

ಕೊಲಂಬೊ: ನಾಯಕ ರೋಹಿತ್ ಶರ್ಮ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೋಡಿ 9 ತಿಂಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದೆ. ಆತಿಥೇಯ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ಗೆಲುವಿನ ಆರಂಭದ ನಿರೀಕ್ಷೆಯಲ್ಲಿದೆ. ನಾಯಕ-ಕೋಚ್ ಆಗಿ ರೋಹಿತ್ ಶರ್ಮ-ಗೌತಮ್ ಗಂಭೀರ್ ಜೋಡಿಗೆ ಇದು ಮೊದಲ ಸರಣಿ ಎನಿಸಿದೆ.
ಟಿ20 ಸರಣಿ ಕ್ಲೀನ್‌ಸ್ವೀಪ್‌ನೊಂದಿಗೆ ಗಂಭೀರ್ ಕೋಚ್ ಆಗಿ ಯಶಸ್ವಿ ಆರಂಭ ಕಂಡಿದ್ದು, ಏಕದಿನದಲ್ಲೂ ಅಜೇಯ ಓಟ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ರೋಹಿತ್ ಹಾಗೂ ವಿರಾಟ್ ಕೊಹ್ಲಿ ಸೇರ್ಪಡೆ ಬಲ ತುಂಬಲಿದೆ. ಕನ್ನಡಿಗ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಮರಳಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ. 2023ರ ಏಕದಿನ ವಿಶ್ವಕಪ್ ಪೈನಲ್ ಪಂದ್ಯದ ಬಳಿಕ ರೋಹಿತ್-ವಿರಾಟ್ ಮೊದಲ ಬಾರಿಗೆ ಏಕದಿನದಲ್ಲಿ ಕಾಣಿಸಿಕೊಳ್ಳಲಿದ್ದು, ಟೀಮ್ ಇಂಡಿಯಾ ಪಾಲಿಗೆ ಹಾಲಿ ವರ್ಷದ ಮೊದಲ ಏಕದಿನ ಪಂದ್ಯ ಎನಿಸಿದೆ.
2025ರ ಚಾಂಪಿಯನ್ಸ್ ಟ್ರೋಫಿ ಹಾಗೂ 2027ರ ಏಕದಿನ ವಿಶ್ವಕಪ್‌ಗೆ ರೋಹಿತ್ ಸಾರಥ್ಯದಲ್ಲಿ ತಂಡವನ್ನು ಕಟ್ಟುವುದು ಗಂಭೀರ್‌ಗೆ ನೈಜ ಪರೀಕ್ಷೆಯಾಗಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಕಳೆದ ವರ್ಷ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಮತ್ತೊಮ್ಮೆ ಮಧ್ಯ ಕ್ರಮಾಂಕದ ಆಧಾರ ಸ್ತಂಭ ಎನಿಸಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ರಾಹುಲ್-ಶ್ರೇಯಸ್ ಟೀಮ್ ಇಂಡಿಯಾ ಪರ ಕೊನೆಯದಾಗಿ ಏಕದಿನ ಪಂದ್ಯವನ್ನಾಡಿದ್ದರು. ಆಗ ರಾಹುಲ್ ತಂಡದ ಸಾರಥ್ಯ ವಹಿಸಿದ್ದರು. ರಿಷಭ್ ಪಂತ್ ಗೈರಿನಲ್ಲಿ ಬ್ಯಾಟಿಂಗ್ ಹಾಗೂ ಕೀಪಿಂಗ್ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದ ರಾಹುಲ್, ಈ ಬಾರಿ ತಂಡದಲ್ಲಿ ಸ್ಥಾನ ಪಡೆಯಲು ಪಂತ್ ಅವರೊಂದಿಗೆ ಪೈಪೋಟಿಗೆ ಇಳಿಯಲಿದ್ದಾರೆ. ಭೀಕರ ಕಾರು ಅಪಘಾತದ ಬಳಿಕ ಪಂತ್‌ಗೂ ಮೊದಲ ಏಕದಿನ ಸರಣಿ ಇದಾಗಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವೈಯಕ್ತಿಕ ಕಾರಣದಿಂದ ಸರಣಿಯಿಂದ ಬ್ರೇಕ್ ಪಡೆದಿದ್ದಾರೆ. ಕಾಯಂ ಉಪನಾಯಕ ಶುಭಮಾನ್ ಗಿಲ್‌ಗೆ ನಾಯಕ ರೋಹಿತ್ ಜತೆಯಾಗಿ ಮೊದಲ ಸವಾಲು ಎನಿಸಿದೆ.
