

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲೇ ಎದುರಾಗಿರುವ ಸತತ 2 ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡ, ಬುಧವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಳ್ಳಲು ಹೋರಾಡಲಿದೆ. ಈ ಮೂಲಕ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಎದುರಾಗುವುದನ್ನು ತಪ್ಪಿಸಲು ಮತ್ತು ಸತತ 5 ಏಕದಿನ ಪಂದ್ಯ ಸೋಲಿನ ಸುಳಿಯಿಂದ ಹೊರಬರಲು ಪ್ರಯತ್ನಿಸಲಿದೆ.
ಮೊದಲ ಎರಡೂ ಪಂದ್ಯಗಳಲ್ಲಿ ಭಾರತ ಬಹುತೇಕ ಒಂದೇ ರೀತಿಯ ತಪ್ಪು ಎಸೆಗಿ ಸೋಲು ಕಂಡಿದೆ. ಬೌಲಿಂಗ್-ಫೀಲ್ಡಿಂಗ್ ವಿಭಾಗದ ವೈಫಲ್ಯದ ಬಳಿಕ ಬೃಹತ್ ಮೊತ್ತವನ್ನು ಚೇಸಿಂಗ್ ಮಾಡುವಲ್ಲಿ ಸದೃಢವಾದ ಬ್ಯಾಟಿಂಗ್ ನಿರ್ವಹಣೆ ತೋರುವಲ್ಲೂ ವಿಫಲವಾಗಿದೆ. ಆದರೆ ಇದೀಗ ಪಂದ್ಯ ಆಡುವ ಮೈದಾನ ಬದಲಾಗುವುದರೊಂದಿಗೆ ಅದೃಷ್ಟವೂ ಬದಲಾಗುವ ನಿರೀಕ್ಷೆಯನ್ನು ಭಾರತ ತಂಡ ಹೊಂದಿದೆ. ಮೊದಲೆರಡೂ ಪಂದ್ಯಗಳು ಸಿಡ್ನಿಯಲ್ಲಿ ನಡೆದಿದ್ದರೆ, ಈ ಪಂದ್ಯ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಸಿಡ್ನಿಗಿಂತಲೂ ಹೆಚ್ಚಾಗಿ ಬ್ಯಾಟಿಂಗ್ ಸ್ನೇಹಿಯಾಗಿದೆ ಎಂಬುದು ಬೌಲರ್‌ಗಳಿಗೆ ಮತ್ತಷ್ಟು ನಿದ್ದೆಗೆಡಿಸಲಿದೆ.
ಬೌಲಿಂಗ್ ವಿಭಾಗದ ಸಮಸ್ಯೆಯನ್ನು ಸರಿಪಡಿಸಲು ಭಾರತ ತಂಡದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಎರಡೂ ಪಂದ್ಯಗಳಲ್ಲಿ ದುಬಾರಿಯಾಗಿರುವ ವೇಗಿ ನವದೀಪ್ ಸೈನಿ ತಂಡದಿಂದ ಹೊರಬೀಳುವುದು ಬಹುತೇಕ ನಿಶ್ಚಿತವೆನಿಸಿದ್ದು, ಶಾರ್ದೂಲ್ ಠಾಕೂರ್ ಅಥವಾ ಯಾರ್ಕರ್ ಸೆನ್ಸೇಶನ್ ಟಿ. ನಟರಾಜನ್ ಕಣಕ್ಕಿಳಿಯಬಹುದು. ಶಾರ್ದೂಲ್ ಈಗಾಗಲೆ ಭಾರತ ಪರ 27 ಪಂದ್ಯ ಆಡಿದ ಅನುಭವ ಹೊಂದಿದ್ದರೆ, ತಮಿಳುನಾಡಿನ ಎಡಗೈ ವೇಗಿ ನಟರಾಜನ್‌ಗೆ ಇದು ಪದಾರ್ಪಣೆಯ ಪಂದ್ಯವಾಗಲಿದೆ.
