ಪದಾರ್ಪಣೆಯಲ್ಲಿ ವಿಶಿಷ್ಠ ದಾಖಲೆ ಬರೆದ ವರುಣ್ ಚಕ್ರವರ್ತಿ: ಕ್ರಿಸ್ ಗೇಲ್ ದಾಖಲೆ ಮುರಿದ ಹಿಟ್‌ಮ್ಯಾನ್

New Project (3)
Published on

ಕಟಕ್: ಸತತ 11 ಇನಿಂಗ್ಸ್‌ಗಳ ರನ್‌ಬರ, ವೈಲ್ಯಗಳಿಂದ ಮೈಕೊಡವಿ ಎದ್ದುನಿಂತ ನಾಯಕ ರೋಹಿತ್ ಶರ್ಮ (119 ರನ್, 90 ಎಸೆತ, 12 ಬೌಂಡರಿ, 7 ಸಿಕ್ಸರ್) ಸಿಡಿಸಿದ ಅಬ್ಬರದ ಶತಕದ ನೆರವಿನಿಂದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು 4 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ 3 ಪಂದ್ಯಗಳ ಸರಣಿಯಲ್ಲಿ ಪಂದ್ಯ ಬಾಕಿಯಿರುವಂತೆಯೇ 2-0ಯಿಂದ ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ರೋಹಿತ್ ಶರ್ಮ ಮತ್ತು ಅವರ ತಂಡದಿಂದ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಎದುರಾಳಿಗಳಿಗೆ ಎಚ್ಚರಿಕೆಯ ಗಂಟೆ ರವಾನೆಯಾಗಿದೆ.

ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾದಾಟದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ಬ್ಯಾಟರ್ ಬೆನ್ ಡಕೆಟ್ (65 ರನ್, 56 ಎಸೆತ, 10 ಬೌಂಡರಿ) ಒದಗಿಸಿದ ಉತ್ತಮ ಆರಂಭದ ಬಳಿಕ ಅನುಭವಿ ಜೋ ರೂಟ್ (69 ರನ್, 72 ಎಸೆತ, 6 ಬೌಂಡರಿ) ಅರ್ಧಶತಕ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ (41) ಉಪಯುಕ್ತ ಆಟದ ನಡುವೆಯೂ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 304 ರನ್‌ಗಳ ಸವಾಲಿನ ಮೊತ್ತಕ್ಕೆ ಆಲೌಟ್ ಆಯಿತು. ಪ್ರತಿಯಾಗಿ 37 ವರ್ಷದ ರೋಹಿತ್ ಶರ್ಮ ಹಾಗೂ ಉಪನಾಯಕ ಶುಭಮಾನ್ ಗಿಲ್ (60 ರನ್, 52 ಎಸೆತ, 9 ಬೌಂಡರಿ, 1 ಸಿಕ್ಸರ್) ಭದ್ರ ಅಡಿಪಾಯ ಹಾಕಿಕೊಟ್ಟರು. ನಂತರ ಶ್ರೇಯಸ್ ಅಯ್ಯರ್ (44 ರನ್, 47 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಅಕ್ಷರ್ ಪಟೇಲ್ (41* ರನ್, 43 ಎಸೆತ, 4 ಬೌಂಡರಿ) ಅಮೋಘ ನಿರ್ವಹಣೆಯ ಬಲದಿಂದ ಭಾರತ 44.3 ಓವರ್‌ಗಳಲ್ಲಿ 6 ವಿಕೆಟ್‌ಗೆ 308 ರನ್‌ಗಳಿಸಿ ಗೆದ್ದು ಬೀಗಿತು.

32: ರೋಹಿತ್ ಶರ್ಮ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಸಿಡಿಸಿದ 30ನೇ ಹಾಗೂ ಒಟ್ಟಾರೆ 32ನೇ ಶತಕ ಇದಾಗಿದೆ. ಈ ಮೂಲಕ ಆರಂಭಿಕನಾಗಿ ಗರಿಷ್ಠ ಶತಕ ಸಿಡಿಸಿದ ಎರಡನೇ ಬ್ಯಾಟರ್ ಎನಿಸಿದರು. ಸಚಿನ್ ತೆಂಡುಲ್ಕರ್ (45) ಅಗ್ರಸ್ಥಾನದಲ್ಲಿದ್ದಾರೆ.

338: ರೋಹಿತ್ ಶರ್ಮ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟರ್ ಎನಿಸಿದರು. ಶಾಹಿದ್ ಆಫ್ರಿದಿ (351) ಅಗ್ರಸ್ಥಾನದಲ್ಲಿದ್ದಾರೆ.

ವರುಣ್ ಪದಾರ್ಪಣೆ

ಟಿ20 ಸರಣಿಯಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (33 ವರ್ಷ, 164 ದಿನ) ಭಾರತದ ಪರ ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದರು. ಜತೆಗೆ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಭಾರತದ 2ನೇ ಹಿರಿಯ ಆಟಗಾರ ಎನಿಸಿದರು. ಾರೂಖ್ ಇಂಜಿನಿಯರ್ (36 ವರ್ಷ, 138 ದಿನ) ಮೊದಲಿಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net