

ಬೆಂಗಳೂರು: ಕರ್ನಾಟಕದ ಸಾಯಿ ಪ್ರತಿಕ್ ಕೆ. ತಮಿಳುನಾಡಿನ ರೂಬನ್ ಕುಮಾರ್ ರೇಥಿನಸಬಾಪತಿ ಜತೆಗೂಡಿ ಕೆಬಿಎ "ಡೈಮಂಡ್ ಜುಬಿಲಿ ಇಂಡಿಯಾ ಇಂಟರ್ನ್ಯಾಷನಲ್' ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಮಹಿಳಾ ಡಬಲ್ಸ್ನಲ್ಲಿ ಕನ್ನಡತಿಯರಾದ ಅಶ್ವಿನಿ ಕೆ. ಭಟ್-ಶಿಖಾ ಗೌತಮ್ ರನ್ನರ್ ಅಪ್ಗೆ ಸಮಾಧಾನ ಕಂಡರು. ಉದಯೋನ್ಮುಖ ತಾರೆ ಸತೀಶ್ ಕುಮಾರ್ ಕರುಣಾಕರನ್ ಹಾಗೂ ಥಾಯ್ಲೆಂಡ್ನ ಯಾಟವೀಮನ್ ಕೆಟ್ಕಿಲಿಯೆಂಗ್ ಕ್ರಮವಾಗಿ ಪುರುಷರ-ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ವಜ್ರ ಮಹೋತ್ಸವ ಸಂಭ್ರಮದಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಆವರಣದಲ್ಲಿ ಭಾನುವಾರ ಮುಕ್ತಾಯಗೊಂಡ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಐದನೇ ಶ್ರೇಯಾಂಕಿತ ಸಾಯಿ ಪ್ರತಿಕ್-ರೂಬನ್ ಜೋಡಿ 21-15, 21-19 ಗೇಮ್ಗಳಿಂದ ಮಲೇಷ್ಯಾದ ಲೌ ಯಿ ಶೆಂಗ್&ಲೀ ಯಿ ಬೊ ಜೋಡಿಯ ವಿರುದ್ಧ 31 ನಿಮಿಷಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಂಡಿತು. ಸಿಂಗಲ್ಸ್ನಲ್ಲಿ ಸತೀಶ್ ಕುಮಾರ್ 21-9, 23-21 ರಿಂದ ದೇಶಬಾಂಧವ ಟಂಕರ ಜ್ಞಾನದತ್ತು ತಲಸಿಲಾರನ್ನು ಮಣಿಸಿ ಚಾಂಪಿಯನ್ ಎನಿಸಿದರು.
ಶಿಖಾ-ಅಶ್ವಿನಿ ರನ್ನರ್ ಅಪ್
ಮಹಿಳಾ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಮೂರನೇ ಶ್ರೇಯಾಂಕಿತ ಅಶ್ವಿನಿ-ಶಿಖಾ ಜೋಡಿ 13-21, 21-13, 19-21ರಿಂದ ಮೂರು ಗೇಮ್ಗಳ ಹೋರಾಟದಲ್ಲಿ ಜಪಾನ್ನ ಮೇಯ್ ಸುಡೋ-ಮೈ ತಾನಾಬೆ ಎದುರು ಪರಾಭವಗೊಂಡಿತು. 57 ನಿಮಿಷಗಳ ಕಾದಾಟದಲ್ಲಿ ಮೊದಲ ಗೇಮ್ ಹಿನ್ನಡೆಯ ನಡುವೆಯೂ 2ನೇ ಗೇಮ್ನಲ್ಲಿ ಮೇಲುಗೈ ಸಾಧಿಸಿದ ಅಶ್ವಿನಿ-ಶಿಖಾ ಪ್ರಶಸ್ತಿ ನಿರೀಕ್ಷೆ ಮೂಡಿಸಿದರು. ಆದರೆ ನಿರ್ಣಾಯಕ ಗೇಮ್ನಲ್ಲಿ ನಿಕಟ ಪೈಪೋಟಿಯ ನಡುವೆಯೂ ಜಪಾನ್ ಜೋಡಿ ಎದುರು ನಿರಾಸೆ ಅನುಭವಿಸಿದರು. ಸಿಂಗಲ್ಸ್ನಲ್ಲಿ ದಿಯಾಂಕಾ ವಾಲ್ಡಿಯಾ 11-21, 10-21 ರಿಂದ ಯಾಟವೀಮನ್ ಕೆಟ್ಕಿಲಿಯೆಂಗ್ ವಿರುದ್ಧ ಸೋತು, ರನ್ನರ್ ಅಪ್ಗೆ ತೃಪ್ತಿಪಟ್ಟರು. ಮಿಶ್ರ ಡಬಲ್ಸ್ನಲ್ಲಿ ರಷ್ಯಾದ ರೋಡಿಯನ್ ಅಲಿಮೋವ್-ಅಲೀನಾ ಡೇವ್ಲೆಟೋವಾ ಜೋಡಿ ಭಾರತದ ಲಾಲ್ರಾಮಸಂಗ-ಏಂಜೆಲ್ ಪುಣೇರಾ ಜೋಡಿಯನ್ನು ಮಣಿಸಿ ಪ್ರಶಸ್ತಿ ಒಲಿಸಿಕೊಂಡಿತು.