

ದುಬೈ: ರನ್ ಮಷಿನ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (100*ರನ್, 111 ಎಸೆತ, 7 ಬೌಂಡರಿ) ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 51ನೇ ಶತಕ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆಯ ಬಲದಿಂದ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಹಾಗೂ ಆತಿಥೇಯ ಪಾಕಿಸ್ತಾನ ಎದುರು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ದುಬೈ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಸಂಡೇ ಕಾದಾಟದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ಗೆ ಇಳಿಯಿತು. ಎಡಗೈ ಬ್ಯಾಟರ್ ಸೌದ್ ಶಕೀಲ್ (62 ರನ್, 76 ಎಸೆತ, 5 ಬೌಂಡರಿ) ಹಾಗೂ ನಾಯಕ ಮೊಹಮದ್ ರಿಜ್ವಾನ್ (46) ಜತೆಯಾಟದ ನೆರವಿನಿಂದ 2 ವಿಕೆಟ್‌ಗೆ 151 ರನ್‌ಗಳಿಸಿ ಸುಸ್ಥಿಯಲ್ಲಿತ್ತು. ನಂತರ ಕುಲದೀಪ್ ಯಾದವ್ (40ಕ್ಕೆ 3) ಸಹಿತ ಇತರ ಭಾರತೀಯ ಬೌಲರ್‌ಗಳ ದಾಳಿಗೆ ನಲುಗಿ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಪಾಕ್ ಆಲೌಟ್ ಆಯಿತು. ಪ್ರತಿಯಾಗಿ ಚೇಸಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದ ರೋಹಿತ್ ಶರ್ಮ (20) ಬೇಗನೆ ಔಟಾದರು. ಆಗ ಉಪನಾಯಕ ಶುಭಮಾನ್ ಗಿಲ್ (46 ರನ್, 52 ಎಸೆತ, 7 ಬೌಂಡರಿ) ಹಾಗೂ ವಿರಾಟ್ ಕೊಹ್ಲಿ ಚೇಸಿಂಗ್‌ಗೆ ಬಲ ತುಂಬಿದರು. ನಂತರ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ (56 ರನ್, 67 ಎಸೆತ, 5 ಬೌಂಡರಿ,1 ಸಿಕ್ಸರ್) ಮೂರನೇ ವಿಕೆಟ್‌ಗೆ ನಡೆಸಿದ ಜತೆಯಾಟದ ನೆರವಿನಿಂದ ಭಾರತ 42.3 ಓವರ್‌ಗಳಲ್ಲಿ 4 ವಿಕೆಟ್‌ಗೆ 244 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು.
ಕೊಹ್ಲಿ 14 ತಿಂಗಳ ನಂತರ ಶತಕ
ಗಿಲ್ ನಿರ್ಗಮನದ ಬಳಿಕ ಕೊಹ್ಲಿ ಜತೆಯಾದ ಶ್ರೇಯಸ್ ಅಯ್ಯರ್ ನಿಧಾನಗತಿಯಲ್ಲಿ ಇನಿಂಗ್ಸ್ ಆರಂಭಿಸಿದರು. ಶ್ರೇಯಸ್-ಕೊಹ್ಲಿ ಮೂರನೇ ವಿಕೆಟ್‌ಗೆ 128 ಎಸೆತಗಳಲ್ಲಿ 114 ರನ್‌ಗಳಿಸಿ ಭಾರತವನ್ನು ಗೆಲುವಿನ ಸನಿಹಕ್ಕೇರಿಸಿದರು. ಕೊಹ್ಲಿಯ ತಾಳ್ಮೆಯುತ ಆಟಕ್ಕೆ ಶ್ರೇಯಸ್ ಸಮರ್ಥ ಬೆಂಬಲ ನೀಡಿದರು. ಪಾಕ್ ಸ್ಪಿನ್ನರ್‌ಗಳ ಸಮರ್ಥವಾಗಿ ಎದುರಿಸಿದ ಕೊಹ್ಲಿ 62 ಎಸೆತ, ಶ್ರೇಯಸ್ 63 ಎಸೆತಗಳಲ್ಲಿ ವೈಯಕ್ತಿಕ ಅರ್ಧಶತಕ ಗಳಿಸಿದರು. 