

ಮ್ಯಾಂಚೆಸ್ಟರ್: ಆಂಡರ್ಸನ್-ತೆಂಡುಲ್ಕರ್ ಟ್ರೋಫಿ ಒಲಿಸಿಕೊಳ್ಳುವ ಆಸೆ ಜೀವಂತವಿಡಲು ಭಾರತ ತಂಡ ಅತಿಥೇಯ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಜತೆಗೆ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇದುವರೆಗೆ ಒಂದೂ ಟೆಸ್ಟ್ ಪಂದ್ಯವನ್ನು ಗೆಲ್ಲದ ಹಿನ್ನಡೆಯೂ ಇದೆ. ಇದೆಲ್ಲದರ ನಡುವೆ ತಂಡದ ಕೆಲ ಆಟಗಾರರ ಗಾಯದ ಸಮಸ್ಯೆಯಿಂದಾಗಿ, ಬುಧವಾರದಿಂದ ನಡೆಯಲಿರುವ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗವನ್ನು ಆರಿಸುವುದೇ ದೊಡ್ಡ ಸವಾಲೆನಿಸಿದೆ.
ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದರೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ 4ನೇ ಟೆಸ್ಟ್ಗೆ ಅಲಭ್ಯರಾಗಿದ್ದಾರೆ. ಇನ್ನೋರ್ವ ವೇಗಿ ಆಕಾಶ್ದೀಪ್ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಇದರೊಂದಿಗೆ ರಿಷಭ್ ಪಂತ್ ವಿಕೆಟ್ ಕೀಪಿಂಗ್ ನಿರ್ವಹಿಸಲು ಫಿಟ್ ಆಗುವುದು ಅನುಮಾನವಿದೆ. ಇದರೊಂದಿಗೆ ಮ್ಯಾಂಚೆಸ್ಟರ್ ಪಿಚ್ನಲ್ಲಿ ಯಾವ ಬೌಲಿಂಗ್ ಕಾಂಬಿನೇಷನ್ ಕಣಕ್ಕಿಳಿಸಬೇಕು ಎಂಬ ಗೊಂದಲವೂ ಭಾರತವನ್ನು ಕಾಡುತ್ತಿದೆ. ನಾಲ್ವರು ವೇಗಿಗಳೊಂದಿಗೆ ಓರ್ವ ಸ್ಪಿನ್ನರ್ ಸಾಕೇ ಅಥವಾ ಇಬ್ಬರು ವೇಗಿಗಳೊಂದಿಗೆ ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಬೇಕೇ ಎಂಬ ಬಗ್ಗೆ ಭಾರತ ತಂಡ ಚಿಂತನೆಯಲ್ಲಿದೆ.
ನಾಯಕ ಶುಭಮಾನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅಂತಿಮವಾಗಿ ಯಾವ ತಂಡ ಸಂಯೋಜನೆಯನ್ನು ಕಣಕ್ಕಿಳಿಸಬಹುದು ಮತ್ತು ಅದು ಗೆಲ್ಲುವ ಕಾಂಬಿನೇಷನ್ ಆಗಬಹುದೇ ಎಂಬುದನ್ನು ಕಾದುನೋಡಬೇಕಿದೆ.
ನಾಲ್ವರು ವೇಗಿಗಳು?
ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಈಗ ಮ್ಯಾಂಚೆಸ್ಟರ್ ಟೆಸ್ಟ್ನಲ್ಲೂ ಆಡುವುದು ಅನಿವಾರ್ಯವೆನಿಸಿದೆ. ಆಕಾಶ್ದೀಪ್, ಅರ್ಷದೀಪ್ ಗಾಯದ ಸಮಸ್ಯೆ ಮತ್ತು ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ರೆಡ್ಡಿ ಗೈರಿನಲ್ಲಿ ಈಗ ಬುಮ್ರಾಗೆ ವಿಶ್ರಾಂತಿ ನೀಡುವುದು ಸಾಧ್ಯವಿಲ್ಲವೆನಿಸಿದೆ. ಅಲ್ಲದೆ ಮ್ಯಾಂಚೆಸ್ಟರ್ನಲ್ಲಿ ನಾಲ್ವರು ವೇಗಿಗಳನ್ನು ಆಡಿಸುವ ಬಗ್ಗೆಯೂ ಭಾರತ ತಂಡ ಚಿಂತನೆ ನಡೆಸಿದೆ. ಬುಮ್ರಾ, ಸಿರಾಜ್ ಜತೆಗೆ 24 ವರ್ಷದ ಅಂಶುಲ್ ಕಾಂಬೋಜ್ 3ನೇ ವೇಗಿಯಾಗಿ ಟೆಸ್ಟ್ ಪದಾರ್ಪಣೆ ಮಾಡುವುದು ಈಗಾಗಲೆ ಬಹುತೇಕ ಖಚಿತವೆನಿಸಿದೆ. ಇದರೊಂದಿಗೆ 4ನೇ ವೇಗಿಯಾಗಿ ಶಾರ್ದೂಲ್ ಠಾಕೂರ್ರನ್ನು ಆಡಿಸಬೇಕೇ ಎಂಬ ಚಿಂತನೆಯೂ ಇದೆ. ಇದರಿಂದ ಬ್ಯಾಟಿಂಗ್ ವಿಭಾಗಕ್ಕೂ ಸ್ವಲ್ಪ ಬಲ ಸಿಗಲಿದೆ. ಆಕಾಶ್ದೀಪ್ ಫಿಟ್ ಆದರೆ ಅವರೂ 4ನೇ ವೇಗಿಯಾಗಿ ಆಡಬಹುದು.
ಕುಲದೀಪ್ ಕೊನೆಗೂ ಕಣಕ್ಕೆ?
ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಕೊನೆಗೂ ಸರಣಿಯಲ್ಲಿ ಪಂದ್ಯವೊಂದನ್ನು ಆಡುವ ಸಾಧ್ಯತೆ ಹರಡಿದೆ. ಓಲ್ಡ್ ಟ್ರಾರ್ಡ್ ಮೈದಾನದ ಫ್ಲ್ಯಾಟ್ ಪಿಚ್ ಭಾರತ ತಂಡದ ಈ ಚಿಂತನೆಗೆ ಕಾರಣವಾಗಿದೆ. ಇಂಥ ಪಿಚ್ನಲ್ಲಿ ಕುಲದೀಪ್ ಅವರ ರಿಸ್ಟ್ ಸ್ಪಿನ್ ಭಾರತಕ್ಕೆ ಹೆಚ್ಚಿನ ಲಾಭ ತಂದುಕೊಡುವ ನಿರೀಕ್ಷೆ ಇದೆ. ಅಲ್ಲದೆ ಮ್ಯಾಂಚೆಸ್ಟರ್ ಮೈದಾನ ಸ್ಪಿನ್ನರ್ಗಳಿಗೆ ಹೆಚ್ಚಿನ ಸಹಕಾರ ನೀಡಿದ ಇತಿಹಾಸವನ್ನೂ ಹೊಂದಿದೆ.
ದಿಗ್ಗಜ ಶೇನ್ ವಾರ್ನ್ ಅವರ "ಶತಮಾನದ ಎಸೆತ' ಇಲ್ಲೇ ಬಂದಿತ್ತು. ಇಂಗ್ಲೆಂಡ್ ಸ್ಪಿನ್ ದಿಗ್ಗಜ ಜಿಮ್ ಲೇಕರ್ ಇಲ್ಲೇ ಇನಿಂಗ್ಸ್ ಒಂದರ ಎಲ್ಲ 10 ವಿಕೆಟ್ ಕಬಳಿಸಿದ್ದರು. ವಿಂಡೀಸ್ನ ಲ್ಯಾನ್ಸ್ ಗಿಬ್ಸ್ ಮತ್ತು ಇಂಗ್ಲೆಂಡ್ನ ಮಾಂಟಿ ಪಣೇಸರ್ ಕೂಡ ಇಲ್ಲಿ ಹೆಚ್ಚಿನ ಯಶ ಕಂಡಿದ್ದಾರೆ. ಅಲ್ಲದೆ ಕಳೆದ ವರ್ಷ ಇಂಗ್ಲೆಂಡ್ ತಂಡ ಭಾರತ ಪ್ರವಾಸಕ್ಕೆ ಬಂದಿದ್ದಾಗ ಕುಲದೀಪ್ ಹೆಚ್ಚಾಗಿ ಕಾಡಿದ್ದರು.
