

ದುಬೈ: ಐಸಿಸಿಯ ಟಿ20 ಮತ್ತು ಏಕದಿನ ರ್ಯಾಂಕಿಂಗ್ನಲ್ಲಿ ಈಗಾಗಲೆ ಅಗ್ರಸ್ಥಾನದಲ್ಲಿದ್ದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲೂ ವಿಶ್ವ ನಂ. 1 ಪಟ್ಟಕ್ಕೇರಿದೆ. ಭಾರತ ತಂಡ ರಾಂಚಿಯಲ್ಲಿ ಸರಣಿ ಗೆದ್ದಾಗಲೇ ನಂ. 1 ಪಟ್ಟಕ್ಕೆ ಮರಳುವುದು ಖಚಿತಪಟ್ಟಿತ್ತು. ಧರ್ಮಶಾಲಾ ಟೆಸ್ಟ್ನಲ್ಲಿ ಭಾರತ ಇನಿಂಗ್ಸ್ ಗೆಲುವು ಕಾಣುವುದರೊಂದಿಗೆ ಸರಣಿ ಗೆಲುವಿನ ಅಂತರವನ್ನು 4-1ಕ್ಕೆ ವಿಸ್ತರಿಸಿಕೊಂಡಿದ್ದು, ಭಾನುವಾರ ಬಿಡುಗಡೆಯಾದ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 122 ಅಂಕಗಳೊಂದಿಗೆ ಅಧಿಕೃತವಾಗಿ ಅಗ್ರಸ್ಥಾನ ಅಲಂಕರಿಸಿದೆ.
117 ಅಂಕ ಹೊಂದಿರುವ ಆಸ್ಟ್ರೆಲಿಯಾ 2ನೇ ಸ್ಥಾನಕ್ಕೆ ಕುಸಿದಿದ್ದರೆ, ಇಂಗ್ಲೆಂಡ್ ತಂಡ 111 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್-ಆಸ್ಟ್ರೆಲಿಯಾ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ರ‍್ಯಾಂಕಿಂಗ್ ಪಟ್ಟಿ ಮತ್ತೊಮ್ಮೆ ಪರಿಷ್ಕರಣೆಗೊಳ್ಳಲಿದೆ. ಆದರೆ ಆಸೀಸ್-ಕಿವೀಸ್ ನಡುವೆ ಕೆಸ್ಟ್ಚರ್ಚ್ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಲಿತಾಂಶ ಏನೇ ಬಂದರೂ ಭಾರತ ತಂಡದ ಅಗ್ರಸ್ಥಾನಕ್ಕೆ ಯಾವುದೇ ಭೀತಿ ಇಲ್ಲ.
ಭಾರತ ಈಗ ಐಸಿಸಿಯ ಮೂರೂ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಮುನ್ನ 2023ರ ಸೆಪ್ಟೆಂಬರ್ನಿಂದ 2024ರ ಜನವರಿವರೆಗೂ ಇದೇ ರೀತಿ ಮೂರೂ ಪ್ರಕಾರದ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ ಜನವರಿಯಲ್ಲಿ ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-1 ಸಮಬಲಕ್ಕೆ ತೃಪ್ತಿಪಟ್ಟ ಬಳಿಕ ಭಾರತ ಅಗ್ರಸ್ಥಾನವನ್ನು ಆಸೀಸ್ಗೆ ಬಿಟ್ಟುಕೊಟ್ಟಿತ್ತು. ಭಾರತ ಈಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಂಕಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದೆ.