ಐಪಿಎಲ್​ ನಡುವೆ ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ 2ನೇ ಸ್ಥಾನಕ್ಕಿಳಿದ ಭಾರತ; ಹೀಗಿದೆ ಕಾರಣ...

web icc rank
Published on

ದುಬೈ: ಐಸಿಸಿ ರ‍್ಯಾಂಕಿಂಗ್‌ ಶುಕ್ರವಾರ ವಾರ್ಷಿಕ ಪರಿಷ್ಕರಣೆಗೆ ಒಳಗಾಗಿದ್ದು, ಟೆಸ್ಟ್​ ರ‍್ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದ್ದರೆ, ಏಕದಿನ ಮತ್ತು ಟಿ20 ರ‍್ಯಾಂಕಿಂಗ್‌​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಸ್ಟ್ರೆಲಿಯಾ ಟೆಸ್ಟ್​ನಲ್ಲಿ ನೂತನ ವಿಶ್ವ ನಂ. 1 ತಂಡವಾಗಿದ್ದರೆ, ಏಕದಿನ ಮತ್ತು ಟಿ20 ರ‍್ಯಾಂಕಿಂಗ್‌​ನಲ್ಲಿ 2ನೇ ಸ್ಥಾನದಲ್ಲಿದೆ.

ರ‍್ಯಾಂಕಿಂಗ್‌​ನ ವಾರ್ಷಿಕ ಪರಿಷ್ಕರಣೆಯಲ್ಲಿ 2020-21ರ ಋತುವಿನ ಫಲಿತಾಂಶಗಳನ್ನು ಕೈಬಿಡಲಾಗಿದೆ. 2021ರ ಮೇ ನಂತರದ ಎಲ್ಲ ಸರಣಿಗಳನ್ನು ರ‍್ಯಾಂಕಿಂಗ್‌​ಗೆ ಪರಿಗಣಿಸಲಾಗಿದೆ. 2020-21ರ ಸಾಲಿನಲ್ಲಿ ಭಾರತ ತಂಡ ಆಸೀಸ್​ ವಿರುದ್ಧ 2-1ರಿಂದ ಸರಣಿ ಗೆದ್ದಿರುವುದನ್ನು ರ‍್ಯಾಂಕಿಂಗ್‌​ನಿಂದ ಕೈಬಿಟ್ಟಿರುವುದು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಟೆಸ್ಟ್​ನಲ್ಲಿ ಆಸ್ಟ್ರೆಲಿಯಾ 124 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ 120 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಉಳಿದಂತೆ 3ರಿಂದ 9ನೇ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂಗ್ಲೆಂಡ್​ (105), ದ. ಆಫ್ರಿಕಾ (103) ಮತ್ತು ನ್ಯೂಜಿಲೆಂಡ್​ (96) ತಂಡಗಳು ಕ್ರಮವಾಗಿ 3, 4 , 5ನೇ ಸ್ಥಾನದಲ್ಲಿವೆ.

ಏಕದಿನ ಮತ್ತು ಟಿ20 ರ‍್ಯಾಂಕಿಂಗ್‌​ನಲ್ಲಿ ಪರಿಷ್ಕರಣೆಯ ಬಳಿಕ 2023ರ ಮೇಗಿಂತ ಮೊದಲಿನ ಫಲಿತಾಂಶಗಳಿಗೆ ಶೇ. 50 ಅಂಕ ಮತ್ತು ನಂತರದ ಫಲಿತಾಂಶಗಳಿಗೆ ಶೇ. 100 ಅಂಕಗಳನ್ನು ನೀಡಲಾಗಿದೆ. ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಆಸೀಸ್​ಗೆ (116) ಸೋತಿದ್ದ ನಡುವೆ ಭಾರತದ (122) ಮುನ್ನಡೆ 3ರಿಂದ 6 ಅಂಕಗಳಿಗೆ ವಿಸ್ತರಿಸಿದೆ. ಏಕದಿನ ರ‍್ಯಾಂಕಿಂಗ್‌​ನ ಅಗ್ರ 10ರಲ್ಲಿ ಯಾವುದೇ ತಂಡಗಳ ಸ್ಥಾನ ಪಲ್ಲಟವಾಗಿಲ್ಲ.

ಟಿ20 ರ‍್ಯಾಂಕಿಂಗ್‌​ನಲ್ಲಿ ಭಾರತ 264 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದಿರುವ ನಡುವೆ ಇತರ ತಂಡಗಳ ಸ್ಥಾನ ಬದಲಾವಣೆ ಕಂಡಿದೆ. ಆಸೀಸ್​ 257 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. ಇಂಗ್ಲೆಂಡ್​ 252 ಅಂಕಗಳೊಂದಿಗೆ 3ನೇ ಸ್ಥಾನಕ್ಕಿಳಿದಿದೆ. ದ. ಆಫ್ರಿಕಾ (250) 6ರಿಂದ 4ನೇ ಸ್ಥಾನಕ್ಕೇರಿದ್ದರೆ, ನ್ಯೂಜಿಲೆಂಡ್​ (250) 5ನೇ ಸ್ಥಾನಕ್ಕಿಳಿದಿದೆ. ವೆಸ್ಟ್​ ಇಂಡೀಸ್​ (249) 6ನೇ ಸ್ಥಾನಕ್ಕೇರಿದ್ದರೆ, ಪಾಕಿಸ್ತಾನ (247) 5ರಿಂದ 7ನೇ ಸ್ಥಾನಕ್ಕೆ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net