಈ ಮೂಲಕ ಗಾಯದಿಂದ ಚೇತರಿಸಿಕೊಂಡ ಬಳಿಕ ಾರ್ಮ್‌ಗೆ ಮರಳಿದರು. ಇದರೊಂದಿಗೆ ಹಿಂದಿನ ಪಂದ್ಯಗಳ ವೈಲ್ಯವನ್ನು ಮರೆಮಾಚಿ ವಿಶ್ವಕಪ್‌ಗೆ ಆಯ್ಕೆಯನ್ನು ಸಮರ್ಥಿಸಿಕೊಂಡರು. ಗಿಲ್ 92 ಎಸೆತಗಳಲ್ಲಿ ಶತಕ ಸಿಡಿಸಿ ಹಾಲಿ ವರ್ಷದ ಭರ್ಜರಿ ಾರ್ಮ್ ಮುಂದುವರಿಸಿದರು. 29ನೇ ಓವರ್‌ನಲ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ ಇವರಿಬ್ಬರು, ಶತಕ ಪೂರೈಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು.
ಸೂರ್ಯ ಬ್ಯಾಟಿಂಗ್ ಭರಾಟೆ: ಗಿಲ್ ನಿರ್ಗಮನದ ಬಳಿಕ ನಾಯಕ ರಾಹುಲ್ (52 ರನ್, 38 ಎಸೆತ, 3 ಬೌಂಡರಿ, 3 ಸಿಕ್ಸರ್) ಜತೆಯಾದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ (31) ಬಿರುಸಿನ ಬ್ಯಾಟಿಂಗ್ ಮೂಲಕ ಆಸೀಸ್ ಬೌಲರ್‌ಗಳ ಬೆಂಡೆತ್ತಿ ಉಪಯುಕ್ತ 59 ರನ್ ಕಲೆಹಾಕಿದರು. ಕಿಶನ್ ಔಟಾದ ನಂತರ ಅಬ್ಬರಿಸಿದ ಸೂರ್ಯಕುಮಾರ್ ಆಸ್ಟ್ರೇಲಿಯಾದ ಅನನುಭವಿ ಬೌಲಿಂಗ್ ಪಡೆಗೆ ಕಂಟಕವಾದರು. ರಾಹುಲ್- ಸೂರ್ಯ ಐದನೇ ವಿಕೆಟ್‌ಗೆ 53 ರನ್ ಕಸಿದರು. ಇದರಲ್ಲಿ ಸೂರ್ಯ ಒಬ್ಬರೇ 43 ರನ್ ಬಾರಿಸಿದರು. ಸರಣಿಯಲ್ಲಿ ಸತತ 2ನೇ ಅರ್ಧಶತಕಗಳಿಸಿದ ಬೆನ್ನಲ್ಲೇ ರಾಹುಲ್ ವಿಕೆಟ್ ಒಪ್ಪಿಸಿದರು. ಸ್ಲಾಗ್ ಓವರ್‌ಗಳಲ್ಲಿ ಬ್ಯಾಟಿಂಗ್ ಭರಾಟೆ ನಡೆಸಿದ ಸೂರ್ಯ, ಕ್ಯಾಮರಾನ್ ಗ್ರೀನ್ ಎಸೆದ ಇನಿಂಗ್ಸ್‌ನ 44ನೇ ಓವರ್‌ನಲ್ಲಿ ಸತತ 4 ಭರ್ಜರಿ ಸಿಕ್ಸರ್ ಸಿಡಿಸಿದರು. ಇದರೊಂದಿಗೆ ತಂಡ ನೀಡಿದ ಫಿನಿಷರ್ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದರು. ಆರನೇ ವಿಕೆಟ್‌ಗೆ ರವೀಂದ್ರ ಜಡೇಜಾ (13*) ಜತೆಗೂಡಿ 24 ಎಸೆತಗಳಲ್ಲಿ 44 ರನ್ ಪೇರಿಸಿ ಅಜೇಯವಾಗಿ ಉಳಿದರು.