

ಅಹಮದಾಬಾದ್: ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಟಿ20 ವಿಶ್ವಚಾಂಪಿಯನ್ ನ್ಯೂಜಿಲೆಂಡ್ ಎದುರು 59 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ರಿಂದ ಮುನ್ನಡೆ ಸಾಧಿಸಿದೆ. ಕಾಯಂ ನಾಯಕಿ ಹರ್ಮಾನ್‌ಪ್ರೀತ್ ಕೌರ್ ಗಾಯದ ಸಮಸ್ಯೆಯಿಂದ ಗೈರಾದ ನಡುವೆ ಉಪನಾಯಕಿ ಸ್ಮತಿ ಮಂದನಾ ತಂಡ ಮುನ್ನಡೆಸಿದರು.
ಗುರುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಅಮೆಲಿಯಾ ಕೆರ್ (42ಕ್ಕೆ 4) ಹಾಗೂ ಜೆಸ್ ಕೆರ್ (49ಕ್ಕೆ 3) ಸಹೋದರಿಯರ ಬಿಗಿ ದಾಳಿಯ ನಡುವೆಯೂ, ಅನುಭವಿ ದೀಪ್ತಿ ಶರ್ಮ (41 ರನ್, 51 ಎಸೆತ, 2 ಬೌಂಡರಿ, 1 ಸಿಕ್ಸರ್)- ತೇಜಲ್ ಹನ್ಸ್‌ಬೈನ್ಸ್ (42 ರನ್, 64 ಎಸೆತ, 3 ಬೌಂಡರಿ) ಜತೆಯಾಟದ ನೆರವಿನಿಂದ 44.3 ಓವರ್‌ಗಳಲ್ಲಿ 227 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ರಾಧಾ ಯಾದವ್ (35ಕ್ಕೆ 3) ಹಾಗೂ ಇತರ ಬೌಲರ್‌ಗಳ ಸಂಘಟಿತ ದಾಳಿಗೆ ನಲುಗಿದ ನ್ಯೂಜಿಲೆಂಡ್ 40.4 ಓವರ್‌ಗಳಲ್ಲಿ 168 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟಿ20 ವಿಶ್ವಕಪ್‌ನ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತು. ಎರಡನೇ ಏಕದಿನ ಪಂದ್ಯ ಭಾನುವಾರ ನಡೆಯಲಿದೆ.
ಭಾರತ: 44.3 ಓವರ್‌ಗಳಲ್ಲಿ 227 (ಶೆಾಲಿ 33, ಸ್ಮತಿ 5, ಯಸ್ತಿಕಾ 37, ಹೇಮಲತಾ 3, ಜೆಮೀಮಾ 35, ತೇಜಲ್ 42, ದೀಪ್ತಿ 41, ಆರುಂಧತಿ 14, ರಾಧಾ 3, ಸೈಮಾ 2, ಅಮೆಲಿಯಾ 42ಕ್ಕೆ 4, ಜೆಸ್ ಕೆರ್ 49ಕ್ಕೆ 3).
ನ್ಯೂಜಿಲೆಂಡ್: 40.4 ಓವರ್‌ಗಳಲ್ಲಿ 168 (ಸುಜಿ 1, ಜಾರ್ಜಿಯಾ 25, ಲೌರೆನ್ 26, ಹ್ಯಾಲಿ ಡೇ 39, ಮ್ಯಾಡಿ ಗ್ರೀನ್ 31, ಇಸಾಬೆಲ್ಲಾ 9,ಜೆಸ್ 3, ಅಮೆಲಿಯಾ 25*, ರಾಧಾ 35ಕ್ಕೆ 3, ಸೈಮಾ 26ಕ್ಕೆ2).