

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೊಹಾಲಿ, ಇಂದೋರ್ನಲ್ಲಿ ಗೆದ್ದು ಬೀಗಿರುವ ಭಾರತ ತಂಡ ಇದೀಗ ಉದ್ಯಾನನಗರಿಯಲ್ಲೂ ಗೆಲುವಿನ ಓಟ ಮುಂದುವರಿಸುವ ಮೂಲಕ ಸರಣಿ ಕ್ಲೀನ್ಸ್ವೀಪ್ ಸಂಭ್ರಮ ಕಾಣುವ ತವಕದಲ್ಲಿದೆ. ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯ ಬುಧವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರೋಹಿತ್ ಶರ್ಮ ಪಡೆ ಮತ್ತೊಂದು ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.
ಆಲ್ರೌಂಡರ್ ಶಿವಂ ದುಬೆ ಮೊದಲೆರಡೂ ಪಂದ್ಯಗಳಲ್ಲಿ ಮಿಂಚಿದ್ದು, ಭಾರತ ಇಂದೋರ್ನಲ್ಲೇ ಸರಣಿ ವಶಪಡಿಸಿಕೊಳ್ಳಲು ನೆರವಾಗಿದ್ದಾರೆ. ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಇನ್ನೂ 5 ತಿಂಗಳು ಬಾಕಿ ಇದ್ದರೂ, ಅದಕ್ಕೆ ಮುನ್ನ ಭಾರತ ತಂಡ ಆಡಲಿರುವ ಕೊನೇ ಚುಟುಕು ಕ್ರಿಕೆಟ್ ಪಂದ್ಯ ಇದಾಗಿದೆ. ಹೀಗಾಗಿ ತಂಡ ಸಂಯೋಜನೆ ಪರೀಸಲು ಇದು ಕೊನೇ ಅವಕಾಶವಾಗಿದೆ.
14 ತಿಂಗಳ ಬಳಿಕ ಭಾರತ ಪರ ಟಿ20 ಪಂದ್ಯ ಆಡಿರುವ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಂದ ದೊಡ್ಡ ಮೊತ್ತದ ನಿರೀಕ್ಷೆ ಅಭಿಮಾನಿಗಳದ್ದಾಗಿದೆ. ಇದಕ್ಕಾಗಿ ಭಾರತ ತಂಡ ಚಿನ್ನಸ್ವಾಮಿಯಲ್ಲಿ ಮೊದಲ ಸರದಿಯಲ್ಲಿ ಬ್ಯಾಟಿಂಗ್ಗೆ ಇಳಿಯುವುದು ಕೂಡ ಅಗತ್ಯವಾಗಿದೆ.
ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಸಿಕ್ಕ ಅವಕಾಶವನ್ನು ಶಿವಂ ದುಬೆ ಉತ್ತಮವಾಗಿಯೇ ಬಳಸಿಕೊಂಡಿದ್ದಾರೆ. ಹಾರ್ದಿಕ್ ಸ್ಥಾನ ತುಂಬಲು ಸದ್ಯ ಇವರೇ ಉತ್ತಮ ಆಯ್ಕೆ ಎನಿಸಿದ್ದಾರೆ. ಹೀಗಾಗಿ ಆಗಾಗ ಗಾಯಕ್ಕೆ ತುತ್ತಾಗುವ ಹಾರ್ದಿಕ್ಗೆ ಬದಲಿಯಾಗಿ ದುಬೆ ಮುಂದೆಯೂ ಮೀಸಲು ಪಡೆಯಲ್ಲಿ ಉಳಿಯಲಿದ್ದು, ಬೌಲಿಂಗ್ನಲ್ಲೂ ಮಿಂಚುವ ಅಗತ್ಯವಿದೆ.
*7: ಭಾರತ ತಂಡ ಬೆಂಗಳೂರಿನಲ್ಲಿ ಇದುವರೆಗೆ 7 ಟಿ20 ಪಂದ್ಯ ಆಡಿದ್ದು, ತಲಾ 3 ಗೆಲುವು-ಸೋಲು ಕಂಡಿದೆ. 1 ಪಂದ್ಯ ಮಳೆಯಿಂದ ರದ್ದುಗೊಂಡಿದೆ.
ಟೀಮ್ ನ್ಯೂಸ್:
ಭಾರತ: ಈಗಾಗಲೆ ಸರಣಿ ವಶಪಡಿಸಿಕೊಂಡಿರುವ ಭಾರತ ತಂಡ ಕೊನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ಕುಲದೀಪ್ ಯಾದವ್ ಮತ್ತು ಆವೇಶ್ ಖಾನ್ಗೆ ಸ್ಥಾನ ಕಲ್ಪಿಸುವ ನಿರೀಕ್ಷೆ ಇದೆ.
