ಟೆಸ್ಟ್ ನಂ.1 ಪಟ್ಟದಿಂದ ಕುಸಿದ ಭಾರತ ಐಸಿಸಿ ರ‍್ಯಾಂಕಿಂಗ್; ಏಕದಿನದಲ್ಲಿ ನಂ. 2, ಟಿ20ಯಲ್ಲಿ ನಂ. 3

page 10 5
Published on

ದುಬೈ: ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡು ಜಗತ್ತೇ ಲಾಕ್​ಡೌನ್ ಆಗಿರುವ ನಡುವೆ ಟೀಮ್ ಇಂಡಿಯಾಗೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. 2016ರ ಅಕ್ಟೋಬರ್ ಬಳಿಕ ಮೊದಲ ಬಾರಿಗೆ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟ ಕಳೆದುಕೊಂಡಿರುವ ಭಾರತೀಯ ಕ್ರಿಕೆಟ್ ತಂಡ, 3ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಏಕದಿನ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿರುವ ಭಾರತ ತಂಡ, ಟಿ20 ರ್ಯಾಂಕಿಂಗ್​ನಲ್ಲಿ 3ನೇ ಸ್ಥಾನಕ್ಕೆ ಪ್ರಗತಿ ಕಂಡಿದೆ. ವಾರ್ಷಿಕ ಪರಿಷ್ಕರಣೆಯ ಬಳಿಕ ಐಸಿಸಿ ರ್ಯಾಂಕಿಂಗ್​ನಲ್ಲಿ ದೊಡ್ಡಮಟ್ಟದ ಬದಲಾವಣೆಗಳಾಗಿದ್ದು, ಆಸ್ಟ್ರೇಲಿಯಾ ತಂಡ ಟೆಸ್ಟ್ ಮತ್ತು ಟಿ20 ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟಕ್ಕೇರಿದ್ದರೆ, ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡ ಏಕದಿನ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ.

ಭಾರತದ ಕುಸಿತಕ್ಕೆ ಕಾರಣ: ವಾರ್ಷಿಕ ಪರಿಷ್ಕರಣೆಯ ಅಂಗವಾಗಿ 2016-17ರ ಸಾಲಿನ ನಿರ್ವಹಣೆಯನ್ನು ಐಸಿಸಿ ರ‍್ಯಾಂಕಿಂಗ್ ರೇಟಿಂಗ್​ನಿಂದ ಕೈಬಿಡಲಾಗಿದೆ. ಈ ಅವಧಿಯಲ್ಲಿ ಭಾರತ 12 ಟೆಸ್ಟ್ ಗಳಲ್ಲಿ ಗೆದ್ದು ಕೇವಲ 1ರಲ್ಲಿ ಸೋತಿತ್ತು. ಈ ವೇಳೆ ಭಾರತ 5 ಸರಣಿಗಳನ್ನು ಜಯಿಸಿತ್ತು. ಅದರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯೂ ಸೇರಿತ್ತು. ಇದೇ ಅವಧಿಯಲ್ಲಿ ಆಸೀಸ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧವೂ ಸರಣಿ ಸೋತಿತ್ತು. ಹೀಗಾಗಿ ರ‍್ಯಾಂಕಿಂಗ್ ಪರಿಷ್ಕರಣೆಯಿಂದ ಭಾರತಕ್ಕೆ ನಷ್ಟವಾಗಿದ್ದರೆ, ಆಸೀಸ್​ಗೆ ಲಾಭವಾಗಿದೆ. ಹೊಸ ಪರಿಷ್ಕರಣೆಯಿಂದ 2019ರ ಮೇನಿಂದ ತೋರಿದ ನಿರ್ವಹಣೆಗಳಿಗೆ ಶೇ. 100 ರೇಟಿಂಗ್ ಅಂಕ ದೊರೆತರೆ, ಅದರ ಹಿಂದಿನ 2 ವರ್ಷಗಳ ನಿರ್ವಹಣೆಗೆ ಶೇ. 50ರಷ್ಟು ರೇಟಿಂಗ್ ಅಂಕ ಅನ್ವಯವಾಗಲಿದೆ. ದಕ್ಷಿಣ ಆಫ್ರಿಕಾಕ್ಕೆ ಗರಿಷ್ಠ 8 ಅಂಕ ನಷ್ಟವಾಗಿದ್ದು, ಶ್ರೀಲಂಕಾದಿಂದ ಕೆಳಗೆ 6ನೇ ಸ್ಥಾನಕ್ಕಿಳಿದಿದೆ. -ಪಿಟಿಐ/ಏಜೆನ್ಸೀಸ್

