ಟೀಮ್ ಇಂಡಿಯಾಗೆ ಸತತ 2ನೇ ಸೋಲು, ಕಠಿಣಗೊಂಡ ಸೆಮೀಸ್ ಹಾದಿ

INDIA AND NEW ZEALAND MATCH FOR WEB
Published on

ದುಬೈ: ನ್ಯೂಜಿಲೆಂಡ್ ಬೌಲರ್‌ಗಳ ಶಿಸ್ತು ಬದ್ಧ ಬೌಲಿಂಗ್ ಹಾಗೂ ಬ್ಯಾಟರ್‌ಗಳ ಸಮಯೋಚಿತ ನಿರ್ವಹಣೆ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಸೋಲನುಭವಿಸಿತು. ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ‘ಕ್ವಾರ್ಟರ್ ಫೈನಲ್’ ಮಾದರಿಯಂತಿದ್ದ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳಿಂದ ಶರಣಾಯಿತು. ಈ ಸೋಲಿನೊಂದಿಗೆ ವಿರಾಟ್ ಕೊಹ್ಲಿ ಪಡೆಯ ಸೆಮೀಸ್ ಕನಸು ಬಹುತೇಕ ಭಗ್ನಗೊಂಡಿದ್ದು, ಏನಿದ್ದರೂ ಇತರ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ತಂಡದ ಭವಿಷ್ಯ ಅಡಗಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತದ ಎದುರು ಅಜೇಯ ಓಟ ಮುಂದುವರಿಸಿತು.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಟಾಸ್ ಸೋತ ವಿರಾಟ್ ಕೊಹ್ಲಿ ಬಳಗ ಬ್ಯಾಟಿಂಗ್‌ಗಿಳಿಯಿತು. ವೇಗಿ ಟ್ರೆಂಟ್ ಬೌಲ್ಟ್ (20ಕ್ಕೆ 3) ಹಾಗೂ ಸ್ಪಿನ್ನರ್ ಇಶ್ ಸೋಧಿ (17ಕ್ಕೆ 2) ಮಾರಕ ದಾಳಿಗೆ ನಲುಗಿದ ಭಾರತ ತಂಡ 7 ವಿಕೆಟ್‌ಗೆ 110 ರನ್‌ಗಳಿಸಿತು. ಬಳಿಕ ಈ ಸಾಧಾರಣ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ, 14.3 ಓವರ್‌ಗಳಲ್ಲಿ 2 ವಿಕೆಟ್‌ಗೆ 111 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಮಾರ್ಟಿಕ್ ಗುಪ್ಟಿಲ್ (20) ಹಾಗೂ ಡೆರಿಲ್ ಮಿಚೆಲ್ (49ರನ್, 35ಎಸೆತ, 4 ಬೌಂಡರಿ, 3 ಸಿಕ್ಸರ್) ಜೋಡಿ ಉತ್ತಮ ಬಿರುಸಿನ ಆರಂಭ ನೀಡಿತು.

ಭಾರತ: 7 ವಿಕೆಟ್‌ಗೆ 110 (ಕೆಎಲ್ ರಾಹುಲ್ 18, ರೋಹಿತ್ ಶರ್ಮ 14, ಹಾರ್ದಿಕ್ ಪಾಂಡ್ಯ 23, ರವೀಂದ್ರ ಜಡೇಜಾ 26*, ಟ್ರೆಂಟ್ ಬೌಲ್ಟ್ 20ಕ್ಕೆ 3, ಇಶ್ ಸೋಧಿ 17ಕ್ಕೆ 2), ನ್ಯೂಜಿಲೆಂಡ್: 14.3 ಓವರ್‌ಗಳಲ್ಲಿ 2 ವಿಕೆಟ್‌ಗೆ 111 (ಡೆರಿಲ್ ಮಿಚೆಲ್ 49, ಕೇನ್ ವಿಲಿಯಮ್ಸನ್ 33*, ಮಾರ್ಟಿನ್ ಗುಪ್ಟಿಲ್ 20, ಜಸ್‌ಪ್ರೀತ್ ಬುಮ್ರಾ 19ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net