ಅಫ್ಘಾನಿಸ್ತಾನ: ರಶೀದ್ ಖಾನ್ ಗೈರಿನಲ್ಲಿ ಬಲ ಕಳೆದುಕೊಂಡಂತಿರುವ ಆ್ಘನ್ ಬೌಲಿಂಗ್ ವಿಭಾಗಕ್ಕೆ ಈ ಬಾರಿ ಯುವ ಲೆಗ್ ಸ್ಪಿನ್ನರ್ ಕೈಸ್ ಅಹ್ಮದ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ
ಒತ್ತಡದಲ್ಲಿ ರೋಹಿತ್
ಯುವ ಆಟಗಾರರ ತಂಡದೊಂದಿಗೆ ಆರಂಭಿಕ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ನಡುವೆ ನಾಯಕ ರೋಹಿತ್ ಶರ್ಮ ವೈಯಕ್ತಿಕವಾಗಿ ಸರಣಿಯಲ್ಲಿ ಇನ್ನೂ ಖಾತೆಯನ್ನೇ ತೆರೆದಿಲ್ಲ. ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿರುವ ಅವರು, ಟಿ20 ವಿಶ್ವಕಪ್ಗೆ ಮುನ್ನ ಭಾರತ ಆಡಲಿರುವ ಕೊನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಲಯ ಪ್ರದರ್ಶಿಸಬೇಕಾಗಿದೆ. ಹಾಗೆಂದು ಈ ಪಂದ್ಯದ ವೈಫಲ್ಯ ಅವರಿಗೆ ಟಿ20 ವಿಶ್ವಕಪ್ ಬಾಗಿಲು ಮುಚ್ಚುವ ಸಾಧ್ಯತೆ ಇಲ್ಲ. ಐಪಿಎಲ್ನಲ್ಲೂ ಅವರು ಟಿ20 ಆರ್ಭಟ ಪ್ರದರ್ಶಿಸಿ ಆಯ್ಕೆಗಾರರ ಮನಗೆಲ್ಲಬಹುದಾಗಿದೆ.
ಧೋನಿ ದಾಖಲೆ ಮುರಿಯುವತ್ತ ರೋಹಿತ್
ಬೆಂಗಳೂರಿನಲ್ಲಿ ಗೆದ್ದರೆ ರೋಹಿತ್ ಶರ್ಮ ಟಿ20 ತಂಡದ ನಾಯಕರಾಗಿ ಗರಿಷ್ಠ ಗೆಲುವು ಕಂಡ ಭಾರತೀಯರೆನಿಸಲಿದ್ದಾರೆ. ರೋಹಿತ್ (53 ಪಂದ್ಯ) ಸದ್ಯ ಧೋನಿ (72 ಪಂದ್ಯ) ಜತೆಗೆ ತಲಾ 41 ಗೆಲುವಿನ ಸಮಬಲ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ 42 ಗೆಲುವು ಕಂಡಿರುವ ನಾಯಕರಾದ ಇಂಗ್ಲೆಂಡ್ನ ಇವೊಯಿನ್ ಮಾರ್ಗನ್, ಪಾಕಿಸ್ತಾನದ ಬಾಬರ್ ಅಜಮ್, ಉಗಾಂಡದ ಬ್ರಿಯಾನ್ ಮಸಾಬಾ ಮತ್ತು ಅಫ್ಘಾನಿಸ್ತಾನದ ಅಸ್ಘರ್ ಆಫ್ಘನ್ ಜಂಟಿ ದಾಖಲೆಯನ್ನೂ ರೋಹಿತ್ ಸರಿಗಟ್ಟಲಿದ್ದಾರೆ.
ಪಿಚ್ ರಿಪೋರ್ಟ್
ಬ್ಯಾಟರ್ಗಳ ಪಾಲಿನ ಸ್ವರ್ಗವೆನಿಸಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಸಲವೂ ರನ್ಮಳೆಯ ನಿರೀಕ್ಷೆ ಇದೆ. ಕಳೆದ ತಿಂಗಳು ಇಲ್ಲಿ ನಡೆದ ಆಸೀಸ್ ವಿರುದ್ಧದ ಟಿ20ಯಲ್ಲಿ ಭಾರತ ತಂಡ 160 ರನ್ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
12 ಸಾವಿರ ರನ್ ಸನಿಹ ಕೊಹ್ಲಿ
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪಂದ್ಯದಲ್ಲಿ 6 ರನ್ ಗಳಿಸಿದರೆ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಎನಿಸಲಿದ್ದಾರೆ. ಕೊಹ್ಲಿ ಸದ್ಯ 375 ಪಂದ್ಯಗಳಲ್ಲಿ 11,994 ರನ್ ಬಾರಿಸಿದ್ದಾರೆ. ಈ ಪೈಕಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಗಳಿಸಿರುವ 4,037 ರನ್ ಮತ್ತು ಐಪಿಎಲ್ನಲ್ಲಿ ಸಿಡಿಸಿರುವ 7,263 ರನ್ಗಳೂ ಸೇರಿವೆ. ಕೊಹ್ಲಿ 12 ಸಾವಿರಕ್ಕೂ ಅಧಿಕ ರನ್ ಗಳಿಸಿದ ವಿಶ್ವದ 4ನೇ ಬ್ಯಾಟರ್ ಎನಿಸಲಿದ್ದಾರೆ. ಕ್ರಿಸ್ ಗೇಲ್ (14,562), ಶೋಯಿಬ್ ಮಲಿಕ್ (12,993) ಮತ್ತು ಕೈರಾನ್ ಪೊಲ್ಲಾರ್ಡ್ (12,430) ಮೊದಲ ಮೂವರು ಸಾಧಕರಾಗಿದ್ದಾರೆ.