ಹೀಗಾಗಿ ಕುಲದೀಪ್, ವಾಷಿಂಗ್ಟನ್ ಸುಂದರ್ ಬದಲಿಗೆ ಅಥವಾ 3ನೇ ಸ್ಪಿನ್ನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಭಾರತ ತಂಡ ಸ್ಪಿನ್ "ಕ್ವಾರ್ಟೆಟ್ ಯುಗ'ದ (ಬಿಷನ್ ಸಿಂಗ್ ಬೇಡಿ, ಎರಪಳ್ಳಿ ಪ್ರಸನ್ನ, ಬಿಎಸ್ ಚಂದ್ರಶೇಖರ್, ಎಸ್. ವೆಂಕಟರಾವನ್ ನಾಲ್ವರೂ ಸ್ಪಿನ್ನರ್ಗಳು ಜತೆಯಾಗಿ ಆಡುತ್ತಿದ್ದ ಕಾಲ) ನಂತರ ಎಂದೂ ಎರಡಕ್ಕಿಂತ ಇಬ್ಬರು ಸ್ಪಿನ್ನರ್ಗಳನ್ನು ಆಡಿಸಿಲ್ಲ. ಈ ಬಾರಿ ಆ ಸಂಪ್ರದಾಯವನ್ನು ಮುರಿಯುವ ಸಾಧ್ಯತೆಯೂ ಹೆಚ್ಚಿದೆ.
ಕರುಣ್ಗೆ ಕೊನೇ ಚಾನ್ಸ್
ಎಂಟು ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಇದುವರೆಗೆ ಆಡಿರುವ 6 ಇನಿಂಗ್ಸ್ಗಳಲ್ಲೂ ಎರಡನೇ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. 21.83ರ ಸರಾಸರಿಯಲ್ಲಿ 131 ರನ್ ಮಾತ್ರ ಗಳಿಸಿದ್ದಾರೆ ಮತ್ತು 40 ರನ್ ಗಳಿಸಿರುವುದೇ ಗರಿಷ್ಠವೆನಿಸಿದೆ. ಮ್ಯಾಂಚೆಸ್ಟರ್ ಟೆಸ್ಟ್ನಿಂದ ಅವರನ್ನು ಕೈಬಿಡಬೇಕೆಂದು ಈಗಾಗಲೆ ಕೆಲ ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ. ಇದರ ನಡುವೆಯೂ ಟೀಮ್ ಮ್ಯಾನೇಜ್ಮೆಂಟ್, ಮ್ಯಾಂಚೆಸ್ಟರ್ನಲ್ಲಿ ಅವರಿಗೆ ಕೊನೆಯ ಅವಕಾಶವೊಂದನ್ನು ನೀಡುವ ಸಾಧ್ಯತೆ ಹೆಚ್ಚಾಗಿದೆ.
ಪಂತ್ ಬ್ಯಾಟರ್ ಮಾತ್ರ!
