ಡಬ್ಲ್ಯುಟಿಸಿಯಲ್ಲಿ ಭಾರತಕ್ಕೆ ಮೊದಲ ಶಾಕ್: ಕೊಹ್ಲಿ ಪಡೆಗೆ ಸೋಲುಣಿಸಿದ ಸೌಥಿ, ಕಿವೀಸ್​ಗೆ 10 ವಿಕೆಟ್​ಗಳಿಂದ ಸುಲಭ ಜಯ

Test
Published on

ವೆಲ್ಲಿಂಗ್ಟನ್: ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ (ಡಬ್ಲ್ಯುಟಿಸಿ) ಆರಂಭಿಕ ಏಳೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಮುನ್ನುಗ್ಗುತ್ತಿದ್ದ ವಿಶ್ವ ನಂ. 1 ಭಾರತ ತಂಡದ ಓಟಕ್ಕೆ ನ್ಯೂಜಿಲೆಂಡ್ ತಂಡ ಕಡಿವಾಣ ಹಾಕಿದೆ. ಎರಡನೇ ಇನಿಂಗ್ಸ್​ನಲ್ಲೂ ದಿಟ್ಟ ನಿರ್ವಹಣೆ ತೋರಲು ವಿಫಲವಾದ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್​ಗಳಿಂದ ಸೋಲು ಕಂಡಿದೆ. ಇದು ಡಬ್ಲ್ಯುಟಿಸಿಯಲ್ಲಿ ಭಾರತ ತಂಡಕ್ಕೆ ಮೊದಲ ಸೋಲಾಗಿದೆ.

ಬೇಸಿನ್ ರಿಸರ್ವ್ ಮೈದಾನದಲ್ಲಿ 4 ವಿಕೆಟ್​ಗೆ 144 ರನ್​ಗಳಿಂದ ಸೋಮವಾರ 4ನೇ ದಿನದಾಟ ಮುಂದುವರಿಸಿದ ಭಾರತ ತಂಡ ವೇಗಿ ಟಿಮ್ ಸೌಥಿ (61 ರನ್​ಗೆ 5 ವಿಕೆಟ್) ದಾಳಿಗೆ ಕುಸಿದು 191 ರನ್​ಗೆ ಆಲೌಟ್ ಆಯಿತು. ಕೇವಲ 9 ರನ್ ಗುರಿ ಪಡೆದ ಕಿವೀಸ್ ತಂಡ 1.4 ಓವರ್​ಗಳಲ್ಲೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಇದರೊಂದಿಗೆ 4ನೇ ದಿನ ಬೆಳಗ್ಗೆ ಕೇವಲ 17.4 ಓವರ್​ಗಳಲ್ಲೇ ಪಂದ್ಯ ಮುಕ್ತಾಯಗೊಂಡಿತು. 2018-19ರ ಆಸೀಸ್ ಪ್ರವಾಸದ ಪರ್ತ್ ಟೆಸ್ಟ್ ಬಳಿಕ ಭಾರತಕ್ಕಿದು ಮೊದಲ ಸೋಲಾಗಿದೆ. 2019ರಲ್ಲಿ ಒಂದೂ ಟೆಸ್ಟ್ ಸೋತಿರದ ಭಾರತ, 2020ರಲ್ಲಿ ಆಡಿದ ಮೊದಲ ಟೆಸ್ಟ್​ನಲ್ಲೇ ಸೋಲು ಕಂಡಿದೆ.

ಭಾರತ ತಂಡ ಸೋಲಿನ ನಡುವೆಯೂ 360 ಅಂಕ

ದೊಂದಿಗೆ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದು ಕೊಂಡರೆ, ಜಯದೊಂದಿಗೆ 60 ಅಂಕ ಕಲೆಹಾಕಿದ ಕಿವೀಸ್ ತಂಡ (120), ಶ್ರೀಲಂಕಾವನ್ನು (80) ಹಿಂದಿಕ್ಕಿ 5ನೇ ಸ್ಥಾನಕ್ಕೇರಿತು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ ಟಿಮ್ ಸೌಥಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ 2ನೇ ಹಾಗೂ ಅಂತಿಮ ಪಂದ್ಯ ಫೆ. 29ರಿಂದ ಕ್ರೖೆಸ್ಟ್​ಚರ್ಚ್​ನಲ್ಲಿ ನಡೆಯಲಿದೆ. -ಪಿಟಿಐ/ಏಜೆನ್ಸೀಸ್

