

ಲಂಡನ್: ಸರಿಯಾದ ಸಮಯದಲ್ಲಿ ಬ್ಯಾಟಿಂಗ್ ಲಯ ಕಂಡುಕೊಂಡ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ (45 ರನ್, 206 ಎಸೆತ, 4 ಬೌಂಡರಿ) ಮತ್ತು ಉಪನಾಯಕ ಅಜಿಂಕ್ಯ ರಹಾನೆ (61 ರನ್, 146 ಎಸೆತ, 5 ಬೌಂಡರಿ) ದಿಟ್ಟ ಜತೆಯಾಟದ ನೆರವಿನಿಂದ ಭಾರತ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಸೋಲಿನ ಅಪಾಯದಿಂದ ಪಾರಾಗುವತ್ತ ಮುನ್ನಡೆದಿದೆ. ಅಗ್ರ ಕ್ರಮಾಂಕದ ವೈಲ್ಯದ ನಡುವೆ ಟೆಸ್ಟ್ ತಜ್ಞ ಬ್ಯಾಟಿಂಗ್ ಜೋಡಿ ಜಿಗುಟಿನ ಆಟದ ಮೂಲಕ ಅಂತಿಮ ದಿನದಾಟದಲ್ಲಿ ಗೆಲುವು ಒಲಿಸಿಕೊಳ್ಳುವ ಆಸೆಯನ್ನೂ ಭಾರತ ತಂಡ ಜೀವಂತವಿರಿಸಿದೆ.
‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 4ನೇ ದಿನದಾಟವಾದ ಭಾನುವಾರ, 27 ರನ್ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ಮಂದ ಬೆಳಕಿನಿಂದ ದಿನದಾಟ ಬೇಗನೆ ಸ್ಥಗಿತಗೊಂಡಾಗ 6 ವಿಕೆಟ್‌ಗೆ 181 ರನ್ ಕಲೆಹಾಕಿದೆ. ಸದ್ಯ ಭಾರತ 154 ರನ್ ಮುನ್ನಡೆ ಸಾಧಿಸಿದ್ದು, ಸೋಲಿನ ಭೀತಿಯಿಂದ ಬಹುತೇಕ ಪಾರಾಗಿದೆ ಮತ್ತು ಗೆಲುವು ಅಥವಾ ಡ್ರಾ ಸಾಧಿಸುವ ಅವಕಾಶ ವೃದ್ಧಿಸಿಕೊಂಡಿದೆ. ರಿಷಭ್ ಪಂತ್ (14*), ಇಶಾಂತ್ ಶರ್ಮ (4*) ಕ್ರೀಸ್‌ನಲ್ಲಿದ್ದಾರೆ.
ಪೂಜಾರ-ರಹಾನೆ ತಾಳ್ಮೆಯ ಆಟ
ಭೋಜನ ವಿರಾಮಕ್ಕೆ ಮುನ್ನ ಭಾರತ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜತೆಗೂಡಿದ ಪೂಜಾರ-ರಹಾನೆ ಆಪದ್ಭಾಂದವರಾದರು. ಪ್ರವಾಸದ ಈ ಹಿಂದಿನ ಇನಿಂಗ್ಸ್‌ಗಳಲ್ಲಿ ರನ್‌ಬರ ಎದುರಿಸಿದ್ದ ಜೋಡಿ ಸೂಕ್ತ ಸಮಯದಲ್ಲಿ ಭಾರತದ ರಕ್ಷಣೆಗೆ ನಿಂತಿತು. ತಾಳ್ಮೆಯ ಆಟದೊಂದಿಗೆ ಆತಿಥೇಯ ಬೌಲರ್‌ಗಳಿಗೆ ಕಗ್ಗಂಟಾದ ಜೋಡಿ 4ನೇ ವಿಕೆಟ್‌ಗೆ 49.3 ಓವರ್ ಎದುರಿಸಿ ಭರ್ತಿ 100 ರನ್ ಸೇರಿಸಿತು. ನಂತರ 12 ರನ್ ಅಂತರದಲ್ಲಿ ಇಬ್ಬರೂ ಪೆವಿಲಿಯನ್ ಸೇರಿದರು.
ಪೂಜಾರ ಜಿಗುಟಿನ ಆಟ
ಕ್ರೀಸ್‌ಗಿಳಿದ ಆರಂಭದಿಂದಲೇ ಜಿಗುಟಿನ ಆಟವಾಡಿದ ಚೇತೇಶ್ವರ ಪೂಜಾರ ಖಾತೆ ತೆರೆಯಲು 35ನೇ ಎಸೆತದವರೆಗೆ ಕಾದರು. ಬಳಿಕ 100ನೇ ಎಸೆತ ಎದುರಿಸಿದಾಗ 12 ರನ್‌ಗಳನ್ನಷ್ಟೇ ಗಳಿಸಿದ್ದರು. ಎದುರಿಸಿದ 118ನೇ ಎಸೆತದಲ್ಲಿ ಅವರು ಮೊದಲ ಬೌಂಡರಿ ಬಾರಿಸಿದರು. ಮತ್ತೊಂದೆಡೆ ರಹಾನೆ ತಾಳ್ಮೆಯ ಆಟದೊಂದಿಗೆ ರನ್ ಕಲೆಹಾಕುವುದರಲ್ಲೂ ಹಿಂದುಳಿಯಲಿಲ್ಲ.
ಭಾರತಕ್ಕೆ ಆರಂಭಿಕ ಆಘಾತ
ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಭಾರತದ 2ನೇ ಇನಿಂಗ್ಸ್‌ಗೆ ಆರಂಭಿಕ ಆಘಾತ ನೀಡಿದರು. ಮೊದಲ ಇನಿಂಗ್ಸ್ ಶತಕವೀರ ಕೆಎಲ್ ರಾಹುಲ್ ಕೇವಲ 5 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮ (21) ಕೂಡ ದಿನದ 12ನೇ ಓವರ್‌ನಲ್ಲಿ ನಿರ್ಗಮಿಸಿದರು. ಸ್ವಲ್ಪ ಸಮಯದ ಬಳಿಕ ವಿರಾಟ್ ಕೊಹ್ಲಿ (20) ಸ್ಯಾಮ್ ಕರ‌್ರನ್ ಎಸೆತದಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿದರು. ಇದರಿಂದ ಭಾರತ ಭೋಜನ ವಿರಾಮದ ವೇಳೆಗೆ 56 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.