

ಪುಣೆ: ಟೀಮ್ ಇಂಡಿಯಾ ಕಳೆದ 12 ವರ್ಷಗಳಲ್ಲಿ ಸತತ 18 ಟೆಸ್ಟ್ ಸರಣಿ ಗೆದ್ದು ತವರಿನಲ್ಲಿ ಸಾಧಿಸಿದ್ದ ಅಮೋಘ ಪ್ರಾಬಲ್ಯಕ್ಕೆ ಪ್ರವಾಸಿ ನ್ಯೂಜಿಲೆಂಡ್ ತಂಡ ಶನಿವಾರ ಬ್ರೇಕ್ ಹಾಕಿದೆ. ಇದರೊಂದಿಗೆ ಭಾರತ ಬರೋಬ್ಬರಿ 4,331 ದಿನಗಳ ಬಳಿಕ ತವರು ನೆಲದಲ್ಲಿ ಟೆಸ್ಟ್ ಸರಣಿ ಕೈಚೆಲ್ಲಿದೆ. ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (77 ರನ್, 65 ರನ್, 9 ಬೌಂಡರಿ, 3 ಸಿಕ್ಸರ್) ಪ್ರತಿರೋಧದ ನಡುವೆಯೂ, ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (104ಕ್ಕೆ 6) ದಾಳಿಗೆ ತತ್ತರಿಸಿದ ರೋಹಿತ್ ಶರ್ಮ ಪಡೆ, ಎರಡನೇ ಟೆಸ್ಟ್ ಪಂದ್ಯದಲ್ಲಿ 113 ರನ್‌ಗಳಿಂದ ನ್ಯೂಜಿಲೆಂಡ್ ಎದುರು ಸೋಲು ಅನುಭವಿಸಿದೆ. ಇದರೊಂದಿಗೆ ಭಾರತ 3 ಪಂದ್ಯಗಳ ಸರಣಿಯನ್ನು, ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ 0-2ರಿಂದ ಬಿಟ್ಟುಕೊಟ್ಟಿದೆ.
ಈ ಮೂಲಕ ಕಿವೀಸ್ ತಂಡ ಭಾರತದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದು ಬೀಗಿದೆ. ಕಳೆದ ತಿಂಗಳು ಶ್ರೀಲಂಕಾದಲ್ಲಿ 0-2ರಿಂದ ಸರಣಿ ಸೋತ ಬಳಿಕ ಹೊಸ ನಾಯಕ ಟಾಮ್ ಲಾಥಮ್ ಸಾರಥ್ಯ ಹಾಗೂ ಅನುಭವಿ ಕೇನ್ ವಿಲಿಯಮ್ಸನ್ ಗೈರಿನಲ್ಲಿ ನ್ಯೂಜಿಲೆಂಡ್ ಈ ಐತಿಹಾಸಿಕ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಎಂಸಿಎ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ 5 ವಿಕೆಟ್‌ಗೆ 198 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ಕಿವೀಸ್, ರವೀಂದ್ರ ಜಡೇಜಾ (72ಕ್ಕೆ 3) ಬಿಗಿ ದಾಳಿಗೆ ನಲುಗಿ 69.4 ಓವರ್‌ಗಳಲ್ಲಿ 255 ರನ್‌ಗಳಿಗೆ ದ್ವಿತೀಯ ಇನಿಂಗ್ಸ್ ಮುಗಿಸಿತು. ಇದರಿಂದ ಸರಣಿ ಜೀವಂತವಿರಿಸಲು 359 ರನ್‌ಗಳ ಸವಾಲಿನ ಗುರಿ ಪಡೆದ ಭಾರತ, ಯಶಸ್ವಿ ಜೈಸ್ವಾಲ್ ಹಾಗೂ ಶುಭಮಾನ್ ಗಿಲ್ (23) ಜತೆಯಾಟದ ನೆರವಿನಿಂದ ಭೋಜನಾ ವಿರಾಮಕ್ಕೆ 1 ವಿಕೆಟ್‌ಗೆ 81 ರನ್‌ಗಳಿಸಿ ದಿಟ್ಟ ಉತ್ತರದ ನಿರೀಕ್ಷೆ ಮೂಡಿಸಿತು.
ಬಳಿಕ ಚಹಾ ವಿರಾಮದ ವೇಳೆಗೆ 181 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡ ಭಾರತ ಸೋಲಿನ ಹಾದಿ ಹಿಡಿಯಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಲ್ಯದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ (42 ರನ್, 84 ಎಸೆತ, 2 ಬೌಂಡರಿ) ಹೋರಾಟಕ್ಕೆ ಇತರರಿಂದ ಸಮರ್ಥ ಬೆಂಬಲ ದೊರೆಯಲಿಲ್ಲ. ಅಂತಿಮವಾಗಿ 60.2 ಓವರ್‌ಗಳಲ್ಲಿ 245 ರನ್‌ಗಳಿಗೆ ಭಾರತ ಸರ್ವಪತನ ಕಂಡಿತು. ಕಿವೀಸ್ ಸ್ಪಿನ್ನರ್‌ಗಳ ದಾಳಿಗೆ ಕಂಗೆಟ್ಟ ಭಾರತ 98 ರನ್‌ಗಳ ಅಂತರದಲ್ಲಿ ಕೊನೇ 6 ವಿಕೆಟ್ ಕಳೆದುಕೊಂಡು ಸರಣಿ ಸೋಲಿನ ಮುಖಭಂಗ ಅನುಭವಿಸಿತು. 1955ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಪಂದ್ಯವನ್ನಾಡಿದ ನ್ಯೂಜಿಲೆಂಡ್ ಕೊನೆಗೂ 69 ವರ್ಷಗಳ ಬಳಿಕ ತನ್ನ 13ನೇ ಪ್ರಯತ್ನದಲ್ಲಿ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದಂತಾಗಿದೆ.