ಕಿರಿಯರ ವಿಶ್ವಕಪ್ ಸೆಮಿಫೈನಲ್​ಗೇರಿದ ಭಾರತ

IND Won 28 Jan 20
Published on

ಪಾಟ್​ಚೇಫ್​ಸ್ಟ್ರೋಮ್​ದಕ್ಷಿಣಆಫ್ರಿಕಾ): ಸರ್ವಾಂಗೀಣ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸತತ 3ನೇ ಬಾರಿಗೆ ಸೆಮಿಫೈನಲ್​ಗೇರಿತು. ಸೆನ್ವೆಸ್ ಪಾರ್ಕ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪ್ರಿಯಂ ಗಾರ್ಗ್ ಪಡೆ 74 ರನ್​ಗಳಿಂದ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಕಿರಿಯರ ವಿಶ್ವಕಪ್​ನಲ್ಲಿ ಭಾರತಕ್ಕೆ ಸತತ 10ನೇ ಗೆಲುವು ಇದಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ 4 ಬಾರಿಯ ಚಾಂಪಿಯನ್ ಭಾರತ ತಂಡ, ಯಶಸ್ವಿ ಜೈಸ್ವಾಲ್ (62 ರನ್, 82 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಅಥರ್ವ ಅಂಕೋಲ್ಕರ್ (55*ರನ್, 54 ಎಸೆತ, 5 ಬೌಂಡರಿ, 1 ಸಿಕ್ಸರ್) ಆಸರೆಯಲ್ಲಿ 9 ವಿಕೆಟ್​ಗೆ 233 ರನ್​ಗಳಿಸಿತು. ಬಳಿಕ ಕಾರ್ತಿಕ್ ತ್ಯಾಗಿ (24ಕ್ಕೆ 4) ಹಾಗೂ ಆಕಾಶ್ ಸಿಂಗ್ (30ಕ್ಕೆ 3) ದಾಳಿಗೆ ಬೆದರಿದ ಆಸ್ಟ್ರೇಲಿಯಾ 43.3 ಓವರ್​ಗಳಲ್ಲಿ 159 ರನ್​ಗಳಿಗೆ ಸರ್ವಪತನ ಕಂಡಿತು. ಕಿರಿಯರ ವಿಶ್ವಕಪ್​ನಲ್ಲಿ ಭಾರತಕ್ಕೆ 2103ರಿಂದ ಆಸ್ಟ್ರೇಲಿಯಾ ಎದುರು ಸತತ 5ನೇ ಗೆಲುವು ಇದಾಗಿದೆ.

ಭಾರತ ತಂಡ ಸೆಮಿಫೈನಲ್​ನಲ್ಲಿ ಬಾಂಗ್ಲಾದೇಶ- ದಕ್ಷಿಣ ಆಫ್ರಿಕಾ ನಡುವಿನ ಕ್ವಾರ್ಟರ್​ಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಭಾರತ: 9 ವಿಕೆಟ್​ಗೆ 233 (ಯಶಸ್ವಿ ಜೈಸ್ವಾಲ್ 62, ಅಥರ್ವ ಅಂಕೋಲ್ಕರ್ 55*, ಸಿದ್ದೇಶ್ ವೀರ್ 25, ರವಿ ಬಿಷ್ಣೋಯಿ 30, ಕೆಲ್ಲಿ 45ಕ್ಕೆ 2, ಟೊಡ್ ಮರ್ಫಿ 40ಕ್ಕೆ 2), ಆಸ್ಟ್ರೇಲಿಯಾ: 43.3 ಓವರ್​ಗಳಲ್ಲಿ 159 (ಸ್ಯಾಮ್ ಫ್ಯಾನ್ನಿಂಗ್ 75, ಸ್ಕಾಟ್ 35, ಕಾರ್ತಿಕ್ 24ಕ್ಕೆ 4, ಆಕಾಶ್ 30ಕ್ಕೆ 3, ಬಿಷ್ಣೋಯಿ 26ಕ್ಕೆ 1).

