ಇಂದು ಭಾರತ-ಆಸ್ಟ್ರೇಲಿಯಾ 2ನೇ ಚುಟುಕು ಕದನ, ಸರಣಿ ಗೆಲುವಿನ ಕನಸಿನಲ್ಲಿ ವಿರಾಟ್ ಪಡೆ

india virat and aussies finch for web
Published on

ಸಿಡ್ನಿ: ಕನ್‌ಕಷನ್ ಕಮಾಲ್‌ನಿಂದ ಚುಟುಕು ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಭಾನುವಾರ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಕ್ಯಾನ್‌ಬೆರಾದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕನ್‌ಕಷನ್ ಲಾಭ ಪಡೆದಿದ್ದ ಭಾರತ ತಂಡ 11 ರನ್‌ಗಳಿಂದ ಜಯ ದಾಖಲಿಸಿತ್ತು. ಇದರೊಂದಿಗೆ ಏಕದಿನ ಸರಣಿ ಸೋಲಿಗೆ ಪ್ರತಿಕಾರ ತೀರಿಸುವ ನಿಟ್ಟಿನಲ್ಲಿ ಭಾರತ ತಂಡ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ, ಮೊದಲ ಪಂದ್ಯದ ವೇಳೆ ತಲೆಗೆ ಪೆಟ್ಟು ತಿಂದಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಏಕದಿನ ಕ್ರಿಕೆಟ್ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಸಿಡ್ನಿ ಮೈದಾನದಲ್ಲೇ ಕಡೇ ಎರಡು ಟಿ20 ಪಂದ್ಯಗಳು ನಡೆಯಲಿವೆ. ಇದರಿಂದ ಆತಿಥೇಯ ತಂಡಕ್ಕೆ ಸಿಡ್ನಿ ಕ್ರಿಕೆಟ್ ಮೈದಾನ ೇವರಿಟ್ ಕೂಡ ಆಗಿದ್ದು ಭಾರತದ ಪಾಲಿಗೆ ಸವಾಲು ಕೂಡ ಎದುರಾಗಿದೆ. ಮುಂದಿನ ವಾರ ಆರಂಭಗೊಳ್ಳಲಿರುವ 4 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಮಹತ್ವ ಪಡೆದಿದೆ.

* ಆತ್ಮವಿಶ್ವಾಸದಲ್ಲಿ ವಿರಾಟ್ ಕೊಹ್ಲಿ ಬಳಗ 

ಸ್ಫೋಟಕ ಬ್ಯಾಟಿಂಗ್ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಿದ್ದ ರವೀಂದ್ರ ಜಡೇಜಾ ಅಲಭ್ಯತೆಯಿಂದ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. ಜಡೇಜಾ, ಮೊದಲ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ 44 ರನ್ ಸಿಡಿಸಿದ್ದರು. ಇದರಿಂದಾಗಿ ನಾಯಕ ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಇತರ ಆಟಗಾರರಿಂದ ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಪ್ರವಾಸದಲ್ಲಿ ಸಿಕ್ಕ ಮೊದಲ ಅವಕಾಶವನ್ನು ಕೈಚೆಲ್ಲಿರುವ ಕರ್ನಾಟಕದ ಮನೀಷ್ ಪಾಂಡೆ, ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಆವರ್ತನ ಪದ್ದತಿ ಮುಂದುವರಿದರೆ ಮೊಹಮದ್ ಶಮಿ ಬದಲಿಗೆ ಜಸ್‌ಪ್ರೀತ್ ಬುಮ್ರಾ ಕಣಕ್ಕಿಳಿಯಬಹುದು. ಸಿಡ್ನಿ ಮೈದಾನದಲ್ಲಿ ಏಕದಿನ ಸರಣಿಯಲ್ಲಿ ನಿರಾಸೆ ಕಂಡಿರುವ ಭಾರತ, ಅದೇ ನೆಲದಲ್ಲಿ ಪುಟಿದೇಳಬೇಕಿದೆ. ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಟಿ.ನಟರಾಜನ್, ದೀಪಕ್ ಚಹರ್ ಜೋಡಿ ಮತ್ತೊಮ್ಮೆ ಚೆಂಡು ಹಂಚಿಕೊಳ್ಳಲಿದೆ.

* ಆಸೀಸ್ ತಂಡಕ್ಕೂ ಗಾಯದ ಸಮಸ್ಯೆ

ಸರಣಿಯಲ್ಲಿ 0-1 ರಿಂದ ಹಿನ್ನಡೆ ಕಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ತನ್ನ ಹೋರಾಟವನ್ನು ಜೀವಂತವಾಗಿರಿಸಿಕೊಳ್ಳುವ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದಿದೆ. ಆರಂಭಿಕ ಹಂತದಲ್ಲಿ ಡೇವಿಡ್ ವಾರ್ನರ್ ಅಲಭ್ಯತೆ ಕೂಡ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೀಗ ನಾಯಕ ಆರನ್ ಫಿಂಚ್ ಕೂಡ ಕಣಕ್ಕಿಳಿಯುವುದು ಅನುಮಾನವಾಗಿದೆ. ನಥಾನ್ ಲ್ಯಾನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಮಿಚೆಲ್ ಸ್ವಿಪ್‌ಮನ್ ಬದಲಿಗೆ ಕಣಕ್ಕಿಳಿಯಬಲಿದ್ದಾರೆ. ಲ್ಯಾನ್ ಅವರನ್ನು ಪವರ್ ಪ್ಲೇ ಹಂತದಲ್ಲಿ ಉಪಯೋಗಿಸಿಕೊಳ್ಳುವ ಸಾಧ್ಯತೆಗಳಿವೆ.

