ಎರಡನೇ ಪಂದ್ಯದಲ್ಲಿ ಎಡವಿದ ಭಾರತ; ಬೆಲ್ಜಿಯಂ ಎದುರು ಸೋಲು

Hockey 9 Feb 20
Published on

ಭುವನೇಶ್ವರ: ಆತಿಥೇಯ ಭಾರತ ತಂಡ ಎಫ್​ಐಎಚ್ ಪುರುಷರ ಹಾಕಿ ಪ್ರೊ ಲೀಗ್​ನಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧದ 2ನೇ ಪಂದ್ಯದಲ್ಲಿ 2-3 ಗೋಲುಗಳಿಂದ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ 1-2ರಿಂದ ಗೆಲುವು ದಾಖಲಿಸಿತ್ತು.

ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಉತ್ತಮ ಹೋರಾಟ ಪ್ರದರ್ಶಿಸಿದರೂ ರಕ್ಷಣಾ ವಿಭಾಗದ ಎಡವಟ್ಟಿನಿಂದಾಗಿ ನಿರಾಸೆ ಅನುಭವಿಸಿತು. ಪಂದ್ಯದ 3ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಗೋಲು ಸಿಡಿಸಿ ವಿಶ್ವ ನಂ. 1 ಬೆಲ್ಜಿಯಂ ತಂಡಕ್ಕೆ ಆರಂಭಿಕ ಮುನ್ನಡೆ ನೀಡಿದರು. ಬಳಿಕ ಮ್ಯಾಕ್ಸಿಮ್ ಪ್ಲೆನ್​ವಾಕ್ಸ್ 17 ಮತ್ತು 26ನೇ ನಿಮಿಷದಲ್ಲಿ ಸಿಡಿಸಿದ ಫೀಲ್ಡ್ ಗೋಲು ಭಾರತ ತಂಡ ಪಂದ್ಯಕ್ಕೆ ಮರಳುವ ಅವಕಾಶ ನಿರಾಕರಿಸಿತು. ಭಾರತ ಪರ ವಿವೇಕ್ ಸಾಗರ್ ಪ್ರಸಾದ್ (15ನೇ ನಿಮಿಷ) ಮತ್ತು ಅಮಿತ್ ರೋಹಿದಾಸ್ (17) ಗೋಲು ಬಾರಿಸಿದರು.

‘ನಾವು ಈ 2 ಪಂದ್ಯಗಳಿಂದ ಸಾಕಷ್ಟು ಕಲಿತಿದ್ದೇವೆ. ಉತ್ತಮ ಅವಕಾಶಗಳನ್ನು ಪಡೆದರೂ, ಅದನ್ನು ಬಳಸಿಕೊಳ್ಳಲು ವಿಫಲರಾದೆವು’ ಎಂದು ಭಾರತ ತಂಡದ ನಾಯಕ ಮನ್​ಪ್ರೀತ್ ಸಿಂಗ್ ಪಂದ್ಯದ ಬಳಿಕ ಹೇಳಿದರು.

ಆಡಿದ 4 ಪಂದ್ಯಗಳಿಂದ 8 ಅಂಕ ಕಲೆಹಾಕಿದ ಭಾರತ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಬೆಲ್ಜಿಯಂ ತಂಡ ಆಡಿದ 6 ಪಂದ್ಯಗಳಿಂದ 14 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದೆ. ಟೂರ್ನಿಯ ಮೊದಲ ಚರಣದಲ್ಲಿ ಭಾರತ ತಂಡ ನೆದರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು.

ಭಾರತ ತಂಡ ಟೂರ್ನಿಯ ಮುಂದಿನ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೆಬ್ರವರಿ 21 ಮತ್ತು 22ರಂದು ಭುವನೇಶ್ವರದಲ್ಲೇ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net