ಲಾರ್ಡ್ಸ್ ಟೆಸ್ಟ್ನ ಮೊದಲ ದಿನವೇ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದ ರಿಷಭ್ ಪಂತ್ ನಂತರ ವಿಕೆಟ್ ಕೀಪಿಂಗ್ ನಿರ್ವಹಿಸಿರಲಿಲ್ಲ. ಆದರೆ ಎರಡೂ ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಕೀಪಿಂಗ್ ನಿರ್ವಹಿಸಲು ಪಂತ್ ಫಿಟ್ ಆಗದಿದ್ದರೆ ಕೇವಲ ಬ್ಯಾಟರ್ ಆಗಿ ಆಡುವ ಸಾಧ್ಯತೆ ಹೆಚ್ಚಿದೆ. ಆಗ ಧ್ರುವ ಜುರೆಲ್ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಸ್ಥಾನವನ್ನು ಜುರೆಲ್ ತುಂಬುವ ನಿರೀೆ ಇದೆ. ಮ್ಯಾಂಚೆಸ್ಟರ್ನಲ್ಲಿ ಪಂತ್ ಕೀಪಿಂಗ್ ಅಭ್ಯಾಸ ಮಾಡಿದ್ದರೂ, ಅವರ ಫಿಟ್ನೆಸ್ ಬಗ್ಗೆ ಇನ್ನೂ ಅನುಮಾನವಿದೆ.
ನಿತೀಶ್ ರೆಡ್ಡಿ ಪ್ರವಾಸದಿಂದ ಹೊರಕ್ಕೆ
ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮೊಣಕಾಲು ಗಾಯದಿಂದಾಗಿ ಇಂಗ್ಲೆಂಡ್ ಪ್ರವಾಸದಿಂದ ಸಂಪೂರ್ಣವಾಗಿ ಹೊರಬಿದ್ದಿರುವುದನ್ನು ಬಿಸಿಸಿಐ ಸೋಮವಾರ ಅಧಿಕೃತವಾಗಿ ಪ್ರಕಟಿಸಿದೆ. ಜತೆಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಗಾಯದಿಂದಾಗಿ 4ನೇ ಟೆಸ್ಟ್ಗೆ ಅಲಭ್ಯರಾಗಿರುವುದನ್ನು ಮತ್ತು ಹರಿಯಾಣದ ವೇಗಿ ಅಂಶುಲ್ ಕಾಂಬೋಜ್ ಭಾರತ ತಂಡಕ್ಕೆ ಸೇರ್ಪಡೆಯಾಗಿರುವುದನ್ನೂ ಬಿಸಿಸಿಐ ಘೋಷಿಸಿದೆ. ಭಾನುವಾರ ಜಿಮ್ನಲ್ಲಿ ವ್ಯಾಯಾಮ ನಡೆಸುತ್ತಿದ್ದ ವೇಳೆ ನಿತೀಶ್ ರೆಡ್ಡಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು.
ಬಳಿಕ ಸ್ಕಾನ್ ಮಾಡಿ ನೋಡಿದಾಗ ಅವರ ಅಸ್ಥಿರಜ್ಜುಗೆ ಹಾನಿಯಾಗಿರುವುದು ಖಚಿತಗೊಂಡಿದೆ. ಇದರಿಂದಾಗಿ ಅವರು ಕೂಡಲೆ ತವರಿಗೆ ಮರಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಸರಣಿಯಲ್ಲಿ ಇದುವರೆಗೆ ಒಂದೂ ಟೆಸ್ಟ್ ಆಡದ ಅರ್ಷದೀಪ್ ನೆಟ್ಸ್ನಲ್ಲಿ ಚೆಂಡನ್ನು ತಡೆಯುವ ವೇಳೆ ಕೈಬೆರಳು ಗಾಯಕ್ಕೊಳಗಾಗಿದ್ದು, ಅವರ ಚೇತರಿಕೆಗೆ ಕನಿಷ್ಠ 10 ದಿನ ಬೇಕಾಗಿದೆ. ಇದರಿಂದ ಅವರು ಸರಣಿಯ ಕೊನೇ ಟೆಸ್ಟ್ಗೂ ಲಭ್ಯರಾಗುವ ಬಗ್ಗೆ ಅನುಮಾನವಿದೆ.