

ಬೆಂಗಳೂರು: ಮೂರನೇ ಶ್ರೇಯಾಂಕಿತ ಹಾಗೂ ಕನ್ನಡತಿಯರಾದ ಅಶ್ವಿನಿ ಕೆ. ಭಟ್-ಶಿಖಾ ಗೌತಮ್ ಅವರು "ಕೆಬಿಎ ಡೈಮಂಡ್ ಜುಬಿಲಿ ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್' ಬ್ಯಾಡ್ಮಿಂಟನ್ ಟೂರ್ನಿ ಮಹಿಳಾ ಡಬಲ್ಸ್ನಲ್ಲಿ ಫೈನಲ್ಗೇರಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಸ್ಥಳಿಯ ಆಟಗಾರ ಮಿಥುನ್ ಮಂಜುನಾಥ್ ಆಘಾತ ಎದುರಿಸಿದ್ದು, ಸತೀಶ್ ಕುಮಾರ್ ಕರುಣಾಕರನ್ ಮತ್ತು ತಂಕರ ಜ್ಞಾನ ದತ್ತು ತಲಾಸಿಲ ಭಾನುವಾರ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.
75 ವರ್ಷಗಳ ಸಂಭ್ರಮದಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಆತಿಥ್ಯದಲ್ಲಿ 26 ವರ್ಷಗಳ ನಂತರ ಉದ್ಯಾನಗರಿಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಟೂರ್ನಿ ಇದಾಗಿದ್ದು, ಶನಿವಾರ ನಡೆದ ಮಹಿಳಾ ಡಬಲ್ಸ್ ಸೆಮಿಫೈನಲ್ನಲ್ಲಿ ಅಶ್ವಿನಿ&ಶಿಖಾ ಜೋಡಿ 21-13, 18-21, 21-12 ಮೂರು ಗೇಮ್ ಹೋರಾಟದಲ್ಲಿ ಭಾರತದವರೇ ಆದ ನೇಸಾ ಕಾರಿಯಪ್ಪ-ಪ್ರವಂಧಿಕಾ ರಾವನ್ ಎದುರು ಗೆಲುವು ಒಲಿಸಿಕೊಂಡರು. 54 ನಿಮಿಷಗಳ ಸೆಣಸಾಟದಲ್ಲಿ ಮೇಲುಗೈ ಸಾಧಿಸಿದ ಅಶ್ವಿನಿ-ಶಿಖಾ, ಜಪಾನ್ನ ಮಿಯಿ ಸುಡೊ&ಮೈ ತನಬೆ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಇನ್ನೊಂದು ಸೆಮೀಸ್ನಲ್ಲಿ 5ನೇ ಶ್ರೇಯಾಂಕಿತ ಮಿಯಿ ಸುಡೊ-ಮೈ ತನಬೆ 21&8, 21&11 ರಿಂದ ಭಾರತದ ದೀಪಕ್ ರಾಜ್ ಅದಿತಿ& ಪೊನ್ನಮ್ಮ ಬಿ.ವಿ. ವೃದ್ಧಿ ಜೋಡಿಯನ್ನು ಮಣಿಸಿತು.
ಸಿಂಗಲ್ಸ್ನಲ್ಲಿ ಅಗ್ರ ಶ್ರೇಯಾಂಕಿತೆ ಮಾನ್ಸಿ ಸಿಂಗ್ 16-21, 18-21 ರಿಂದ ದೇಶಬಾಂಧವೆ ದಿಯಾಂಕಾ ವಾಲ್ದಿಯಾ ಎದುರು ಸೋತರು. ಇನ್ನೊಂದು ಪಂದ್ಯದಲ್ಲಿ ಅದಿತಿ ರಾವ್ 13-21, 16-21 ರಿಂದ ಥಾಯ್ಲೆಂಡ್ನ ಯಾಟವೀಮನ್ ಕೆಟ್ಕಿಲಿಯೆಂಗ್ ಎದುರು ಪರಾಭವಗೊಂಡರು.
ಮಿಥುನ್ಗೆ ನಿರಾಸೆ, ಪ್ರತಿಕ್ ಪ್ರಶಸ್ತಿ ಸನಿಹ
ಮಾಜಿ ರಾಷ್ಟ್ರೀಯ ಚಾಂಪಿಯನ್ ಮಿಥುನ್ ಮಂಜುನಾಥ್ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಭಾರತದವರೇ ಆದ ಸತೀಶ್ ಕುಮಾರ್ ಕರುಣಾಕರನ್ 17-21, 22-20, 20-22 ರಿಂದ ಮೂರು ಗೇಮ್ಗಳ ಕಠಿಣ ಹೋರಾಟದಲ್ಲಿ ಸೋಲು ಅನುಭವಿಸಿದರು. ತಂಕರ ಜ್ಞಾನ ದತ್ತು ತಲಾಸಿಲ 23-21, 21-16 ರಿಂದ ನಾಲ್ಕನೇ ಶ್ರೇಯಾಂಕಿತ ತುಷಾರ್ ಸುವೀರ್ ಎದುರು ಗೆದ್ದು ಫೈನಲ್ಗೇರಿದರು. ಡಬಲ್ಸ್ನಲ್ಲಿ ಕರ್ನಾಟಕದ ಕೆ. ಸಾಯಿ ಪ್ರತಿಕ್-ಆರ್. ರೆತಿನಸಬಾಪತಿ ಜೋಡಿ 21&18, 11&21, 26&24 ಮೂರು ಗೇಮ್ಗಳ ನಿಕಟ ಪೈಪೋಟಿಯಲ್ಲಿ ಥಾಯ್ಲೆಂಡ್ನ ರಣ್ಯು ಕಾವೋಸಮಾಂಗ್-ಕಿಟ್ಟಿನುಪಾಂಗ್ ಕೆಡ್ರೆನ್ ಜೋಡಿಯನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿತು. ಮಿಶ್ರ ಡಬಲ್ಸ್ನಲ್ಲಿ ಲಾಲ್ರಾಮ್ಸಂಗ-ಏಂಜೆಲ್ ಪುನೇರಾ 21-11, 21-9 ರಿಂದ ದೇಶಬಾಂಧವರಾದ ವಿರಾಜ್ ಕುವಲೆ&ಋತುಪರ್ಣಾ ಪಾಂಡ ಎದುರು ಜಯಿಸಿದರು.