36ನೇ ಓವರ್‌ನಲ್ಲಿ 200 ರನ್‌ಗಳಿಸಿದ ಭಾರತ ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿತು. ಶ್ರೇಯಸ್ ನಿರ್ಗಮನದ ಬಳಿಕ ಹಾರ್ದಿಕ್ ಪಾಂಡ್ಯ (8) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಗ ವಿರಾಟ್ ಶತಕಕ್ಕೆ ಅಕ್ಷರ್ ಪಟೇಲ್ (3*) ಬೆಂಬಲ ನೀಡಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್‌ಗೆ 15 ಎಸೆತಗಳಲ್ಲಿ 21 ರನ್ ಬಾರಿಸಿದರು. ಶತಕಕ್ಕೆ 4 ಹಾಗೂ ಗೆಲುವಿಗೆ 2 ರನ್ ಬೇಕಿದ್ದಾಗ ಬೌಂಡರಿ ಸಿಡಿಸಿದ ಕೊಹ್ಲಿ, ಸುಮಾರು 14 ತಿಂಗಳ ಬಳಿಕ ಸೆಂಚುರಿ ಸಾಧನೆ ಮಾಡಿದರು. 2023ರ ಏಕದಿನ ವಿಶ್ವಕಪ್‌ನ ಸೆಮಿೈನಲ್‌ನಲ್ಲಿ ಕೊನೆಯದಾಗಿ ಶತಕ ಸಂಭ್ರಮಿಸಿದ್ದರು.
1. ವಿರಾಟ್ ಕೊಹ್ಲಿ (287 ಇನಿಂಗ್ಸ್) ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಪೂರೈಸಿದ ವಿಶ್ವದ ಮೂರನೇ ಹಾಗೂ ವೇಗವಾಗಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್. ಸಚಿನ್ ತೆಂಡುಲ್ಕರ್ (350 ಇನಿಂಗ್ಸ್), ಕುಮಾರ್ ಸಂಗಕ್ಕರ (378) ಮೊದಲಿಬ್ಬರು ಸಾಧಕರು.
1. ವಿರಾಟ್ ಕೊಹ್ಲಿ (157) ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ (ವಿಕೆಟ್ ಕೀಪರ್ ಹೊರತುಪಡಿಸಿ) ವಿಶ್ವದ ಮೂರನೇ ಹಾಗೂ ಭಾರತೀಯ ಆಟಗಾರ ಎನಿಸಿದರು. ಮಹೇಲಾ ಜಯವರ್ಧನೆ (218), ರಿಕಿ ಪಾಂಟಿಂಗ್ (160) ಮೊದಲೆರಡು ಸ್ಥಾನದಲ್ಲಿದ್ದಾರೆ.
12. ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ಸತತ 12ನೇ ಬಾರಿಗೆ ಟಾಸ್ ಸೋತ ದೃಷ್ಟಾಂತ ಇದಾಗಿದೆ. 2023ರ ಏಕದಿನ ವಿಶ್ವಕಪ್ ೈನಲ್‌ನಿಂದ ಭಾರತ ಟಾಸ್ ಜಯಿಸಿಲ್ಲ. ಸತತ 11 ಪಂದ್ಯಗಳಲ್ಲಿ ನೆದರ್ಲೆಂಡ್ ತಂಡ ಟಾಸ್ ಸೋತಿದ್ದು ಹಿಂದಿನ ದಾಖಲೆ.
9. ರೋಹಿತ್ ಶರ್ಮ (181 ಇನಿಂಗ್ಸ್) ಆರಂಭಿಕನಾಗಿ ವೇಗವಾಗಿ 9 ಸಾವಿರ ರನ್‌ಗಳಿಂದ ಮೊದಲ ಬ್ಯಾಟರ್ ಎನಿಸಿದರು. ಸಚಿನ್ ತೆಂಡುಲ್ಕರ್ 197 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
13. ಕುಲದೀಪ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ 5ನೇ ಭಾರತೀಯ ಸ್ಪಿನ್ನರ್ ಹಾಗೂ 13ನೇ ಬೌಲರ್ ಎನಿಸಿದರು.