

ರಾಯ್‌ಪುರ: ಚೊಚ್ಚಲ ಆವೃತ್ತಿಯ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 (ಐಎಮ್‌ಎಲ್‌ಟಿ) ಟೂರ್ನಿಯಲ್ಲಿ ದಿಗ್ಗಜ ಸಚಿನ್ ತೆಂಡುಲ್ಕರ್ ಸಾರಥ್ಯದ ಭಾರತ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಆರಂಭಿಕ ಅಂಬಟಿ ರಾಯುಡು (74 ರನ್, 50 ಎಸೆತ, 9 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ ಭಾರತ ತಂಡ ಮಾಜಿ ಕ್ರಿಕೆಟಿಗರ ಟೂರ್ನಿಯ ೈನಲ್‌ನಲ್ಲಿ ವೆಸ್ಟ್ ಇಂಡೀಸ್ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿತು. ಬ್ರಿಯಾನ್ ಲಾರಾ ನಾಯಕತ್ವದ ವಿಂಡೀಸ್ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.
ಎಸ್‌ವಿಎನ್‌ಎಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ಬ್ರಿಯಾನ್ ಲಾರಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಸ್ಪಿನ್ನರ್ ಶಾಬಾಜ್ ಅಹ್ಮದ್ (12ಕ್ಕೆ 2) ಹಾಗೂ ಕನ್ನಡಿಗ ವೇಗಿ ವಿನಯ್ ಕುಮಾರ್ (26ಕ್ಕೆ 3) ಬಿಗಿ ದಾಳಿಯ ನಡುವೆಯೂ ಆರಂಭಿಕ ಡ್ವೇನ್ ಸ್ಮಿತ್ (45) ಬಿರುಸಿನ ಆರಂಭ ಹಾಗೂ ಬ್ಯಾಟರ್ ಲೆಂಡಲ್ ಸಿಮನ್ಸ್ (57 ರನ್, 41 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ವಿಂಡೀಸ್ 7 ವಿಕೆಟ್‌ಗೆ 148 ರನ್ ಕಲೆಹಾಕಿತು. ಪ್ರತಿಯಾಗಿ ಸಚಿನ್ ತೆಂಡುಲ್ಕರ್ (25) ಹಾಗೂ ಅಂಬಟಿ ರಾಯುಡು ಒದಗಿಸಿದ ಉತ್ತಮ ಆರಂಭದ ನೆರವಿನಿಂದ ಭಾರತ ತಂಡ 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 149 ರನ್‌ಗಳಿಸಿ ತವರಿನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ವೆಸ್ಟ್ ಇಂಡೀಸ್ ಮಾಸ್ಟರ್ಸ್: 7 ವಿಕೆಟ್‌ಗೆ 148 (ಡ್ವೇನ್ ಸ್ಮಿತ್ 45, ಬ್ರಿಯಾನ್ ಲಾರಾ 6, ವಿಲಿಯಂ ಪರ್ಕಿನ್ಸ್ 5, ಲೆಂಡಲ್ ಸಿಮನ್ಸ್ 57, ರವಿ ರಾಂಪಾಲ್ 2, ಚಾವ್ಡೀಕ್ ವಾಲ್ಟನ್ 6, ದಿನೇಶ್ ರಾಮ್ದಿನ್ 12*, ಶಾಬಾಜ್ ಅಹ್ಮದ್ 12ಕ್ಕೆ 2, ವಿನಯ್ ಕುಮಾರ್ 26ಕ್ಕೆ 3, ಸ್ಟುವರ್ಟ್ ಬಿನ್ನಿ 11ಕ್ಕೆ 1).
ಭಾರತ ಮಾಸ್ಟರ್ಸ್: 17.1 ಓವರ್‌ಗಳಲ್ಲಿ 4 ವಿಕೆಟ್‌ಗೆ 149 (ಸಚಿನ್ 25, ರಾಯುಡು 74, ಗುರುಕೀರತ್ 14, ಯುವರಾಜ್ 14*, ಬಿನ್ನಿ 15*, ಆಶ್ಲೇ ನರ್ಸ್ 21ಕ್ಕೆ 2).