ಸಮಬಲದ ಹೋರಾಟಕ್ಕೆ ಭಾರತ ಸಿದ್ಧ

pinch jan 16
Published on

ರಾಜ್​ಕೋಟ್: ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕ ಹಾಗೂ ತಂಡ ಆಯ್ಕೆಯಲ್ಲಿ ಮಾಡಿದ ಎಡವಟ್ಟಿನಿಂದ 10 ವಿಕೆಟ್​ಗಳ ಸೋಲು ಕಂಡಿರುವ ಟೀಮ್ ಇಂಡಿಯಾ, ಸಮಬಲದ ಗುರಿಯೊಂದಿಗೆ ಶುಕ್ರವಾರ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪ್ರಯೋಗ ಮಾಡುವ ನಿರ್ಧಾರಕ್ಕೆ ಮುಂಬೈ ಪಂದ್ಯದಲ್ಲಿ ದೊಡ್ಡ ಏಟು ತಿಂದಿರುವ ಭಾರತ, ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಏಕದಿನ ವಿಶ್ವಕಪ್ ಟೂರ್ನಿ ಮುಗಿದು ಕೆಲ ತಿಂಗಳಷ್ಟೇ ಆಗಿರುವ ಕಾರಣ ಪ್ರಸ್ತುತ ಟೀಮ್ ಇಂಡಿಯಾ ಏಕದಿನ ಮಾದರಿಗೆ ದೊಡ್ಡ ಮಟ್ಟದ ಪ್ರಾಶಸ್ಱ ನೀಡುತ್ತಿಲ್ಲ. ಇದು ತಂಡದ ಆಟದಲ್ಲಿ ಗೋಚರವಾಗುತ್ತಿದೆ. ಮುಂಬರುವ ಟಿ20 ವಿಶ್ವಕಪ್ ನಿಟ್ಟಿನಲ್ಲಿ ಸರಣಿಯನ್ನು ನೋಡುತ್ತಿರುವ ಕಾರಣ ಕೆಲ ಪ್ರಯೋಗಗಳಿಗೆ ಮುಂದಾಗಿದೆ. ಪ್ರಸ್ತುತ ತಂಡದಲ್ಲಿ ಅಗ್ರ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಏಕದಿನ ಮಾದರಿಯ ಸ್ಪೆಷಲಿಸ್ಟ್ ಬೌಲರ್ ಭುವನೇಶ್ವರ್ ಇಲ್ಲ. ಅಲ್ಲದೆ, ತಂಡದ ಅಗ್ರ ಬ್ಯಾಟ್ಸ್​ಮನ್​ನ ಬ್ಯಾಟಿಂಗ್ ಕ್ರಮಾಂಕದಲ್ಲಿಯೇ ದೊಡ್ಡ ಮಟ್ಟದ ಪ್ರಯೋಗಕ್ಕೆ ಮುಂದಾಗಿರುವುದು ಹಿನ್ನಡೆಗೆ ಕಾರಣವಾಗಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ಸಂಪೂರ್ಣ ಬಲದಲ್ಲಿದ್ದು, ಭಾರತದಲ್ಲಿ ಸತತ 2ನೇ ಏಕದಿನ ಸರಣಿ ಗೆಲ್ಲುವ ಗುರಿಯಲ್ಲಿದೆ.

ಆಸ್ಟ್ರೇಲಿಯಾ ತಂಡಕ್ಕೆ ಹಾಲಿ ಸರಣಿಯಲ್ಲಿ ಚೇಸಿಂಗ್​ಗಿಂತ ಹೆಚ್ಚಾಗಿ ಮೊತ್ತ ರಕ್ಷಿಸಿಕೊಳ್ಳುವ ವಿಚಾರದಲ್ಲಿ ದೊಡ್ಡ ಸವಾಲು ಎದುರಾಗಲಿದೆ. ವಿಶ್ವದ ಅತ್ಯುತ್ತಮ ಚೇಸಿಂಗ್ ಟೀಮ್ ಎನಿಸಿಕೊಂಡಿರುವ ಭಾರತ ತವರಿನ ವಾತಾವರಣದಲ್ಲಿ ಮತ್ತಷ್ಟು ಅಪಾಯಕಾರಿ. ಹಾಗಾಗಿ ಆಸ್ಟ್ರೇಲಿಯಾ ತಂಡ ಭಾರತವನ್ನು ಸರಣಿಯಲ್ಲಿ ಸೋಲಿಸುವುದಕ್ಕಿಂತ ಹೆಚ್ಚಾಗಿ ಟಾಸ್ ಗೆಲುವಿನತ್ತ ಹೆಚ್ಚಿನ ಗಮನ ನೀಡಲಿದೆ. -ಏಜೆನ್ಸೀಸ್

ಟೀಮ್ ನ್ಯೂಸ್

ಭಾರತ: ಕೇದಾರ್ ಜಾಧವ್ ಹಾಗೂ ಕೆಎಲ್ ರಾಹುಲ್ ನಡುವೆ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಹೋರಾಟ ನಡೆಯಲಿದೆ. ತಂಡದಲ್ಲಿ ಯಾವುದೇ ಆಲ್ರೌಂಡರ್ ಇಲ್ಲದಿರುವ ಕಾರಣ, ರವೀಂದ್ರ ಜಡೇಜಾ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದು, ಒಬ್ಬ ಲೆಗ್​ಸ್ಪಿನ್ನರ್ ತಂಡದಿಂದ ಹೊರಗುಳಿಯುವುದು ಅನಿವಾರ್ಯವಾಗಲಿದೆ. ಇನ್ನು ರಾಜ್​ಕೋಟ್ ಪಿಚ್​ನಲ್ಲಿ ಮೂವರು ಸ್ಪಿನ್ನರ್​ಗಳನ್ನು ಆಡಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದಾಗಿ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ನಡುವೆ ಒಬ್ಬರು ಸ್ಥಾನ ಪಡೆಯಲಿದ್ದಾರೆ. ಇನ್ನು ತಂಡದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕುತೂಹಲ ಮುಂದುವರಿದಿದೆ.

ಆಸ್ಟ್ರೇಲಿಯಾ: ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾರಣ, ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಅನಿವಾರ್ಯತೆ ಆಸ್ಟ್ರೇಲಿಯಾ ತಂಡಕ್ಕಿಲ್ಲ. ಒಬ್ಬ ವೇಗಿಗೆ ವಿಶ್ರಾಂತಿ ನೀಡಿ, ಜೋಸ್ ಹ್ಯಾಸಲ್​ವುಡ್​ಗೆ ಅವಕಾಶ ನೀಡುವ ಸೂಚನೆಯನ್ನು ನಾಯಕ ಆರನ್ ಫಿಂಚ್ ನೀಡಿದ್ದಾರೆ.

ಪಿಚ್ ರಿಪೋರ್ಟ್

ಮಳೆಯ ಯಾವುದೇ ಸೂಚನೆ ಇಲ್ಲ. ವಾಂಖೆಡೆಯಂತೆ ಇದು ಕೂಡ ಬ್ಯಾಟಿಂಗ್ ಪಿಚ್ ಆಗಿರಲಿದ್ದು, ದೊಡ್ಡ ಮೊತ್ತದ ಪಂದ್ಯವನ್ನು ನಿರೀಕ್ಷೆ ಮಾಡಬಹುದು. ಸಂಜೆಯ ವೇಳೆಗೆ ಪಂದ್ಯಕ್ಕೆ ಇಬ್ಬನಿ ಸಮಸ್ಯೆ ತಂದೊಡ್ಡಲಿದೆ.

ಸರಿಯಾಗಿ ಸಿದ್ಧತೆ ನಡೆಸಿರದ ಹಂತದಲ್ಲಿ ಇಂಥ ಸೋಲುಗಳು ಎದುರಾಗು ತ್ತವೆ. ಭಾರತ ತಂಡ ಇಷ್ಟು ಕೆಟ್ಟ ರೀತಿಯಲ್ಲಿ ಪತನ ಗೊಳ್ಳುತ್ತದೆ ಎಂದು ಯಾವ ಕ್ರಿಕೆಟ್ ಅಭಿಮಾನಿಗಳೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಇವೆಲ್ಲವೂ ಆಟದ ಒಂದು ಭಾಗ. ಆ ಸೋಲಿಗೆ ಜೋತು ಬೀಳುವುದಕ್ಕಿಂತ ಮುಂದಿನ ಪಂದ್ಯಗಳತ್ತ ಗಮನ ನೀಡಬೇಕು. | ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಆಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net