

ದುಬೈ: ಮೊದಲ ಪಂದ್ಯದಲ್ಲಿ ಸೋಲುಂಡಿರುವ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾ ಎದುರು ಭಾನುವಾರ ಸೆಣಸಲಿದೆ. ಟೂರ್ನಿಯ ಮುಂದಿನ ಸುತ್ತಿಗೇರಲು ಉಳಿದಿರುವ ಎಲ್ಲ ಲೀಗ್ ಪಂದ್ಯಗಳಲ್ಲಿ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿರುವ ಹರ್ಮಾನ್‌ಪ್ರೀತ್ ಕೌರ್ ಪಡೆ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ.
ನ್ಯೂಜಿಲೆಂಡ್ ವಿರುದ್ಧದ ನೀರಸ ನಿರ್ವಹಣೆಯಿಂದಾಗಿ ಭಾರತ ಮಾಡು ಇಲ್ಲವೇ ಮಡಿ ಒತ್ತಡದಲ್ಲಿ ಸಿಲುಕಿದೆ. ಎ ಗುಂಪಿನಲ್ಲಿ ಅಗ್ರ 2ರಲ್ಲಿ ಸ್ಥಾನ ಖಾತ್ರಿಪಡಿಸಿಕೊಳ್ಳಲು ಹರ್ಮಾನ್‌ಪ್ರೀತ್ ಪಡೆಗೆ ಗೆಲುವು ಅನಿವಾರ್ಯ. ಜತೆಗೆ ಇತರ ಪಂದ್ಯಗಳ ಲಿತಾಂಶವೂ ವರದಾನವಾಗಬೇಕಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ಅಗತ್ಯ.ಕಿವೀಸ್ ವಿರುದ್ಧದ ಸೋಲು ರನ್‌ರೇಟ್‌ನಲ್ಲೂ (-2.99) ಹಿನ್ನಡೆ ತಂದಿದೆ. ಉಳಿದಿರುವ ಮೂರು ಪಂದ್ಯಗಳಲ್ಲಿ (ಪಾಕ್, ಶ್ರೀಲಂಕಾ, ಆಸ್ಟ್ರೇಲಿಯಾ) ಎದುರು ಭಾರಿ ಅಂತರದಲ್ಲಿ ಗೆದ್ದರಷ್ಟೇ ಭಾರತ ನಾಕೌಟ್ ಆಸೆಗೆ ಬಲ ತುಂಬಲಿದೆ. ಪಾಕಿಸ್ತಾನ ಎದುರು ಉತ್ತಮ ಗೆಲುವಿನ ದಾಖಲೆ ಹೊಂದಿರುವ ಭಾರತ ಟೂರ್ನಿಯಲ್ಲಿ ಪುಟಿದೇಳುವ ನಿರೀಕ್ಷೆ ಇದೆ. ಇದಕ್ಕೆ ಬ್ಯಾಟರ್‌ಗಳ ಕೊಡುಗೆ ಅತಿಮುಖ್ಯ ಎನಿಸಿದೆ. ಆದರೆ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಏಷ್ಯಾ ಚಾಂಪಿಯನ್ ಶ್ರೀಲಂಕಾವನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.ವೇಗಿ ದಿಯಾನ್ ಬೇಗ್ ಗಾಯದ ಸಮಸ್ಯೆ ಹಿನ್ನಡೆ ಎನಿಸಿದೆ.
ಭಾರತ ತಂಡದ ಹನ್ನೊಂದರ ಬಳಗ ಜತೆಗೆ ಬ್ಯಾಟಿಂಗ್ ಕ್ರಮಾಂಕದ ಆಯ್ಕೆ ಗೊಂದಲ ಮೂಡಿಸಿದೆ. ಆರಂಭಿಕ ಶೆಾಲಿ ವರ್ಮ ಅಸ್ಥಿರ ಪ್ರದರ್ಶನನ ಜತೆಗೆ ಹರ್ಮಾನ್‌ಪ್ರೀತ್ ಮೂರನೇ ಕ್ರಮಾಂಕದಲ್ಲಿ ಆಡಿರುವ ಹಿಂದಿನ 19 ಪಂದ್ಯಗಳಲ್ಲಿ ಒಂದೂ ಅರ್ಧಶತಕಗಳಿಸಿಲ್ಲ. ಹೆಚ್ಚುವರಿ ವೇಗಿ ಆಯ್ಕೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗೆ ಅವಕಾಶ ಕಲ್ಪಿಸಿದೆ.ಪಾಕಿಸ್ತಾದ ಎದುರು ಆರುಂಧತಿ ರೆಡ್ಡಿ ಬದಲಿಗೆ ದಯಾಳನ್ ಹೇಮಲತಾ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಪೂಜಾ ವಸಾಕರ್ ಹಾಲಿ ವರ್ಷ ಆಡಿರುವ 16 ಟಿ20 ಪಂದ್ಯಗಳಲ್ಲಿ 20 ವಿಕೆಟ್ ಪಡೆದರೆ, ಸ್ಪಿನ್ನರ್ ರಾಧಾ ಯಾದವ್ 13 ಇನಿಂಗ್ಸ್‌ಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನ ಎದುರು ಸೋಲು ಅನುಭವಿಸಿದರೆ ಭಾರತ ವಿಶ್ವಕಪ್ ಕನಸು ಬಹುತೇಕ ಭಗ್ನಗೊಳ್ಳಲಿದೆ.
ಮುಖಾಮುಖಿ: 15
ಭಾರತ:12
ಪಾಕ್: 3
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್ ಸ್ಟಾರ್