ಆಸೀಸ್ ಬ್ಯಾಟಿಂಗ್ ವಿಭಾಗ ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಆರಂಭಿಕ ಜತೆಯಾಟವನ್ನೇ ಬೇರ್ಪಡಿಸಲು ಪರದಾಡುತ್ತ ಬಂದಿರುವ ಭಾರತ, ಸ್ಟೀವನ್ ಸ್ಮಿತ್‌ಗೆ ಕಡಿವಾಣ ಹಾಕುವ ಸವಾಲನ್ನೂ ಹೊಂದಿದೆ. ಆದರೆ ಈ ಬಾರಿ ವಾರ್ನರ್, ಕಮ್ಮಿನ್ಸ್ ಇಲ್ಲದಿರುವುದು ಆಸೀಸ್‌ಗೆ ಸ್ವಲ್ಪ ಹಿನ್ನಡೆಯಾಗಿದೆ. ಇದರ ಲಾಭವನ್ನು ಭಾರತ ತಂಡ ಬಳಸಿಕೊಳ್ಳಬೇಕಿದೆ.
ಮೊದಲೆರಡು ಪಂದ್ಯಗಳಲ್ಲಿ 335-340 ರನ್‌ಗಳ ಸವಾಲು ಇದ್ದರೂ ಬೆನ್ನಟ್ಟುವ ತಾಕತ್ತನ್ನು ಭಾರತೀಯ ಬ್ಯಾಟಿಂಗ್ ವಿಭಾಗ ಪ್ರದರ್ಶಿಸಿತ್ತು. ಹೀಗಾಗಿ ಭಾರತ ಗೆಲುವಿನ ಲಯಕ್ಕೆ ಮರಳಲು ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದ ಸುಧಾರಣೆಯೇ ಪ್ರಮುಖವೆನಿಸಿದೆ. ಪ್ರಮುಖವಾಗಿ ಕೂಕಬುರಾ ಚೆಂಡಿಗೆ ಹೊಂದಿಕೊಳ್ಳುವುದು ಭಾರತೀಯ ಬೌಲರ್‌ಗಳಿಗೆ ಸವಾಲಾಗಿದೆ.
ಟೀಮ್ ನ್ಯೂಸ್:
ಭಾರತ: ಭಾರತ ತಂಡದಲ್ಲಿ ಬದಲಾವಣೆ ನಿಶ್ಚಿತವೆನಿಸಿದ್ದರೂ, ಹೀಗೆಯೇ ಆಗಲಿದೆ ಎಂದು ಹೇಳುವುದು ಕಷ್ಟಕರ. ನವದೀಪ್ ಸೈನಿ ಹೊರಬಿದ್ದರೆ ಟಿ. ನಟರಾಜನ್ ಅಥವಾ ಶಾರ್ದೂಲ್ ಠಾಕೂರ್ ಆಡಬಹುದು. ಬುಮ್ರಾ ಅಥವಾ ಶಮಿಗೆ ವಿಶ್ರಾಂತಿ ನೀಡಿದರೆ ಇವರಿಬ್ಬರೂ ಕಣಕ್ಕಿಳಿಬಹುದು. ಪ್ರವಾಸದ 19 ಓವರ್‌ಗಳಲ್ಲಿ 160 ರನ್ ಬಿಟ್ಟುಕೊಟ್ಟಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬದಲು ಕುಲದೀಪ್ ಆಡಬಹುದು. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬದಲಿಗೆ ಮನೀಷ್ ಪಾಂಡೆ ಅಥವಾ ಸಂಜು ಸ್ಯಾಮ್ಸನ್ ಆಡಬಹುದು. ಮಯಾಂಕ್ ಅಗರ್ವಾಲ್ ಬದಲಿಗೆ ಶುಭಮಾನ್ ಗಿಲ್ ಆಡಬಹುದು ಅಥವಾ ಕೆಎಲ್ ರಾಹುಲ್ ಆರಂಭಿಕರಾಗಿ ಬಡ್ತಿ ಪಡೆಯಬಹುದು.
