

ನವದೆಹಲಿ: ಲಾಸ್ ಏಂಜಲಿಸ್ ಒಲಿಂಪಿಕ್ಸ್ಗೆ ಟಿ20 ಕ್ರಿಕೆಟ್ ಸೇರಿಸುವಲ್ಲಿ ಯಶಸ್ವಿಯಾಗಿರುವ ಐಸಿಸಿ ಇದೀಗ 2030ರ ಯೂತ್ ಒಲಿಂಪಿಕ್ಸ್ಗೂ ಕ್ರಿಕೆಟ್ ಆಟವನ್ನು ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದೆ. ಯೂತ್ ಒಲಿಂಪಿಕ್ಸ್ ಕ್ರಿಕೆಟ್ ಸೇರ್ಪಡೆಯ ಸಂಬಂಧ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಜತೆಗೆ ಚರ್ಚಿಸಲಾಗುವುದು ಎಂದು ಐಸಿಸಿ ಹೇಳಿದೆ. 2030ರ ಯೂತ್ ಒಲಿಂಪಿಕ್ ಗೇಮ್ಸ್ ಆತಿಥ್ಯಕ್ಕೆ ಭಾರತ ಬಿಡ್ ಸಲ್ಲಿಸಲು ಮುಂದಾಗಿರುವ ನಡುವೆ ಇದು ಮಹತ್ವದ ಹೆಜ್ಜೆಯಾಗಿದೆ.
2036ರ ಒಲಿಂಪಿಕ್ಸ್ಗೆ ಬಿಡ್ ಸಲ್ಲಿಸುವ ಯೋಜನೆಯಲ್ಲಿರುವ ಕೇಂದ್ರ ಸರ್ಕಾರ, ಅದಕ್ಕೆ ಮುನ್ನ 2030ರ ಯೂತ್ ಒಲಿಂಪಿಕ್ಸ್ಅನ್ನು ಮುಂಬೈನಲ್ಲಿ ನಡೆಸಲು ಯೋಜಿಸಿದೆ. ಒಂದು ವೇಳೆ ಭಾರತಕ್ಕೆ ಯೂತ್ ಒಲಿಂಪಿಕ್ಸ್ ಆತಿಥ್ಯ ಲಭಿಸಿದರೆ, ಕ್ರಿಕೆಟ್ ಸೇರ್ಪಡೆಗೊಳಿಸುವ ಐಸಿಸಿಯ ಕೆಲಸವೂ ಸುಲಭವಾಗಲಿದೆ ಎನ್ನಲಾಗಿದೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ಗೆ ಟಿ20 ಕ್ರಿಕೆಟ್ ಈಗಾಗಲೆ ಸೇರ್ಪಡೆಗೊಂಡಿದೆ. ಇದಕ್ಕೆ ಮುನ್ನ 1900ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಏಕೈಕ ಬಾರಿ ಕ್ರಿಕೆಟ್ ಸ್ಪರ್ಧೆ ನಡೆದಿತ್ತು.
ಯೂತ್ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆಗೊಂಡರೆ, ಜಾಗತಿಕವಾಗಿ ತಳಮಟ್ಟದಿಂದ ಕ್ರಿಕೆಟ್ ಅಭಿವೃದ್ಧಿಗೂ ನೆರವಾಗಲಿದೆ. ಪ್ರಮುಖವಾಗಿ ಐಸಿಸಿ ಅಸೋಸಿಯೇಟ್ಸ್ ದೇಶಗಳಲ್ಲಿ ಕ್ರಿಕೆಟ್ ಬೆಳವಣಿಗೆಗೆ ಕ್ರಾಂತಿಕಾರಿ ಬಲ ಲಭಿಸಲಿದೆ ಎಂದು ಐಸಿಸಿ ತಿಳಿಸಿದೆ. ಯೂತ್ ಒಲಿಂಪಿಕ್ಸ್ 15ರಿಂದ 18 ವಯೋಮಿತಿ ಕ್ರೀಡಾಪಟುಗಳಿಗೆ ಸೀಮಿತವಾಗಿದೆ. ಇದಕ್ಕೆ ಕ್ರಿಕೆಟ್ ಸೇರ್ಪಡೆಯಾದರೆ, ಯುವ ಕ್ರಿಕೆಟಿಗರಿಗೆ ಜಾಗತಿಕ ಮಟ್ಟದ ವೇದಿಕೆ ಲಭಿಸಿದಂತಾಗುತ್ತದೆ.
ಕ್ರಿಕೆಟ್ ಬ್ರ್ಯಾಂಡ್ನಿಂದ ಒಲಿಂಪಿಕ್ಸ್ ಬ್ರ್ಯಾಂಡ್ಗೆ ಹೆಚ್ಚಿನ ಪ್ರಚಾರ ಲಭಿಸುತ್ತದೆ ಎಂಬುದನ್ನು ಐಒಸಿಗೆ ಮನದಟ್ಟು ಮಾಡಿಸುವಲ್ಲಿ ಐಸಿಸಿ ಈಗಾಗಲೆ ಯಶಸ್ವಿಯಾಗಿದೆ. ಹೀಗಾಗಿ ಯೂತ್ ಒಲಿಂಪಿಕ್ಸ್ಗೂ ಕ್ರಿಕೆಟ್ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಐಸಿಸಿಗೆ ಹೆಚ್ಚಿನ ಕಷ್ಟ ಎದುರಾಗದು ಎನ್ನಲಾಗಿದೆ. 2022ರಲ್ಲಿ ಸೆನೆಗಲ್ನಲ್ಲಿ ನಿಗದಿಯಾಗಿದ್ದ ಯೂತ್ ಒಲಿಂಪಿಕ್ಸ್ ಕರೊನಾದಿಂದಾಗಿ 2026ಕ್ಕೆ ಮುಂದೂಡಲ್ಪಟ್ಟಿದ್ದು, 2030ರ ಆವೃತ್ತಿಯ ಆತಿಥ್ಯವನ್ನು ಇನ್ನೂ ವಿತರಿಸಲಾಗಿಲ್ಲ.