ಕಾರ್ತಿಕ್-ಆಕಾಶ್ ಕಡಿವಾಣ

ಸಾಧಾರಣ ಮೊತ್ತ ಬೆನ್ನಟ್ಟಿದ ಆಸೀಸ್​ಗೆ ಮೊದಲ ಓವರ್​ನಲ್ಲೇ ಕಾರ್ತಿಕ್ ತ್ಯಾಗಿ ಆಘಾತ ನೀಡಿದರು. ಆರಂಭಿಕ ಬ್ಯಾಟ್ಸ್​ಮನ್ ಫ್ರೆಸರ್ ಮೆಕ್​ಗುರ್ಕ್ ಎಸೆತ ಎದುರಿಸುವ ಮೊದಲೇ ರನೌಟ್ ಬಲೆಗೆ ಬಿದ್ದರೆ, ನಾಯಕ ಮ್ಯಾಕೆನ್​ಜೀ ಹಾರ್ವೆ (4) ಹಾಗೂ ಲಚ್ಲಾನ್ ಹಿಯಾರ್ನೆ (0) ಮೊದಲ ಓವರ್​ನ 4ನೇ ಹಾಗೂ 5ನೇ ಎಸೆತದಲ್ಲಿ ಔಟಾದರು. 4 ರನ್​ಗೆ 3 ವಿಕೆಟ್ ಕಳೆದುಕೊಂಡ ಆಸೀಸ್ ಸೋಲಿನ ಸುಳಿಯಲ್ಲಿ ಸಿಲುಕಿತು. ಆರಂಭಿಕ ಸ್ಯಾಮ್ ಫ್ಯಾನ್ನಿಂಗ್ (75) ಏಕಾಂಗಿ ನಿರ್ವಹಣೆ ಮೂಲಕ ಭಾರತೀಯ ಬೌಲರ್​ಗಳನ್ನು ಕೆಲಕಾಲ ಕಾಡಿದರು. ಪ್ಯಾಟ್ರಿಕ್ ರೊವೆ (21) ಜತೆಗೂಡಿ 5ನೇ ವಿಕೆಟ್​ಗೆ 51 ರನ್, ಲಿಯಾನ್ ಸ್ಕಾಟ್ (35) ಜತೆಗೂಡಿ 6ನೇ ವಿಕೆಟ್​ಗೆ 81 ರನ್ ಸೇರಿಸಿ ತಿರುಗೇಟು ನೀಡಲು ಯತ್ನಿಸಿದರು. ಸ್ಪಿನ್ನರ್ ರವಿ ಬಿಷ್ಣೋಯಿ, ಸ್ಕಾಟ್ ವಿಕೆಟ್ ಕಬಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ ಆಸೀಸ್ 4 ರನ್ ಅಂತರದಲ್ಲಿ ಕಡೇ 4 ವಿಕೆಟ್ ಕಳೆದುಕೊಂಡಿತು.

ಯಶಸ್ವಿ ಜೈಸ್ವಾಲ್ ಆಸರೆ, ಮೊತ್ತ ಏರಿಸಿದ ಅಥರ್ವ-ರವಿ

ಟಾಸ್ ಸೋತು ಬ್ಯಾಟಿಂಗ್​ಗಿಳಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಆರಂಭಿಕ ಯಶಸ್ವಿ ಜೈಸ್ವಾಲ್ ತಂಡಕ್ಕೆ ಆಸರೆಯಾದರು. ಬಳಿಕ ಒಂದು ಹಂತದಲ್ಲಿ 114 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯ ಲ್ಲಿದ್ದ ಭಾರತಕ್ಕೆ ಆಲ್ರೌಂಡರ್ ಅಥರ್ವ ಅಂಕೋಲ್ಕರ್ ಬಿರುಸಿನ ಬ್ಯಾಟಿಂಗ್ ಮೂಲಕ ಆಸರೆಯಾಗಿ ಮೊತ್ತ ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ರವಿ ಬಿಷ್ಣೋಯಿ (30 ರನ್, 31 ಎಸೆತ, 1 ಬೌಂಡರಿ, 1 ಸಿಕ್ಸರ್) ಜತೆಗೂಡಿ ಅಥರ್ವ 7ನೇ ವಿಕೆಟ್​ಗೆ 59 ಎಸೆತಗಳಲ್ಲಿ 61 ರನ್ ಸೇರಿಸಿದರು. ಇನಿಂಗ್ಸ್​ನ ಅಂತಿಮ ಹಂತದವರೆಗೂ ಹೋರಾಡಿದ ಅಥರ್ವ ಮೊತ್ತವನ್ನು 230ರ ಗಡಿ ದಾಟಿಸಿದರು.

200: ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್​ನಲ್ಲಿ 200 ಗೆಲುವು ದಾಖಲಿಸಿದ ಮೊದಲ ತಂಡ ಎನಿಸಿಕೊಂಡಿತು. 261 ಪಂದ್ಯಗಳಲ್ಲಿ 56 ಸೋಲು, 2 ಟೈ, 3 ರದ್ದು ಕಂಡಿದೆ.

10: ಸತತ 10ನೇ ಗೆಲುವು ಕಂಡ ಭಾರತ, 2002-04ರಲ್ಲಿ ಸತತ 9 ಜಯ ಕಂಡಿದ್ದ ಆಸೀಸ್ ದಾಖಲೆ ಮುರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net