ಆಸ್ಟ್ರೇಲಿಯಾ: ವಾರ್ನರ್ ಗಾಯದಿಂದ ಅಲಭ್ಯರಾಗಿರುವುದರಿಂದ ಡಾರ್ಸಿ ಶಾರ್ಟ್ ಅಥವಾ ಮ್ಯಾಥ್ಯೂ ವೇಡ್ ಕಣಕ್ಕಿಳಿಯಬಹುದು ಅಥವಾ ಮಾರ್ನಸ್ ಲಬುಶೇನ್ ಆರಂಭಿಕರಾಗಿ ಬಡ್ತಿ ಪಡೆಯಬಹುದು. ಆಗ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಮಧ್ಯಮ ಕ್ರಮಾಂಕದಲ್ಲಿ ಪದಾರ್ಪಣೆಯ ಅವಕಾಶ ಪಡೆಯಬಹುದು. ವಿಶ್ರಾಂತಿ ಪಡೆದಿರುವ ಪ್ಯಾಟ್ ಕಮ್ಮಿನ್ಸ್ ಬದಲಿಗೆ ಸೀನ್ ಅಬೋಟ್ ಕಣಕ್ಕಿಳಿಯಬಹುದು. ಇದು ಅಬೋಟ್‌ಗೆ 2014ರ ಬಳಿಕ ಮೊದಲ ಏಕದಿನ ಪಂದ್ಯವಾಗಿರಲಿದೆ.
ಪಂದ್ಯ ಆರಂಭ: ಬೆಳಗ್ಗೆ 9.10
ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ.
ಇನ್ನಷ್ಟು ರನ್‌ಪ್ರವಾಹದ ನಿರೀಕ್ಷೆ
ಆಸ್ಟ್ರೇಲಿಯಾದಲ್ಲೇ ಅತ್ಯಂತ ್ಲ್ಯಾಟ್ ಆಗಿರುವ ಪಿಚ್ ಮನುಕಾ ಓವಲ್ ಮೈದಾನದಲ್ಲಿದೆ. ಹೀಗಾಗಿ ಬೌಂಡರಿ ದೊಡ್ಡದಾಗಿದ್ದರೂ, ರನ್‌ಪ್ರವಾಹ ಹೇರಳವಾಗಿ ಹರಿಯುತ್ತದೆ. ಇಲ್ಲಿ ನಡೆದ ಕಳೆದ 7 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಜಯಿಸಿದೆ. ಈ ಪೈಕಿ 6 ತಂಡಗಳು 320ಕ್ಕೂ ಅಧಿಕ ಮೊತ್ತ ಪೇರಿಸಿವೆ. ಇಲ್ಲಿನ ಕೊನೇ 4 ಮೊದಲ ಇನಿಂಗ್ಸ್‌ಗಳಲ್ಲಿ 340ಕ್ಕೂ ಅಧಿಕ ರನ್ (372/2, 411/4, 348/8, 378/5) ಸಿಡಿದಿವೆ. ಹೀಗಾಗಿ ಇಲ್ಲೂ ಟಾಸ್ ನಿರ್ಣಾಯಕವಾಗಿರಲಿದೆ.
12 ಸಾವಿರ ರನ್ ಸನಿಹ ಕೊಹ್ಲಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ಸಾವಿರ ರನ್ ಪೂರೈಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಇನ್ನೊಂದು ದಾಖಲೆಯ ನಿರೀಕ್ಷೆಯಲ್ಲಿದ್ದಾರೆ. ಅವರಿನ್ನು 23 ರನ್ ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 12 ಸಾವಿರ ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಲಿದ್ದಾರೆ. ಕೊಹ್ಲಿ ಸದ್ಯ 241 ಇನಿಂಗ್ಸ್‌ಗಳಿಂದ 11,9177 ರನ್ ಗಳಿಸಿದ್ದಾರೆ. ಸಚಿನ್ ತೆಂಡುಲ್ಕರ್ 300 ಇನಿಂಗ್ಸ್‌ಗಳಲ್ಲಿ 12 ಸಾವಿರ ರನ್ ಗಳಿಸಿರುವುದು ಅತಿವೇಗದ ಸಾಧನೆಯಾಗಿದೆ. ಈ ಮುನ್ನ 12 ಸಾವಿರ ರನ್ ಪೂರೈಸಿರುವ ಐವರು ಬ್ಯಾಟ್ಸ್‌ಮನ್‌ಗಳೆಂದರೆ ತೆಂಡುಲ್ಕರ್ (18,426), ಕುಮಾರ ಸಂಗಕ್ಕರ (14,234), ರಿಕಿ ಪಾಂಟಿಂಗ್ (13,704), ಸನತ್ ಜಯಸೂರ್ಯ (13,430) ಮತ್ತು ಮಹೇಲ ಜಯವರ್ಧನೆ (12,650).
