

Pak cricketer: ಪಾಕಿಸ್ತಾನ ನನ್ನ ಜನ್ಮಭೂಮಿಯಾಗಿರಬಹುದು, ಆದರೆ ನನ್ನ ಪೂರ್ವಜರ ನಾಡು ಭಾರತ ನನ್ನ ಮಾತೃಭೂಮಿ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕನೇರಿಯಾ, ಭಾರತ ನನ್ನ ಪಾಲಿಗೆ ಒಂದು ದೇವಸ್ಥಾನವಿದ್ದಂತೆ, ಆದರೆ ಸದ್ಯ ಭಾರತದ ಪೌರತ್ವವನ್ನು ಪಡೆಯುವ ಯಾವುದೇ ಯೋಜನೆ ನನಗಿಲ್ಲ. ಭವಿಷ್ಯದಲ್ಲಿ ಯಾರಾದರೂ ಹಾಗೆ ಮಾಡಲು ಯೋಚಿಸಿದರೆ, ನಮ್ಮಂತಹ ಜನರಿಗೆ ಸಿಎಎ ಈಗಾಗಲೇ ಜಾರಿಯಲ್ಲಿದೆ ಎಂದು ಹೇಳಿದರು. ಈ ಮೂಲಕ ಪಾಕ್ ಮಾಜಿ ಕ್ರಿಕೆಟಿಗ, ಮುಂಬರುವ ದಿನಗಳಲ್ಲಿ ಭಾರತೀಯ ಪೌರತ್ವವನ್ನು ಪಡೆಯುವ ತಮ್ಮ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.
ಅನೇಕ ಜನರು ನನ್ನನ್ನು ಪಾಕಿಸ್ತಾನದ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ, ಇನ್ನೂ ಕೆಲವರು ನಾನು ಭಾರತದ ಪೌರತ್ವ ಪಡೆಯಲು ಇದನ್ನೆಲ್ಲಾ ಮಾಡುತ್ತೇನೆ ಎಂದು ಆರೋಪಿಸುತ್ತಾರೆ, ದಾಖಲೆಗಳನ್ನು ಸರಿಪಡಿಸುವುದು ಮುಖ್ಯ ಎಂದು ಕನೇರಿಯಾ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಪಾಕಿಸ್ತಾನದ ಅಧಿಕಾರಿಗಳು ಮತ್ತು ಕ್ರಿಕೆಟ್ ಮಂಡಳಿಯಿಂದ ಅನೇಕ ರೀತಿಯಲ್ಲಿ ತಾರತಮ್ಯ ಎದುರಿಸುತ್ತಿದ್ದರೂ, ಪಾಕಿಸ್ತಾನ ತನ್ನ ಜನ್ಮಭೂಮಿ ಎಂದು ಹಿಂದೂ ಆಗಿರುವ ಮಾಜಿ ಲೆಗ್ ಬ್ರೇಕ್ ಬೌಲರ್ ಕನೇರಿಯಾ ಹೇಳಿದ್ದಾರೆ. 2000 ರಿಂದ 2010 ರವರೆಗೆ ಹತ್ತು ವರ್ಷಗಳ ಕಾಲ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಡ್ಯಾನಿಶ್, ಆ ಸಮಯದಲ್ಲಿ ಪಾಕ್ ಅಭಿಮಾನಿಗಳಿಂದ ಪಡೆದ ಪ್ರೀತಿಯನ್ನು ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುವ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರು ಭಾರತೀಯ ಪೌರತ್ವವನ್ನು ಪಡೆಯಬಹುದು. ಇತ್ತೀಚೆಗೆ, ಸರ್ಕಾರ ಪ್ರವೇಶಕ್ಕಾಗಿ ಕಟ್-ಆಫ್ ದಿನಾಂಕವನ್ನು ಡಿಸೆಂಬರ್ 31, 2024 ಕ್ಕೆ ವಿಸ್ತರಿಸಿದೆ.
ಏಪ್ರಿಲ್ನಲ್ಲಿ 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಕನೇರಿಯಾ, ಇದರಲ್ಲಿ ಪಾಕಿಸ್ತಾನದ ಪಾತ್ರ ಇಲ್ಲವಾದರೆ ಪ್ರಧಾನಿ ಶೆಹಬಾಜ್ ಷರೀಪ್ ಇನ್ನೂ ಏಕೆ ಅದನ್ನು ಖಂಡಿಸಿಲ್ಲ? ಎಂದು ಪ್ರಶ್ನೆ ಮಾಡಿದ್ದರು. ಇದಷ್ಟೆ ಅಲ್ಲದೇ ಪಾಕಿಸ್ತಾನ ಸೇನೆ ಇದ್ದಕ್ಕಿದ್ದಂತೆ ಏಕೆ ಅಲರ್ಟ್ ಆಗಿದೆ? ಏಕೆಂದರೆ ನಿಮಗೆ ಸತ್ಯ ತಿಳಿದಿದೆ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ. ನೀವು ಭಯೋತ್ಪಾದನೆಯನ್ನು ಹೆಚ್ಚಿಸುತ್ತಿದ್ದೀರಿ. ಇದು ನಿಮಗೆ ನಾಚಿಕೆಗೇಡಿನ ಸಂಗತಿ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.(ಏಜೆನ್ಸೀಸ್)