

ನವದೆಹಲಿ: ಚೀನಾ ಮಾದರಿಯಲ್ಲಿ ಭಾರತದಲ್ಲೂ ರಾಷ್ಟ್ರಮಟ್ಟದ ಆನ್ಲೈನ್ ಶೂಟಿಂಗ್ ಸ್ಪರ್ಧೆ ಇತ್ತೀಚೆಗೆ ಆಯೋಜನೆಗೊಂಡಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತಾರಾಷ್ಟ್ರೀಯ ಮಟ್ಟದ ಆನ್ಲೈನ್ ಶೂಟಿಂಗ್ ಚಾಂಪಿಯನ್ಷಿಪ್ ಆಯೋಜನೆಗೆ ಭಾರತ ಮುಂದಾಗಿದೆ. ಏಪ್ರಿಲ್ 15ರಂದು ನಡೆಯಲಿರುವ ಸ್ಪರ್ಧೆಯಲ್ಲಿ ವಿಶ್ವದ ಪ್ರಮುಖ ಶೂಟರ್ಗಳು ತಮ್ಮ ತಮ್ಮ ಮನೆಯಿಂದಲೇ ಭಾಗವಹಿಸಲಿದ್ದಾರೆ.
ಎಲೆಕ್ಟ್ರಾನಿಕ್ ಟಾರ್ಗೆಟ್ ಜತೆಗೆ ಅಂತರ್ಜಾಲದ ಸಂಪರ್ಕವಿರುವ ಮೊಬೈಲ್ ಫೋನ್ ಇದ್ದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಮನು ಭಾಕರ್, ಸಂಜೀವ್ ರಜಪೂತ್, ದಿವ್ಯಾಂಶ್ ಸಿಂಗ್ ಪನ್ವರ್ರಂಥ ಪ್ರಮುಖ ಶೂಟರ್ಗಳು ಭಾರತದಿಂದ ಸ್ಪರ್ಧಿಸಲಿದ್ದಾರೆ. ಹಂಗೆರಿ, ಸ್ಪೇನ್ ಮತ್ತು ಸ್ಕಾಟ್ಲೆಂಡ್ ಶೂಟರ್ಗಳೂ ಈಗಾಗಲೆ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ.
‘ಈ ಕಠಿಣ ಸಮಯದಲ್ಲೂ ಕ್ರೀಡೆಯನ್ನು ಜೀವಂತವಿಡುವ ನಿಟ್ಟಿನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಲ್ಲ ಶೂಟರ್ಗಳು ಏಕಕಾಲದಲ್ಲಿ ತಮ್ಮ ಮನೆಯಿಂದಲೇ ಶೂಟ್ ಮಾಡಲಿದ್ದಾರೆ. ಎಲೈಟ್ ಶೂಟರ್ಗಳು ಮಾತ್ರ ಇದರಲ್ಲಿ ಸ್ಪರ್ಧಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಬಹುಮಾನ ಮೊತ್ತ ಒಳಗೊಂಡ ಮುಕ್ತ ಸ್ಪರ್ಧೆಯನ್ನೂ ಆಯೋಜಿಸಲಾಗುವುದು’ ಎಂದು ಚಾಂಪಿಯನ್ಷಿಪ್ ಸಂಘಟಿಸುತ್ತಿರುವ ಇಂಡಿಯನ್ ಶೂಟಿಂಗ್ ಡಾಟ್ ಕಾಮ್ ಮುಖ್ಯಸ್ಥ ಶರೀಫ್ ತಿಳಿಸಿದ್ದಾರೆ. ಈ ವೆಬ್ಸೈಟ್ನ ಫೇಸ್ಬುಕ್ ಪುಟದಲ್ಲಿ ಸ್ಪರ್ಧೆಗಳು ನೇರಪ್ರಸಾರ ಕಾಣಲಿವೆ. ಇದು ವಿಶ್ವದ ಮೊದಲ ಅಂತಾರಾಷ್ಟ್ರೀಯ ಆನ್ಲೈನ್ ಶೂಟಿಂಗ್ ಸ್ಪರ್ಧೆಯಾಗಿದೆ.