150: ಮೊಹಮದ್ ಶಮಿ 2 ವಿಕೆಟ್ ಕಬಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್ ಪೂರೈಸಲಿದ್ದಾರೆ.
2: ಭಾರತ ತಂಡ ಕ್ಯಾನ್‌ಬೆರಾದಲ್ಲಿ ಈ ಹಿಂದೆ 2 ಏಕದಿನ ಪಂದ್ಯವಾಡಿದ್ದು, ಎರಡರಲ್ಲೂ ಸೋತಿದೆ. 2008ರಲ್ಲಿ ಶ್ರೀಲಂಕಾ ಮತ್ತು 2016ರಲ್ಲಿ ಆತಿಥೇಯ ಆಸೀಸ್ ವಿರುದ್ಧ ಸೋಲು ಕಂಡಿತ್ತು.
4: ಆಸೀಸ್ ತಂಡ ಕ್ಯಾನ್‌ಬೆರಾದಲ್ಲಿ ಇದುವರೆಗೆ ಆಡಿದ 4 ಏಕದಿನ ಪಂದ್ಯದಲ್ಲೂ ಜಯಿಸಿದ ಅಜೇಯ ದಾಖಲೆ ಹೊಂದಿದೆ.
2: ವರ್ಷಾರಂಭದ ಕಿವೀಸ್ ಪ್ರವಾಸದ ಏಕದಿನ ಸರಣಿಯಲ್ಲಿ 0-3ರಿಂದ ಸೋತಿದ್ದ ಭಾರತ ಸತತ 2ನೇ ವೈಟ್‌ವಾಷ್ ತಪ್ಪಿಸಲು ಗೆಲ್ಲಲೇಬೇಕಿದೆ.
*ಆಸ್ಟ್ರೇಲಿಯನ್ನರು ನನ್ನ ವಿರುದ್ಧವೂ ಕಾರ್ಯತಂತ್ರ ರೂಪಿಸಿದ್ದರು ಎಂಬುದನ್ನು ಕೇಳಿ ಖುಷಿಯಾಯಿತು. ನನ್ನ ವಿರುದ್ಧ ಶಾರ್ಟ್ ಬಾಲ್ ಪ್ರಯೋಗಿಸುವ ಅವರ ಸವಾಲನ್ನು ಸ್ವೀಕರಿಸಿರುವೆ ಮತ್ತು ಇನ್ನಷ್ಟು ಉತ್ತಮ ನಿರ್ವಹಣೆ ತೋರಲು ಇದು ಪ್ರೇರಣೆ ತುಂಬಿದೆ.
ಶ್ರೇಯಸ್ ಅಯ್ಯರ್, ಟೀಮ್ ಇಂಡಿಯಾ ಬ್ಯಾಟ್ಸ್‌ಮನ್
ರ‌್ಯಾಂಕಿಂಗ್ ಕುಸಿತದ ಭೀತಿ
ಭಾರತ ತಂಡ ಅಂತಿಮ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳದಿದ್ದರೆ ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ 2ರಿಂದ 3ನೇ ಸ್ಥಾನಕ್ಕೆ ಕುಸಿಯುವ ಭೀತಿ ಎದುರಿಸುತ್ತಿದೆ. ಭಾರತ ಗೆದ್ದರೆ 1 ಅಂಕ ಸಂಪಾದಿಸುವ ಜತೆಗೆ 2ನೇ ಸ್ಥಾನ ಉಳಿಸಿಕೊಳ್ಳಬಹುದು. ಸೋತರೆ 1 ಅಂಕ ನಷ್ಟದೊಂದಿಗೆ 3ನೇ ಸ್ಥಾನಕ್ಕಿಳಿಯಲಿದ್ದು, ನ್ಯೂಜಿಲೆಂಡ್ 2ನೇ ಸ್ಥಾನಕ್ಕೇರಲಿದೆ. ಫಲಿತಾಂಶ ಏನೇ ಆದರೂ ಆಸೀಸ್ 4ನೇ ಸ್ಥಾನದಲ್ಲೇ ಉಳಿಯಲಿದೆ. ಇಂಗ್ಲೆಂಡ್ ಅಗ್ರಸ್ಥಾನದಲ್ಲಿದೆ.