

ನಾಗ್ಪುರ: ಭಾರತ ತಂಡ 2023ರ ಏಕದಿನ ವಿಶ್ವಕಪ್ ೈನಲ್ ಬಳಿಕ ಮೊದಲ ಬಾರಿಗೆ ತವರಿನಲ್ಲಿ ಏಕದಿನ ಸರಣಿ ಆಡಲು ಸಜ್ಜಾಗಿದೆ. ವಿಸಿಎ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಗುರುವಾರ ನಡೆಯಲಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತಂಡದ ಸಂಯೋಜನೆ ಮತ್ತು ಪೂರ್ವಸಿದ್ಧತೆ ದೃಷ್ಟಿಯಿಂದ ರೋಹಿತ್ ಶರ್ಮ ಪಡೆಗೆ ಈ ಸರಣಿ ಮಹತ್ವದ್ದಾಗಿದೆ.
ಟೀಮ್ ನ್ಯೂಸ್
ಭಾರತ: ರೋಹಿತ್ ಜತೆಯಾಗಿ ಉಪನಾಯಕ ಶುಭಮಾನ್ ಗಿಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಜೈಸ್ವಾಲ್ ಪದಾರ್ಪಣೆ ವಿಳಂಬವಾಗುವ ಸಾಧ್ಯತೆಗಳಿವೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ನಂತರದ ಕ್ರಮಾಂಕದಲ್ಲಿ ಆಡಲಿದ್ದಾರೆ. ರಾಹುಲ್ ಹಾಗೂ ಪಂತ್ ನಡುವೆ 5ನೇ ಕ್ರಮಾಂಕಕ್ಕೆ ಪೈಪೋಟಿ ಏರ್ಪಡಲಿದೆ. ಹಾರ್ದಿಕ್ ಪಾಂಡ್ಯ ಮೂರನೇ ವೇಗಿ ಎನಿಸಿದರೆ, ಗಾಯದಿಂದ ಮರಳಿರುವ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ಟಿ20 ಸರಣಿಯ ಹೀರೋ ವರುಣ್ ಚಕ್ರವರ್ತಿ ನಡುವೆ 2 ಸ್ಪಿನ್ನರ್‌ಗಳ ಸ್ಥಾನಕ್ಕೆ ಚತುಷ್ಕೋನ ಸ್ಪರ್ಧೆಯಿದೆ. ಬುಮ್ರಾ ಗೈರಿನಲ್ಲಿ ಮೊಹಮದ್ ಶಮಿ, ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದಾರೆ.
ಇಂಗ್ಲೆಂಡ್: ಪಂದ್ಯಕ್ಕೆ ಮುನ್ನಾ ದಿನವೇ ಇಂಗ್ಲೆಂಡ್ ಆಡುವ 11ರ ಬಳಗವನ್ನು ಹೆಸರಿಸಿದೆ. ಅನುಭವಿ ಜೋ ರೂಟ್ ಸೇರ್ಪಡೆ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದೆ. 2023ರ ವಿಶ್ವಕಪ್ ನಂತರ ಮೊದಲ ಬಾರಿಗೆ ರೂಟ್ ಏಕದಿನ ಆಡಲಿದ್ದಾರೆ. ಉಳಿದಂತೆ ಟಿ20 ಸರಣಿಯಲ್ಲಿ ಆಡಿದ ಬಹುತೇಕ ಆಟಗಾರರು ಕಣಕ್ಕಿಳಿಯಲಿದ್ದಾರೆ. ಜೇಮಿ ಸ್ಮಿತ್ ಸ್ನಾಯುಸೆಳೆತದಿಂದ ಬಳಲುತ್ತಿದ್ದು ಸರಣಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಹೊಸ ಜೆರ್ಸಿಯಲ್ಲಿ ಆಟ
ಭಾರತ ತಂಡದ ಆಟಗಾರರು ಏಕದಿನ ಸರಣಿಯಲ್ಲಿ ನೂತನ ಜೆರ್ಸಿಯಲ್ಲಿ ಆಡಲಿದ್ದಾರೆ. ಇದೇ ಜೆರ್ಸಿಯನ್ನು ಚಾಂಪಿಯನ್ಸ್ ಟ್ರೋಫಿಯಲ್ಲೂ ಧರಿಸಲಿದ್ದಾರೆ ಎನ್ನಲಾಗಿದೆ. ಜೆರ್ಸಿಯಲ್ಲಿ ಭುಜದ ವಿನ್ಯಾಸಗಳನ್ನು ಇಂದುಗೊಳಿಸಲಾಗಿದ್ದು (ಅಪ್ಡೇಟ್), ಹಿಂದಿನ ಜೆರ್ಸಿಯಲ್ಲಿದ್ದ ಸಂಪೂರ್ಣ ಕೇಸರಿ ಬಣ್ಣವನ್ನು ಕೈಬಿಟ್ಟು ಭಾರತದ ಧ್ವಜವನ್ನು ಪ್ರತಿನಿಧಿಸುವ ತ್ರಿವರ್ಣ ಪಟ್ಟೆಗಳನ್ನು ಸೇರಿಸಲಾಗಿದೆ. ಭುಜದ ಮೇಲಿನ ಬಿಳಿ ಗೆರೆಗಳನ್ನು ಉಳಿಸಿಕೊಳ್ಳಲಾಗಿದ್ದು, ತೋಳು ಪಟ್ಟಿಗಳಿಗೆ ಕೇಸರಿ ಬದಲಿಗೆ ಗಾಢ ನೀಲಿ ಬಣ್ಣಗಳನ್ನು ಸೇರಿಸಲಾಗಿದೆ. ಎರಡು ವಿಶ್ವಕಪ್ (1983, 2011) ಗೆಲುವಿನ ಪ್ರತೀಕವಾಗಿ ಎದೆ ಭಾಗದಲ್ಲಿ ಬಿಸಿಸಿಐ ಲಾಂಛನದ ಮೇಲೆ ಎರಡು ಸ್ಟಾರ್‌ಗಳಿವೆ.
94: ವಿರಾಟ್ ಕೊಹ್ಲಿ ಪಂದ್ಯದಲ್ಲಿ 94 ರನ್ ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಪೂರೈಸಿದ 3ನೇ ಬ್ಯಾಟರ್ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್ (18,426) ಮತ್ತು ಕುಮಾರ ಸಂಗಕ್ಕರ (14,234) ಮೊದಲಿಬ್ಬರು ಸಾಧಕರಾಗಿದ್ದಾರೆ.
134: ರೋಹಿತ್ ಶರ್ಮ ಸರಣಿಯಲ್ಲಿ 134 ರನ್ ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 11 ಸಾವಿರ ರನ್ ಪೂರೈಸಿದ 4ನೇ ಭಾರತೀಯ ಬ್ಯಾಟರ್ ಎನಿಸಲಿದ್ದಾರೆ. ಸಚಿನ್, ಕೊಹ್ಲಿ ಮತ್ತು ಸೌರವ್ ಗಂಗೂಲಿ (11,363) ಮೊದಲ ಮೂವರು.