

ಕೊಲಂಬೊ: ಪ್ರಸ್ತುತ ಅತಿಥೇಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೈಗೊಂಡಿರುವ ಭಾರತ, ಇಂದು ಎರಡನೇ ಪಂದ್ಯದಲ್ಲಿ ಲಂಕಾ ಪಡೆಯನ್ನು ಮಣಿಸಲು ಭಾರೀ ಪೈಪೋಟಿ ನಡೆಸಿದ್ದೇ ಆದರೂ ಅಂತಿಮವಾಗಿ 32 ರನ್ಗಳ ಅಂತರದಿಂದ ಸೋಲಿಗೆ ಶರಣಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಗೆಲುವಿನ ದಡ ಸೇರುವಲ್ಲಿ ಕಡೆಗೂ ವಿಫಲರಾದರು.
ಮೊದಲ ಏಕದಿನ ಪಂದ್ಯ ಟೈ ಆದ ಬೆನ್ನಲ್ಲೇ ಎರಡನೇ ಪಂದ್ಯವನ್ನು ಹೇಗಾದರೂ ವಶಪಡಿಸಿಕೊಳ್ಳಬೇಕು ಎಂದು ಗುರಿಯಿಟ್ಟಿದ್ದ ರೋಹಿತ್ ಶರ್ಮ ಪಡೆಗೆ ಇದೀಗ ಸೋಲಿನ ಕಹಿ ಎದುರಾಗಿದೆ. ರೋಹಿತ್ರ ಆಕರ್ಷಕ ಇನ್ನಿಂಗ್ಸ್ ( 44 ಎಸೆತಗಳಲ್ಲಿ 64 ರನ್) ಕೊಡುಗೆ ಕಡೆಗೂ ಫಲಿಸದೆ ಹೋಯಿತ್ತಲ್ಲಾ ಎಂಬುದೇ ಸದ್ಯ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.