ಟಾಸ್ ಸೋಲು ಮತ್ತು ಮೊದಲ ಇನಿಂಗ್ಸ್​ನಲ್ಲಿ ಎಡವಿದ್ದು ದೊಡ್ಡ ಹಿನ್ನಡೆಯಾಯಿತು. ನಮ್ಮ ನಿರ್ವಹಣೆಯೂ ಸ್ಪರ್ಧಾತ್ಮಕವಾಗಿರಲಿಲ್ಲ. ಕೊನೇ 3 ವಿಕೆಟ್​ಗೆ 120 ರನ್ ಗಳಿಸಿದ ಕಿವೀಸ್ ಪಂದ್ಯವನ್ನು ನಮ್ಮಿಂದ ಕಸಿಯಿತು. ನಮ್ಮ ಬೌಲರ್​ಗಳು ಇನ್ನಷ್ಟು ಶಿಸ್ತುಬದ್ಧ ದಾಳಿ ನಡೆಸಬೇಕಿತ್ತು. | ವಿರಾಟ್ ಕೊಹ್ಲಿ ಭಾರತ ತಂಡದ ನಾಯಕ

2ನೇ ಇನಿಂಗ್ಸ್​ಗೂ ಸೌಥಿ ಕಡಿವಾಣ

ಅಗ್ರ ಕ್ರಮಾಂಕದ ವೈಫಲ್ಯದ ನಡುವೆಯೂ ಭಾರತ ತಂಡ ನಾಲ್ಕನೇ ದಿನ ಸ್ವಲ್ಪಮಟ್ಟಿಗೆ ಪ್ರತಿರೋಧ ತೋರುವ ನಿರೀಕ್ಷೆ ಇತ್ತು. ಆದರೆ ಕನಿಷ್ಠ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲಷ್ಟೇ ಭಾರತ ಶಕ್ತವಾಯಿತು. ಸೋಮವಾರ 16 ಓವರ್​ಗಳಲ್ಲೇ ಭಾರತದ 2ನೇ ಇನಿಂಗ್ಸ್​ಗೆ ತೆರೆ ಬಿದ್ದಿತು. ಬೆಳಗ್ಗೆ 47 ರನ್ ಕೂಡಿಸುವಷ್ಟರಲ್ಲಿ ಭಾರತ ಕೊನೇ 6 ವಿಕೆಟ್ ಕಳೆದುಕೊಂಡಿತು. ಕ್ರಮವಾಗಿ 25 ಮತ್ತು 15 ರನ್​ಗಳಿಂದ ದಿನದಾಟ ಆರಂಭಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳಾದ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ದಿನದ 3 ಮತ್ತು 4ನೇ ಓವರ್​ನಲ್ಲಿ ಔಟಾದರು. ಉಪನಾಯಕ ರಹಾನೆ (29) ಮತ್ತೆ 4 ರನ್ ಕೂಡಿಸಿ ಬೌಲ್ಟ್ ಎಸೆತದಲ್ಲಿ ಕೀಪರ್ ವಾಟ್ಲಿಂಗ್​ಗೆ ಕ್ಯಾಚ್ ನೀಡಿದರೆ, ವಿಹಾರಿ ಯಾವುದೇ ರನ್ ಸೇರಿಸದೆ ಸೌಥಿ ಆಫ್-ಕಟರ್ ಎಸೆತದಲ್ಲಿ ಬೌಲ್ಡಾದರು. ಇದರಿಂದ ಭಾರತ ಪ್ರತಿಹೋರಾಟ ತೋರುವ ಆಸೆ ಸಂಪೂರ್ಣ ಬತ್ತಿಹೋಯಿತು. ಕೊನೆಯಲ್ಲಿ ವಿಕೆಟ್ ಕೀಪರ್-

ಬ್ಯಾಟ್ಸ್​ಮನ್ ರಿಷಭ್ ಪಂತ್ (25) ತಂಡವನ್ನು ಇನಿಂಗ್ಸ್ ಸೋಲಿನಿಂದ ಪಾರು ಮಾಡುವಲ್ಲಿ ಸಫಲರಾದರು. ಕೊನೇ 2 ವಿಕೆಟ್​ಗಳನ್ನು 4 ಎಸೆತಗಳ ಅಂತರದಲ್ಲಿ ಕಬಳಿಸಿದ ಸೌಥಿ 10ನೇ ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು.

100- ನ್ಯೂಜಿಲೆಂಡ್ ತಂಡಕ್ಕಿದು ಟೆಸ್ಟ್ ಕ್ರಿಕೆಟ್​ನಲ್ಲಿ 100ನೇ ಗೆಲುವಾಗಿದ್ದು, ಈ ಸಾಧನೆ ಮಾಡಿದ ವಿಶ್ವದ 7ನೇ ತಂಡವೆನಿಸಿದೆ. ಆಸ್ಟ್ರೇಲಿಯಾ (393), ಇಂಗ್ಲೆಂಡ್ (371), ವೆಸ್ಟ್ ಇಂಡೀಸ್ (174), ದಕ್ಷಿಣ ಆಫ್ರಿಕಾ (165), ಭಾರತ (157), ಪಾಕಿಸ್ತಾನ (138) ಮೊದಲ 6 ತಂಡಗಳು.

ಬ್ಯಾಟಿಂಗ್ ಫಾಮ್ರ್ ಬಗ್ಗೆ ಚಿಂತಿಸದ ಕೊಹ್ಲಿ

ಕಳೆದ 20 ಇನಿಂಗ್ಸ್​ಗಳಿಂದ ಒಂದೂ ಶತಕ ಸಿಡಿಸದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಅನುಭವಿಸುತ್ತಿರುವ ರನ್​ಬರದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಈಗಾಗಲೆ ಕಳವಳ ವ್ಯಕ್ತವಾಗುತ್ತಿದೆ. ಆದರೆ ತಮ್ಮ ಬ್ಯಾಟಿಂಗ್ ಫಾಮ್ರ್ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ‘ಕೆಲವೊಮ್ಮೆ ನೀವು ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರೂ, ಸ್ಕೋರ್ ಅದನ್ನು ಪ್ರತಿಬಿಂಬಿಸುವುದಿಲ್ಲ. ನಮ್ಮ ಯೋಜನೆಯಂತೆ ಆಟ ನಡೆಯದಿದ್ದಾಗ ಹೀಗಾಗುತ್ತದೆ. ಹೀಗಾಗಿ 3-4 ಇನಿಂಗ್ಸ್ ಗಳಲ್ಲಿ ಕಂಡ ವೈಫಲ್ಯಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇಲ್ಲದಿದ್ದರೆ ಇದುವೇ ಒತ್ತಡ ತರುತ್ತದೆ’ ಎಂದು ಕೊಹ್ಲಿ ವಿವರಿಸಿದ್ದಾರೆ. ಕಿವೀಸ್ ಪ್ರವಾಸದ 9 ಇನಿಂಗ್ಸ್​ಗಳಲ್ಲಿ ಕೊಹ್ಲಿ (ಟಿ20: 45, 11, 38, 11, ಏಕದಿನ: 51, 15, 9, ಟೆಸ್ಟ್: 2, 19) 1 ಅರ್ಧಶತಕ ಮಾತ್ರ ಬಾರಿಸಿದ್ದಾರೆ. ‘ಮುಂದಿನ ಟೆಸ್ಟ್​ನಲ್ಲಿ ತಂಡದ ಗೆಲುವಿಗೆ ಕೊಡುಗೆ ನೀಡುವತ್ತ ಗಮನಹರಿಸಿರುವೆ. ತಂಡ ಗೆದ್ದರೆ, ನಾನು 40 ರನ್​ಗಳಿಸಿದರೂ ಖುಷಿಯೇ. ಅದೇ ತಂಡ ಸೋತಾಗ, ನಾನು 100 ರನ್ ಗಳಿಸಿದರೂ ಅದು ಮಹತ್ವದ್ದೆನಿಸುವುದಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net