ಇಂಗ್ಲೆಂಡ್ ಅಗ್ರಸ್ಥಾನ ಅಬಾಧಿತ: ಏಕದಿನ ರ್ಯಾಂಕಿಂಗ್​ನಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ವಾರ್ಷಿಕ ಪರಿಷ್ಕರಣೆಯ ನಂತರ ನಂ. 1 ಪಟ್ಟವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಮತ್ತೆ 3 ಅಂಕ ಕಲೆಹಾಕಿರುವ ಇಂಗ್ಲೆಂಡ್, 2ನೇ ಸ್ಥಾನಿ ಭಾರತಕ್ಕಿಂತ 8 ಅಂಕಗಳ ಮುನ್ನಡೆ ಗಳಿಸಿದೆ. ಏಕದಿನ ರ್ಯಾಂಕಿಂಗ್​ನಲ್ಲೂ ಅಂಕಗಳ ಏರುಪೇರು ಆಗಿದ್ದರೂ, ಅಗ್ರ 10ರೊಳಗಿನ ತಂಡಗಳ ಸ್ಥಾನದಲ್ಲಿ ಯಾವುದೇ ಏರಿಳಿತಗಳು ಆಗಿಲ್ಲ.

ಟಿ20ಯಲ್ಲಿ ಕುಸಿತ ಕಂಡ ಪಾಕಿಸ್ತಾನ: 2011ರಲ್ಲಿ ಟಿ20 ರ‍್ಯಾಂಕಿಂಗ್ ಜಾರಿಗೆ ಬಂದ ನಂತರ ಆಸೀಸ್ ಇದೇ ಮೊದಲ ಬಾರಿಗೆ ನಂ. 1 ಸ್ಥಾನಕ್ಕೇರಿದ್ದರೆ, ಅಗ್ರಸ್ಥಾನದಲ್ಲಿದ್ದ ಪಾಕಿಸ್ತಾನ ತಂಡ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. ನ್ಯೂಜಿಲೆಂಡ್ ತಂಡವನ್ನು ಹಿಮ್ಮಟ್ಟಿಸಿ 2018ರ ಜನವರಿಯಲ್ಲಿ ಅಗ್ರಪಟ್ಟಕ್ಕೇರಿದ್ದ ಪಾಕ್, 27 ತಿಂಗಳ ಕಾಲ ಈ ಸ್ಥಾನದಲ್ಲಿತ್ತು. ಇಂಗ್ಲೆಂಡ್ 2ನೇ ಸ್ಥಾನಕ್ಕೇರಿದ್ದರೆ, ಭಾರತ 4ರಿಂದ 3ನೇ ಸ್ಥಾನಕ್ಕೇರಿದೆ. ಅಫ್ಘಾನಿಸ್ತಾನ 7ರಿಂದ 10ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಆಸೀಸ್​ಗೆ ಡಬಲ್ ಧಮಾಕಾ: ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟಕ್ಕೆ ಮರಳುವ ಜತೆಗೆ ಟಿ20 ರ‍್ಯಾಂಕಿಂಗ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಆಸ್ಟ್ರೇಲಿಯಾ ಅಗ್ರಸ್ಥಾನ ಕ್ಕೇರಿದೆ. ಟೆಸ್ಟ್​ನಲ್ಲಿ ನ್ಯೂಜಿಲೆಂಡ್ 2ನೇ ಸ್ಥಾನ ಕಾಯ್ದುಕೊಂಡಿದೆ. ಭಾರತ 4 ವರ್ಷಗಳ ಬಳಿಕ ನಂ. 1 ಪಟ್ಟ ಕಳೆದುಕೊಂಡಿದೆ. ಅಗ್ರ 3 ತಂಡಗಳಾದ ಆಸೀಸ್ (116), ಕಿವೀಸ್ (115) ಮತ್ತು ಭಾರತದ (114) ನಡುವೆ ಕೇವಲ 2 ಅಂಕಗಳ ಅಂತರವಿದೆ. 2003ರಲ್ಲಿ ರ‍್ಯಾಂಕಿಂಗ್ ಪದ್ಧತಿ ಜಾರಿಗೆ ಬಂದ ಬಳಿಕ ಅಗ್ರ 3 ತಂಡಗಳ ನಡುವಿನ 2ನೇ ಅತ್ಯಂತ ಕಡಿಮೆ ಅಂತರ ಇದಾಗಿದೆ. ಈ ಮುನ್ನ 2016ರ ಜನವರಿಯಲ್ಲಿ ಅಗ್ರಸ್ಥಾನಿ ಭಾರತಕ್ಕಿಂತ ಆಸೀಸ್ ಮತ್ತು ದಕ್ಷಿಣ ಆಫ್ರಿಕಾ ಕೇವಲ 1 ಅಂಕದ ಹಿನ್ನಡೆಯಲ್ಲಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net