

ಮೆಲ್ಬೋರ್ನ್: ಕೋವಿಡ್-19ರಿಂದಾಗಿ ಭಾರೀ ಸಂಕಷ್ಟದಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾ ನಷ್ಟ ಸರಿದೂಗಿಸಿ ಕೊಳ್ಳುವ ಸಲುವಾಗಿ ವರ್ಷಾಂತ್ಯದಲ್ಲಿ ಭಾರತ ತಂಡದ ಪ್ರವಾಸಕ್ಕಾಗಿ ಆಸ್ಟ್ರೇಲಿಯಾ ಸರ್ಕಾರ ವಿನಾಯಿತಿ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಒಂದು ವೇಳೆ ಸರಣಿ ಕೈತಪ್ಪಿದ್ದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾಗೆ (ಸಿಎ) 1500 ಕೋಟಿ ರೂ (300 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್) ನಷ್ಟವುಂಟಾಗಲಿದ್ದು, ಈ ಕುರಿತು ಭಾರತ ತಂಡದ ಪ್ರವಾಸಕ್ಕೆ ಅನುವು ಮಾಡಿಕೊಡಬೇಕು ಎಂದು ಸಿಎ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸಿಎ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂಧಿಸಿದೆ ಎಂದು ತಿಳಿದು ಬಂದಿದೆ. ಕೋವಿಡ್-19 ರಿಂದ ಆಸ್ಟ್ರೇಲಿಯಾದಲ್ಲಿ ವಿದೇಶಿಗರಿಗೆ ಪ್ರವೇಶ ನಿರ್ಬಂಧವಿದ್ದು, ಭಾರತ ತಂಡಕ್ಕೆ ಮಾತ್ರ ವಿಶೇಷ ವಿನಾಯಿತಿ ಸಿಗಲಿದೆ. ಉಭಯ ತಂಡಗಳ ನಡುವೆ ಡಿಸೆಂಬರ್-ಜನವರಿಯಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ನಿಗದಿಯಾಗಿದೆ.
ಲಾಕ್ಡೌನ್ನಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಿಎ, ತನ್ನ 80 ರಷ್ಟು ನೌಕರರನ್ನು ವಜಾಗೊಳಿಸಿದೆ. ಸೆಪ್ಟೆಂಬರ್ 30ರವರೆಗೂ ಆಸ್ಟ್ರೇಲಿಯಾದ ಗಡಿ ಭಾಗಗಳನ್ನು ಮುಚ್ಚಲು ಆದೇಶಿಸಲಾಗಿದ್ದು, ವಿದೇಶಿಗರ ಪ್ರವಾಸವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮುಂದಿನ ಬೇಸಿಗೆಯಲ್ಲಿ ನಿಗದಿಯಾಗಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆಯೋಜಿಸಿ ನಷ್ಟ ಭರ್ತಿ ಮಾಡಿಕೊಳ್ಳಲು ಸಿಎ ಯೋಜನೆ ರೂಪಿಸುತ್ತಿದೆ. ಇದರಿಂದ ಭಾರತ ತಂಡಕ್ಕೆ ಪ್ರವಾಸಕ್ಕೆ ಅನುವು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಒತ್ತಡ ಹಾಕುವ ತಂತ್ರವನ್ನು ಸಿಎ ರೂಪಿಸಿದೆ. ಪ್ರಸಾರದ ಹಕ್ಕು ಸೇರಿದಂತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಿಎ 500 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (2500 ಸಾವಿರ ಕೋಟಿ ರೂ) ಆದಾಯ ನಿರೀಕ್ಷಿಸುತ್ತಿದೆ. ಒಂದು ವೇಳೆ ಪ್ರೇಕ್ಷಕರಿಲ್ಲದೆ ಸರಣಿ ಸಂಘಟಿಸಿದರೂ 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳಷ್ಟೆ (244 ಕೋಟಿ ರೂ) ಉಂಟಾಗಲಿದೆ. ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳದಿದ್ದರೆ ಕ್ರಿಕೆಟ್ ಆಸ್ಟ್ರೇಲಿಯಾ ಆರ್ಥಿಕ ಸ್ಥಿತಿ ಧೂಳೀಪಟವಾಗಲಿದೆ.
ಆಸೀಸ್ ಪ್ರಧಾನಿ ಭರವಸೆ: ಕ್ರೀಡಾ ಚಟುವಟಿಕೆ ಪುನರಾರಂಭಿಸುವ ಕುರಿತು ವಿವಿಧ ಹಂತದ ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮೊರಿಸನ್ ತಿಳಿಸಿದ್ದಾರೆ. ಸುರಕ್ಷಿತ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ, ಸಾಧ್ಯವಾದಷ್ಟು ಬೇಗ ಕ್ರೀಡಾ ಚಟುವಟಿಕೆ ಪುನರಾರಂಭ ಗೊಳ್ಳಬೇಕೆಂಬುದೇ ನಮ್ಮ ಆಶಯ ಎಂದರು.
ಪ್ರತಿಕ್ರಿಯೆಗೆ ಬಿಸಿಸಿಐ ನಕಾರ: ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರೆ 4 ಪಂದ್ಯಗಳ ಬದಲಾಗಿ 5 ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆಗೆ ಸಿಎ ಸಿಎಒ ಕೆವಿನ್ ರಾರ್ಬರ್ಟ್ಸ್ ಆಸಕ್ತಿ ವಹಿಸಿರುವ ಬಗ್ಗೆ ಬಿಸಿಸಿಐ ಪ್ರತಿಕ್ರಿಯಿಸಲು ನಿರಾಕರಿಸಿದೆ. ಈ ಕುರಿತು ಸೂಕ್ತ ವೇಳೆ ತೀರ್ಮಾನ ಕೈಗೊಳ್ಳಲಾಗುವುದು, ಸದ್ಯ ಕರೊನಾ ವೈರಸ್ನಿಂದಾಗಿ ಇಡೀ ಕ್ರೀಡಾಲೋಕವೇ ಸ್ತಬ್ಧಗೊಂಡಿದ್ದು, ಸದ್ಯಕ್ಕೆ ಯಾವುದೇ ತೀರ್ಮಾನ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಕ್ಟೋಬರ್ ವರೆಗೂ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಕ್ಟೋಬರ್-ನವೆಂಬರ್ನಲ್ಲೇ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಿಗದಿಯಾಗಿದೆ.