ದ್ವಿಶತಕ ಸಿಡಿಸಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗನ ಪುತ್ರ: ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಸಿಎಬಿ ಗೌರವ

New Project (3)
Published on

ಬೆಂಗಳೂರು: ಮಾಜಿ ಕ್ರಿಕೆಟಿಗ, ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ 19 ವಯೋಮಿತಿಯ ಕೊಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ದೆಹಲಿ ಪರ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಶಿಲ್ಲಾಂಗ್‌ನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಆರಂಭಿಕನಾಗಿ ಕಣಕ್ಕಿಳಿದ 17 ವರ್ಷದ ಆರ್ಯವೀರ್ ತಾನೆದುರಿಸಿದ 229 ಎಸೆತಗಳಲ್ಲಿ 34 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 200 ರನ್‌ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ವಿಕೆಟ್‌ಗೆ ಆರ್ಯವೀರ್ ಹಾಗೂ ಅರ್ನವ್ ಬುಗ್ಗ ನಡೆಸಿದ 180 ರನ್‌ಗಳ ಜತೆಯಾಟ ನೆರವಿನಿಂದ ದೆಹಲಿ ತಂಡ 2ನೇ ದಿನದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 468 ರನ್ ಕಲೆಹಾಕಿದ್ದು, 208 ರನ್‌ಗಳ ಮುನ್ನಡೆಯಲ್ಲಿದೆ. ಮೇಘಾಲಯ ಮೊದಲ ಇನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್ ಆಗಿದೆ.

ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿಗೆ ಸಿಎಬಿ ಗೌರವ: ಮಾಜಿ ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರು ಭಾರತೀಯ ಕ್ರಿಕೆಟ್‌ಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ‘ಬಿ ಬ್ಲಾಕ್ ’ ಸ್ಟಾೃಂಡ್‌ಗೆ ಅವರ ಹೆಸರಿಡಲು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ತೀರ್ಮಾನಿಸಿದೆ.

ಬಿ ಬ್ಲಾಕ್ ಸ್ಟಾೃಂಡ್‌ಗೆ ಜೂಲನ್ ಗೋಸ್ವಾಮಿ ಅವರ ಹೆಸರಿಡುವ ಪ್ರಸ್ತಾವನೆಯನ್ನು ಸಿಎಬಿಯ ಅಪೆಕ್ಸ್ ಕೌನ್ಸಿಲ್‌ನ ಮುಂದೆ ಪ್ರಸ್ತಾಪಿಸಿ ಒಪ್ಪಿಗೆ ಪಡೆಯಲಾಗುವುದು. ಬಳಿಕ ಮುಂದಿನ ವರ್ಷ ಜನವರಿ 22 ರಂದು ಈಡನ್ ಗಾರ್ಡನ್ಸ್‌ನಲ್ಲಿ ನಿಗದಿಯಾಗಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಪಂದ್ಯದ ವೇಳೆ ಅಧಿಕೃತವಾಗಿ ಸ್ಟಾೃಂಡ್ ಹೆಸರನ್ನು ಅನಾವರಣಗೊಳಿಸಲಾಗುವುದು.

‘ನಾನು ಇದರ ಬಗ್ಗೆ ಎಂದಿಗೂ ಊಹಿಸಿರಲಿಲ್ಲ. ನನ್ನ ಹೆಸರಿನ ಸ್ಟಾೃಂಡ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸುವದನ್ನು ಇಷ್ಟಪಡುತ್ತೇನೆ. ಯಾವುದೇ ಕ್ರಿಕೆಟರ್‌ಗೆ ನಮ್ಮ ಜಿಲ್ಲೆ, ರಾಜ್ಯ ಹಾಗೂ ದೇಶವನ್ನುಇ ಪ್ರತಿನಿಧಿಸುವುದು ಬಹುದೊಡ್ಡ ಕನಸು. ಆದರೆ ಈ ರೀತಿಯ ಗೌರವ ನಿಜಕ್ಕೂ ಸ್ಮರಣೀಯ’ಎಂದು ಗೋಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಜೂಲನೆ ಗೋಸ್ವಾಮಿ ಭಾರತದ ಪರ ಆಡಿರುವ 204 ಏಕದಿನದಲ್ಲಿ 255 ವಿಕೆಟ್ ಹಾಗೂ 12 ಟೆಸ್ಟ್‌ನಲ್ಲಿ 44 ವಿಕೆಟ್ ಕಬಳಿಸಿದ್ದಾರೆ. ಜತೆಗೆ 68 ಟಿ20 56 ವಿಕೆಟ್ ಪಡೆದಿರುವ ಸಾಧನೆ ಮಾಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಮಹಿಳಾ ಬೌಲರ್ ಎಂಬ ದಾಖಲೆಯೂ ಹೊಂದಿದ್ದಾರೆ.

ಈಡನ್ ಗಾರ್ಡನ್ಸ್‌ನಲ್ಲಿ ಸ್ಟಾೃಂಡ್‌ಗಳಿಗೆ ಈಗಾಗಲೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ, ಪಂಕಜ್ ರಾಯ್ ಹಾಗೂ ಜಗಮೋಹನ್ ದಾಲ್ಮಿಯಾ ಅವರ ಹೆಸರನ್ನು ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net