

ಕೌಲಾಲಂಪುರ: ಭಾರತ ತಂಡ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ನಲ್ಲಿ ಸತತ 2ನೇ ಬಾರಿಗೆ ಜರ್ಮನಿ ವಿರುದ್ಧ ಉಪಾಂತ್ಯದ ಹೋರಾಟದಲ್ಲಿ ನಿರಾಸೆ ಅನುಭವಿಸಿದೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ 1-4 ಗೋಲುಗಳಿಂದ ಪರಾಭವಗೊಂಡಿತು. ತನಗೆ ಲಭಿಸಿದ 12 ಪೆನಾಲ್ಟಿ ಕಾರ್ನರ್ಗಳಲ್ಲಿ ಒಂದನ್ನೂ ಗೋಲಾಗಿ ಪರಿವರ್ತಿಸಲು ವಿಫಲವಾಗಿದ್ದು ಭಾರತ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಅತ್ತ ಜರ್ಮನಿ ತನಗೆ ಲಭಿಸಿದ 2 ಪೆನಾಲ್ಟಿ ಕಾರ್ನರ್ಗಳನ್ನೂ ಗೋಲಾಗಿಸಿತು.
ಸುದೀಪ್ ಚಿರ್ಮಾಕೋ 11ನೇ ನಿಮಿಷದಲ್ಲಿ ಭಾರತ ತಂಡದ ಪರ ಏಕೈಕ ಫೀಲ್ಡ್ ಗೋಲು ಬಾರಿಸಿದರು. ಭಾರತ ತಂಡ ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಜಿದ್ದಾಜಿದ್ದಿನ ಹೋರಾಟ ತೋರಿ, ಮೊದಲಾರ್ಧದಲ್ಲಿ 1-2ರಿಂದ ಹಿನ್ನಡೆ ಅನುಭವಿಸಿತು. ದ್ವೀತಿಯಾರ್ಧದಲ್ಲಿ ಇನ್ನೆರಡು ಗೋಲುಗಳನ್ನು ಬಿಟ್ಟುಕೊಟ್ಟು ಮುಗ್ಗರಿಸಿತು.
ಜರ್ಮನಿಗೆ 8ನೇ ನಿಮಿಷದಲ್ಲಿ ಬೆನ್ ಹಸ್ಬಾಚ್ ಫೀಲ್ಡ್ ಗೋಲು ಮೂಲಕ ಮುನ್ನಡೆ ತಂದುಕೊಟ್ಟರು. ಮೂರೇ ನಿಮಿಷಗಳಲ್ಲಿ ಭಾರತ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಮೊದಲಾರ್ಧ ಮುಕ್ತಾಯಕ್ಕೆ ಕೆಲವೇ ಸೆಕೆಂಡ್ಗಳಿರುವಾಗ ಹಸ್ಬಾಚ್ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಂದು ಗೋಲು ಬಾರಿಸಿ ಮತ್ತೆ ಭಾರತದ ಹಿನ್ನಡೆಗೆ ಕಾರಣರಾದರು. 41 ಮತ್ತು 58ನೇ ನಿಮಿಷಗಳಲ್ಲಿ ಕ್ರಮವಾಗಿ ಪೌಲ್ ಗ್ಲಾಂಡರ್ ಮತ್ತು ಫ್ಲೋರಿಯನ್ ಸ್ಪೆರ್ಲಿಂಗ್ ಗೋಲು ಬಾರಿಸಿ ಭಾರತದ ಸೋಲಿನ ಅಂತರ ಹಿಗ್ಗಿಸಿದರು.
2021ರ ಆವೃತ್ತಿಯಲ್ಲೂ ಜರ್ಮನಿ ವಿರುದ್ಧವೇ ಸೆಮೀಸ್ನಲ್ಲಿ ಸೋತಿದ್ದ ಭಾರತ ಈ ಸಲ ಸೇಡು ತೀರಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿತು. ಭಾರತದ ಕಿರಿಯರು ಜರ್ಮನಿ ವಿರುದ್ಧ ಹಾಲಿ ವರ್ಷ ಆಡಿದ ಐದೂ ಪಂದ್ಯಗಳಲ್ಲಿ ಸೋತಂತಾಗಿದೆ. ಜರ್ಮನಿ ಸತತ 2ನೇ ಮತ್ತು ಕಳೆದ 5 ಆವೃತ್ತಿಗಳಲ್ಲಿ 4ನೇ ಬಾರಿ ಫೈನಲ್ಗೇರಿದ್ದು, 7ನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. 2ನೇ ಸೆಮಿಫೈನಲ್ನಲ್ಲಿ ಸ್ಪೇನ್ ವಿರುದ್ಧ ಗೆದ್ದು ಫ್ರಾನ್ಸ್ ಫೈನಲ್ಗೇರಿದೆ.
ಇನ್ನು ಕಂಚಿಗೆ ಹೋರಾಟ
ಭಾರತ ತಂಡ ಇನ್ನು ಶನಿವಾರ ನಡೆಯಲಿರುವ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಕಂಚಿನ ಪದಕಕ್ಕಾಗಿ ಹೋರಾಡಲಿದೆ. ಕಳೆದ ಬಾರಿ ಕಂಚಿನಿಂದಲೂ ವಂಚಿತವಾಗಿದ್ದ ಭಾರತ ಈ ಬಾರಿ 3ನೇ ಸ್ಥಾನದ ಸಮಾಧಾನವನ್ನಾದರೂ ಕಾಣುವ ಹಂಬಲದಲ್ಲಿದೆ.