ಟೀಮ್ ನ್ಯೂಸ್:

ಭಾರತ:

ಗಾಯದ ಸಮಸ್ಯೆಯಿಂದ ಹೊರಬಿದ್ದಿರುವ ಜಡೇಜಾ ಬದಲಿಗೆ ಯಜುವೇಂದ್ರ ಚಾಹಲ್ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಮನೀಷ್ ಪಾಂಡೆ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಿಸಿಕೊಂಡಿಲ್ಲ. ಇವರ ಬದಲಿಗೆ ಶ್ರೇಯಸ್ ಅಯ್ಯರ್ ಅವಕಾಶ ಪಡೆಯಬಹುದು. ಆವರ್ತನ ಪದ್ದತಿ ಅಳವಡಿಸಿಕೊಂಡರೆ ಮೊಹಮದ್ ಶಮಿ ಬದಲಿಗೆ ಜಸ್‌ಪ್ರೀತ್ ಬುಮ್ರಾ ಅವಕಾಶ ಪಡೆಯಬಹುದು.

ಸಂಭಾವ್ಯ ತಂಡ: ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ಮನೀಷ್ ಪಾಂಡೆ/ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ದೀಪರ್ ಚಹರ್, ಟಿ.ನಟರಾಜನ್, ಜಸ್‌ಪ್ರೀತ್ ಬುಮ್ರಾ/ಮೊಹಮದ್ ಶಮಿ, ಯಜುವೇಂದ್ರ ಚಾಹಲ್.

-------

ಆಸ್ಟ್ರೇಲಿಯಾ: ಆರನ್ ಫಿಂಚ್ ಕಣಕ್ಕಿಳಿಯುವುದು ಅನುಮಾನವಾಗಿದ್ದು, ಇವರ ಬದಲಿಗೆ ಮ್ಯಾಥ್ಯೂ ವೇಡ್ ಸಾರಥ್ಯ ವಹಿಸಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದಾಗಿ ವೇಡ್ ಹಾಗೂ ಡಾರ್ಸಿ ಶಾರ್ಟ್ ಇನಿಂಗ್ಸ್ ಆರಂಭಿಸುವರು. ಅಲೆಕ್ಸ್ ಕ್ಯಾರಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಥನ್ ಲ್ಯಾನ್ ಕೂಡ ಆಡಂ ಜಂಪಾ ಜತೆ ಚೆಂಡು ಹಂಚಿಕೊಳ್ಳುವ ಸಾಧ್ಯತೆಗಳಿದ್ದು, ಸತತವಾಗಿ ಆಡುತ್ತಿರುವ ಜೋಸ್ ಹ್ಯಾಸಲ್‌ವುಡ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ.

ಸಂಭಾವ್ಯ ತಂಡ: ಆರನ್ ಫಿಂಚ್/ಡಾರ್ಸಿ ಶಾರ್ಟ್, ಮ್ಯಾಥ್ಯೂ ವೇಡ್, ಸ್ಟೀವನ್ ಸ್ಮಿತ್, ಗ್ಲೇನ್ ಮ್ಯಾಕ್ಸ್‌ವೆಲ್, ಮೋಯ್ಸಸ್ ಹೆನ್ರಿಕ್ಸ್, ಅಲೆಕ್ಸ್ ಕ್ಯಾರಿ (ವಿಕೀ), ಸೀನ್ ಅಬೋಟ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವಿಪ್‌ಮನ್ /ನಾಥನ್ ಲ್ಯಾನ್, ಆಡಂ ಜಂಪಾ, ಜೋಸ್ ಹ್ಯಾಸಲ್‌ವುಡ್.

* ಪಿಚ್ ರಿಪೋರ್ಟ್:

ಫ್ಲಾಟ್ ಪಿಚ್ ಇದಾಗಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಸಹಕಾರಿಯಾಗಿದೆ. ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಹರಿದ ರನ್‌ಹೊಳೆಯೇ ಇದಕ್ಕೆ ಸಾಕ್ಷಿ. ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲವಾಗುವ ಸಾಧ್ಯತೆಗಳಿವೆ.

* 10: ಭಾರತ ತಂಡ, ಚುಟುಕು ಕ್ರಿಕೆಟ್‌ನಲ್ಲಿ ಕಳೆದ 10 ಪಂದ್ಯಗಳಲ್ಲಿ ಅಜೇಯ ಸಾಧನೆ ಮಾಡಿದೆ.

* ಎರಡು ವರ್ಷಗಳ ಹಿಂದೆ ಸಿಡ್ನಿ ಮೈದಾನದಲ್ಲಿ ಭಾರತ 165 ರನ್ ಟಾರ್ಗೆಟ್ ಚೇಸ್ ಮಾಡಿತ್ತು.

ಮುಖಾಮುಖಿ: 21, ಭಾರತ : 12, ಆಸ್ಟ್ರೇಲಿಯಾ: 8, ರದ್ದು: 1

ಆಸ್ಟ್ರೇಲಿಯಾದಲ್ಲಿ : 10, ಭಾರತ: 6, ಆಸ್ಟ್ರೇಲಿಯಾ: 3, ರದ್ದು: 1.

ಪಂದ್ಯ ಆರಂಭ: ಮಧ್ಯಾಹ್ನ 1.40ಕ್ಕೆ

ನೇರ ಪ್ರಸಾರ: ಸೋನಿ ಸಿಕ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net