ಟೀಮ್ ನ್ಯೂಸ್
ಭಾರತ: ಪುನರಾಗಮನ ಮಾಡಿರುವ ರೋಹಿತ್ ಜತೆಯಾಗಿ ಶುಭಮಾನ್ ಗಿಲ್ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವ ಸಾಧ್ಯತೆಗಳಿವೆ. ಬುಮ್ರಾ ಗೈರಿನಲ್ಲಿ ಸಿರಾಜ್ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದು, ಅರ್ಷದೀಪ್ ಸಾಥ್ ನೀಡಲಿದ್ದಾರೆ. ಮೂರನೇ ವೇಗಿ ಸ್ಥಾನಕ್ಕೆ ಹರ್ಷಿತ್ ರಾಣಾ-ಖಲೀಲ್ ಅಹ್ಮದ್ ನಡುವೆ ಪೈಪೋಟಿ ಇದೆ. ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್-ರಿಷಭ್ ಪಂತ್ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಸವಾಲಿದೆ. ಪಂದ್ಯಕ್ಕೆ ಮುನ್ನ ವಿಕೆಟ್ ಕೀಪರ್ ಬಗ್ಗೆ ನಿರ್ಧರಿಸಲಾಗುವುದು ಎಂದು ರೋಹಿತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಭಾವ್ಯ ತಂಡ: ರೋಹಿತ್ ಶರ್ಮ(ನಾಯಕ) ಶುಭಮಾನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್/ರಿಷಭ್ ಪಂತ್ (ವಿ.ಕೀ), ಅಕ್ಷರ್ ಪಟೇಲ್, ರಿಯಾನ್ ಪರಾಗ್/ಶಿವಂ ದುಬೆ, ಕುಲದೀಪ್ ಯಾದವ್, ಮೊಹಮದ್ ಸಿರಾಜ್, ಅಷದೀಪ್ ಸಿಂಗ್, ಖಲೀಲ್ ಅಹ್ಮದ್/ಹರ್ಷಿತ್ ರಾಣಾ.
ಶ್ರೀಲಂಕಾ: ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿರುವ ತಂಡ. ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಬ್ಯಾಟಿಂಗ್ ಅವಶ್ಯ. ಪ್ರಮುಖ ವೇಗಿಗಳಾದ ಮಥಿಶ ಪಥಿರಣ ಮತ್ತು ದಿಲ್ಶಾನ್ ಮಧುಶಂಕ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಟಿ20 ಸರಣಿ ವೈಟ್‌ವಾಷ್ ಮುಖಭಂಗದ ಬಳಿಕ ತಂಡಕ್ಕೆ ಪ್ರಮುಖ ಹಿನ್ನಡೆ ಎನಿಸಿದೆ.
ಸಂಭಾವ್ಯ ತಂಡ: ಚರಿತ್ ಅಸಲಂಕಾ (ನಾಯಕ), ಪಥುಮ್ ನಿಸ್ಸಂಕ, ಕುಸಲ್ ಮೆಂಡಿಸ್, ಸಧೀರ ಸಮರವಿಕ್ರಮ, ಕಮಿಂಡು ಮೆಂಡಿಸ್, ಜನಿತ್ ಲಿಯಾಂಗೆ, ವಾನಿಂದು ಹಸರಂಗ, ಚಮಿಕಾ ಕರುಣರತ್ನೆ/ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಇಶಾನ್ ಮಲಿಂಗ/ಮುಹಮದ್ ಶಿರಾಜ್, ಅಸಿತಾ ೆರ್ನಾಂಡೊ.
ಮುಖಾಮುಖಿ: 168
ಭಾರತ: 99
ಶ್ರಿಲಂಕಾ: 57
ರದ್ದು: 11
ಟೈ: 1
ಆರಂಭ: ಮಧ್ಯಾಹ್ನ 2.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್